ಬೆಂಗಳೂರು: ರಾಜಧಾನಿಯ ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe Blast) ಬಾಂಬ್ ಸ್ಪೋಟಿಸಿದ (Blast in Bengaluru) ಪ್ರಕರಣ ಸಂಬಂಧ ಪ್ರಧಾನ ಆರೋಪಿ, ಬಾಂಬ್ ಇಟ್ಟು ತಲೆ ಮರೆಸಿಕೊಂಡು ಓಡಾಡುತ್ತಿದ್ದ ಪಾತಕಿ ಹಾಗೂ ಇದರ ಹಿಂದಿನ ಮಾಸ್ಟರ್ ಮೈಂಡ್ ಬಂಧನವಾಗಿದೆ. ಇವರು ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಕಡೆ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಕೊನೆಗೆ ಖಚಿತ ಮಾಹಿತಿ ಮೇರೆಗೆ ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ. ಒಬ್ಬ ಉಗ್ರನ ಹುಡುಕಾಟದಲ್ಲಿದ್ದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ – NIA) ತಂಡಕ್ಕೆ ಇಬ್ಬರು ಸೆರೆಸಿಕ್ಕಂತೆ ಆಗಿದೆ.
ಪಾತಕಿ ಮುಸಾವೀರ್ ಶಾಜೀಬ್ ಹುಸೇನ್ (mussavir shazeeb hussain) ಹಾಗೂ ಬಾಂಬ್ ಇಡುವ ಪ್ಲ್ಯಾನ್ ರೂಪಿಸಿದ್ದ ಪ್ರಧಾನ ಸೂತ್ರಧಾರಿ ಅಬ್ದುಲ್ ಮತೀನ್ ತಾಹಾನನ್ನು (Abdul Mateen Taha) ರಾಷ್ಟ್ರೀಯ ತನಿಖಾ ದಳ (ಎನ್‌ಐಎ – NIA) ಬಂಧಿಸಿದೆ.
ಈ ಇಬ್ಬರು ಬೆಂಗಳೂರಿನಲ್ಲಿ ಸ್ಫೋಟದ ಬಳಿಕ ಬೇರೆ ಬೇರೆ ಮಾರ್ಗವಾಗಿ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಕಡೆ ಹೋಗಿ ತಲೆಮರೆಸಿಕೊಂಡಿದ್ದರು. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಮನೆಯೊಂದರಲ್ಲಿ ಇವರು ವಾಸವಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಅಲ್ಲಿನ ಸ್ಥಳೀಯ ಪೊಲೀಸರು ನೀಡಿದ್ದಾರೆ. ಈ ಮಾಹಿತಿಯನ್ವಯ ಎನ್‌ಐಎ ತಂಡ ದಾಳಿ ನಡೆಸಿದ್ದು, ಬಾಂಬರ್ ಸಹಿತ ಸ್ಫೋಟದ ಮಾಸ್ಟರ್ ಮೈಂಡ್ ಅನ್ನು ಸಹ ಬಂಧಿಸಿದೆ.
ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದರು!
ಪಾತಕಿ ಮುಸಾವೀರ್ ಶಾಜೀಬ್ ಹುಸೇನ್ ಹಾಗೂ ಅಬ್ದುಲ್ ಮತೀನ್ ತಾಹಾ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ತಲೆಮರೆಸಿಕೊಂಡು ಓಡಾಡುತ್ತಿದ್ದರು ಎಂದು ತಿಳಿದು ಬಂದಿದೆ. ಕರ್ನಾಟಕ, ಪಶ್ಚಿಮ ಬಂಗಾಳ, ಕೇರಳ, ತೆಲಂಗಾಣ ಪ್ರದೇಶಗಳಲ್ಲಿ ಜಾಲಾಡಿದ್ದ ಎನ್‌ಐಎ, ಸ್ಥಳೀಯ ಪೊಲೀಸರ ನೆರವನ್ನು ಪಡೆದುಕೊಂಡಿತ್ತು. ಇವರ ಫೋಟೊಗಳನ್ನು ಹಂಚಿಕೊಂಡು ಎಲ್ಲ ಕಡೆ ಶೋಧ ಕಾರ್ಯ ನಡೆಸಲಾಗಿತ್ತು. ಕೊನೆಗೆ ಕೋಲ್ಕತ್ತದಲ್ಲಿ ಮನೆಯೊಂದರಲ್ಲಿ ಅಡಗಿ ಕುಳಿತಿದ್ದರು ಎಂಬ ಮಾಹಿತಿ ಸ್ಥಳೀಯ ಪೊಲೀಸರಿಗೆ ಲಭ್ಯವಾಗಿದೆ. ಅವರಿಂದ ಮಾಹಿತಿ ಪಡೆದ ಎನ್‌ಐಎ ಅಧಿಕಾರಿಗಳು ಬೆಳಗಿನ ದಾಳಿ ನಡೆಸಿ ಬಂಧಿಸಿದ್ದಾರೆ.
ಹೇಗಿತ್ತು ಎನ್‌ಐಎ ಕಾರ್ಯಾಚರಣೆ?
ಬಾಂಬ್ ಇಟ್ಟಿದ್ದ ಪಾತಕಿ ಉಗ್ರ ಮುಸಾವೀರ್ ಶಾಜೀಬ್ ಹುಸೇನ್‌ನನ್ನು ಈಗ ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ. ಬಾಂಬ್ ಇಟ್ಟಿದ್ದ ಉಗ್ರನ ಬೆನ್ನು ಹತ್ತಿ ತಮಿಳುನಾಡು, ಒಡಿಶಾ, ಅಸ್ಸಾಂ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಲ್ಲಿ ಓಡಾಡಿದ್ದ ಎನ್‌ಐಎ, ಅವರ ಇರುವಿಕೆಯ ಸ್ಥಳಗಳನ್ನು ಪತ್ತೆ ಹಚ್ಚಿ ಹೋಗುವುದರೊಳಗೆ ಅವರು ಅಲ್ಲಿಂದ ಎಸ್ಕೇಪ್ ಆಗಿ ಬಿಡುತ್ತಿದ್ದರು. ಆದರೆ, ಇದಕ್ಕೂ ಮೊದಲೇ ಬಂಧಿಸಲಾಗಿದ್ದ ಶಾಜೀನ್ ಹುಸೇನ್‌ನಿಂದ ಕೆಲವೊಂದಿಷ್ಟು ಮಾಹಿತಿಯನ್ನು ಕಲೆ ಹಾಕಲಾಗಿತ್ತು. ಅದು ಸಹ ಕಾರ್ಯಾಚರಣೆಗೆ ಸಹಾಯಕ್ಕೆ ಬಂದಿದೆ ಎನ್ನಲಾಗಿದೆ.
ಚುರುಕಾಗಿ ಪತ್ತೆ ಹಚ್ಚಿದ್ದ NIA
“ಮುಸಾವೀರ್ ಹುಸೇನ್ ಶಾಜಿಬ್‌ನೇ (Mussavir Hussain Shazib) ರಾಮೇಶ್ವರಂ ಕೆಫೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಿಸಿದ್ದು” ಎಂಬುದಾಗಿ ಎನ್‌ಐಎ ಪ್ರಕಟಣೆ ತಿಳಿಸಿತ್ತು. “ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನಾದ ಮುಸಾವೀರ್ ಹುಸೇನ್ ಶಾಜಿಬ್ ಬಾಂಬಿಟ್ಟವನು ಎಂದು ತನಿಖೆಯಿಂದ ಗೊತ್ತಾಗಿದೆ. ಅಬ್ದುಲ್ ಮಥೀನ್ ತಾಹಾ ಎಂಬುವವನು ಕೂಡ ಪ್ರಕರಣದಲ್ಲಿ ಪ್ರಮುಖ ಪಿತೂರಿದಾರನಾಗಿದ್ದಾನೆ. ಮುಜಾಮಿಲ್ ಷರೀಫ್‌ನು ಬಾಂಬ್ ತಯಾರಿಸಲು ಇವರಿಗೆ ಹಲವು ವಸ್ತುಗಳನ್ನು ಪೂರೈಕೆ ಮಾಡಿದ್ದಾನೆ ಎಂಬುದು ತನಿಖೆಯ ವೇಳೆ ಬಹಿರಂಗವಾಗಿದೆ. ಮುಜಾಮಿಲ್ ಷರೀಫ್‌ನನ್ನು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಮಾಡಲಾಗುತ್ತಿದೆ” ಎಂದು ಎನ್‌ಐಎ ಪ್ರಕಟಣೆ ತಿಳಿಸಿತ್ತು.
ಮಾರ್ಚ್ 1ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನ ಬ್ರೂಕ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಒಂಬತ್ತು ಜನರು ಗಾಯಗೊಂಡಿದ್ದರು. ಮತ್ತೊಂದೆಡೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಮೊಬೈಲ್ ಅಂಗಡಿಯೊಂದಕ್ಕೆ ಕೆಲ ದಿನಗಳ ಹಿಂದೆ ಭೇಟಿ ನೀಡಿದ್ದ ಎನ್‌ಐಎ ಅಧಿಕಾರಿಗಳು, ಹಿಂದು ಕಾರ್ಯಕರ್ತ ಸೇರಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಬಾಂಬಿಟ್ಟವನಿಗೆ ವಿದೇಶದಿಂದ ಹಣ, ಸ್ಫೋಟಕ ಮಾಹಿತಿ ಬಯಲು!
ಸುದ್ಗುಂಟೆಪಾಳ್ಯದ ಗುರಪ್ಪನಪಾಳ್ಯದಲ್ಲಿ ಉಗ್ರ ಮುಜಾವೀರ್ ಹುಸೇನ್ ನೆಲಸಿದ್ದ. ಎನ್‌ಐಎ ದಾಳಿ ನಡೆಸಿದಾಗ 10ಕ್ಕೂ ಹೆಚ್ಚು ಜೀವಂತ ಗುಂಡುಗಳು, ಒಂದು ಗನ್, ಡಿಟೋನೇಟರ್ ಹಾಗೂ ಕಚ್ಚಾ ಬಾಂಬ್ ತಯಾರಿಕೆಗೆ ಬೇಕಾದ ವಸ್ತುಗಳನ್ನು ಸೀಜ್ ಮಾಡಲಾಗಿತ್ತು. 2020ರಂದು ಎನ್‌ಐಎ ದಾಳಿ ನಡೆಸಿತ್ತು. ಅಂದಿನಿಂದ ಮುಜಾವಿರ್ ಹುಸೇನ್ ತಲೆಮರೆಸಿಕೊಂಡಿದ್ದ. ಈತನಿಗೆ ಸಹಾಯ ಮಾಡಿರುವ ಹಿನ್ನೆಲೆಯಲ್ಲಿ ಮುಜಾಮಿಲ್ ಶರೀಫ್‌ನನ್ನು ಬಂಧನ ಮಾಡಲಾಗಿತ್ತು.
ಮುಜಾಮಿಲ್ ಶರೀಫ್ ಇದ್ದ ನಿವಾಸದ ಮೇಲೆ ದಾಳಿ ನಡೆಸಿ ಡಿಜಿಟಲ್ ಡಿವೈಸ್, ನಗದನ್ನು ವಶಕ್ಕೆ ಪಡೆಯಲಾಗಿತ್ತು. ಈತ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದ ಮೋಸ್ಟ್ ವಾಂಟೆಡ್ ಅಬ್ದುಲ್ ಮತೀನ್ ಜತೆಗೆ ನಿರಂತರ ಸಂಪರ್ಕದಲ್ಲಿದ್ದ. ಅಬ್ದುಲ್ ಮತೀನ್ ನೇರವಾಗಿ ಹೊರದೇಶದ ಹ್ಯಾಂಡ್ಲರ್‌ಗಳ ಜತೆಗೆ ಸಂಪರ್ಕವನ್ನು ಹೊಂದಿದ್ದ. ಅಲ್ಲದೆ, ಶಾರೀಖ್, ಮಾಜ್ ಮುನೀರ್ ಅಹಮದ್ ಮತ್ತು ಸೈಯದ್ ಯಾಸಿನ್ ಜತೆಗೂ ಈತ ಸಂಪರ್ಕ ಸಾಧಿಸಿದ್ದ ಎಂದು ತಿಳಿದುಬಂದಿದೆ.