Site icon Vistara News

Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟ ಕೇಸ್; ಜೈಲಲ್ಲೇ ಕುಳಿತು ಸ್ಕೆಚ್‌ ಹಾಕಿದ್ದ ಮೊದಲ ಆರೋಪಿ!

Rameshwaram Cafe Blast NIA tracks down first accused

ಬೆಂಗಳೂರು: ರಾಜ್ಯ ರಾಜಧಾನಿಯ ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe Blast) ನಡೆಸಿದ ಬಾಂಬ್‌ ಸ್ಫೋಟ (Blast in Bengaluru) ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಗಳು ಹೊರಬೀಳುತ್ತಲೇ ಇದೆ. ಈ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ಕೈವಾಡ ಇರುವುದು ಬಯಲಾಗಿದೆ. ಮಾಜ್ ಮುನೀರ್ (Maj Muneer) ಎಂಬಾತನ ಹೆಸರು ಸೇರ್ಪಡೆಗೊಂಡಿದೆ. ಆದರೆ, ಈತ ಜೈಲಿನಲ್ಲಿದ್ದುಕೊಂಡೇ ಬ್ಲಾಸ್ಟ್‌ಗೆ ಸ್ಕೆಚ್‌ ಹಾಕಿದ್ದ ಎಂಬ ಮಾಹಿತಿ ಈಗ ಗೊತ್ತಾಗಿದೆ.

ಇದುವರೆಗೂ ಮುಸಾವೀರ್ ಹುಸೇನ್ ಶಾಜಿಬ್, ಅಬ್ದುಲ್ ಮತೀನ್ ತಾಹ ಹಾಗೂ ಮುಜಾಮಿಲ್ ಷರೀಫ್ ಹೆಸರುಗಳು ಮಾತ್ರವೇ ಇತ್ತು. ಈಗ ಪ್ರಕರಣದಲ್ಲಿ ನಾಲ್ಕನೇ ಆರೋಪಿ ಯಾರೆಂಬುದು ಗೊತ್ತಾಗಿದೆ. ಆದರೆ, ಈ ಮಾಜ್ ಮುನೀರ್ ಪ್ರಕರಣದ ಮೊದಲ ಆರೋಪಿ ಎಂದು ಎನ್‌ಐಎ ಕಂಡುಹಿಡಿದಿದೆ.

ಮಂಗಳೂರು ಗೋಡೆ ಬರಹ ಪ್ರಕರಣ ಹಾಗೂ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಆರೋಪಿ ಮಾಜ್ ಮುನೀರ್‌ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದಲ್ಲೂ ಮಾಜ್ ಮುನೀರ್ ಕೈವಾಡ ಇರುವುದು ತನಿಖೆ ವೇಳೆ ಗೊತ್ತಾಗಿದೆ.

ಬ್ಲಾಸ್ಟ್‌ ಪ್ರಕರಣದ ಮೊದಲ ಆರೋಪಿ ಮಾಜ್ ಮುನೀರ್

ಈಗ ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣದಲ್ಲಿ ಮಾಜ್ ಮುನೀರ್‌ನನ್ನು ಮೊದಲ ಆರೋಪಿಯನ್ನಾಗಿ ಮಾಡಿರುವ ಎನ್‌ಐಎ, ಎರಡನೇ ಆರೋಪಿಯಾಗಿ ಅಬ್ದುಲ್ ಮತೀನ್ ತಾಹ, ಮೂರನೇ ಆರೋಪಿಯಾಗಿ ಮುಸಾವೀರ್ ಹುಸೇನ್ ಶಾಜಿಬ್ ಹಾಗೂ ಮುಜಾಮಿಲ್ ಷರೀಫ್‌ನನ್ನು ನಾಲ್ಕನೆಯ ಆರೋಪಿಯನ್ನಾಗಿ ಪ್ರಕರಣ ದಾಖಲು ಮಾಡಿದೆ. ಹೀಗಾಗಿ ಈ ಸ್ಫೋಟ ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮೂವರಿಗೆ ನಂಟು ಇದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಕೆಫೆಯಲ್ಲಿ ಬಾಂಬಿಟ್ಟವ ಮುಸಾವೀರ್‌ ಹುಸೇನ್

ಕೆಫೆಯಲ್ಲಿ ಬಾಂಬಿಟ್ಟವನು ಯಾರು ಎಂಬುದನ್ನು ಕೊನೆಗೂ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪತ್ತೆಹಚ್ಚಿದೆ. “ಮುಸಾವೀರ್‌ ಹುಸೇನ್‌ ಶಾಜಿಬ್‌ನೇ (Mussavir Hussain Shazib) ರಾಮೇಶ್ವರಂ ಕೆಫೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಿಸಿದ್ದು” ಎಂಬುದಾಗಿ ಎನ್‌ಐಎ ಪ್ರಕಟಣೆ ತಿಳಿಸಿದೆ.

“ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನಾದ ಮುಸಾವೀರ್‌ ಹುಸೇನ್‌ ಶಾಜಿಬ್‌ ಬಾಂಬಿಟ್ಟವನು ಎಂಬುದಾಗಿ ತನಿಖೆಯಿಂದ ಗೊತ್ತಾಗಿದೆ. ಅಬ್ದುಲ್‌ ಮಥೀನ್‌ ತಾಹಾ ಎಂಬುವನು ಕೂಡ ಪ್ರಕರಣದಲ್ಲಿ ಪ್ರಮುಖ ಪಿತೂರಿದಾರನಾಗಿದ್ದಾನೆ. ಮುಜಾಮಿಲ್‌ ಷರೀಫ್‌ನು ಬಾಂಬ್‌ ತಯಾರಿಸಲು ಇವರಿಗೆ ಹಲವು ವಸ್ತುಗಳನ್ನು ಪೂರೈಕೆ ಮಾಡಿದ್ದಾನೆ ಎಂಬುದು ತನಿಖೆಯ ವೇಳೆ ಬಹಿರಂಗವಾಗಿದೆ. ಮುಜಾಮಿಲ್‌ ಷರೀಫ್‌ನನ್ನು ಪೊಲೀಸ್‌ ಕಸ್ಟಡಿಯಲ್ಲಿ ವಿಚಾರಣೆ ಮಾಡಲಾಗುತ್ತಿದೆ” ಎಂದು ಎನ್‌ಐಎ ಪ್ರಕಟಣೆ ತಿಳಿಸಿದೆ. ಮುಸಾವೀರ್‌ ಹುಸೇನ್‌ ಶಾಜಿಬ್‌ ಹಾಗೂ ಈತನಿಗೆ ನೆರವು ನೀಡಿದ ಅಬ್ದುಲ್‌ ಮಥೀನ್‌ ತಾಹಾ ತಲೆಮರೆಸಿಕೊಂಡಿದ್ದು, ಇವರಿಗಾಗಿ ಬಲೆ ಬೀಸಲಾಗಿದೆ.

ಹಿಂದು ಕಾರ್ಯಕರ್ತರ ವಿಚಾರಣೆ

ಮಾರ್ಚ್‌ 1ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಮೊಬೈಲ್ ಅಂಗಡಿಯೊಂದಕ್ಕೆ ಶುಕ್ರವಾರ ಭೇಟಿ ನೀಡಿದ್ದ ಎನ್‌ಐಎ ಅಧಿಕಾರಿಗಳು, ಹಿಂದು ಕಾರ್ಯಕರ್ತ ಸೇರಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಹಿಂದು ಕಾರ್ಯಕರ್ತ ಸಾಯಿ ಪ್ರಸಾದ್ ಹಾಗೂ ಮೊಬೈಲ್ ಅಂಗಡಿ ಮಾಲೀಕನನ್ನು ಎನ್‌ಐಎ ವಶಕ್ಕೆ ಪಡೆದಿದ್ದು, ಇಬ್ಬರನ್ನೂ ಪ್ರಕರಣದ ಸಾಕ್ಷಿಗಳನ್ನಾಗಿ ಮಾಡಲು ವಿಚಾರಣೆ ಮಾಡಲಾಗುತ್ತಿದೆ. ಕಳೆದ 10 ದಿನಗಳ ಹಿಂದೆ ಮೊಬೈಲ್‌ ಅಂಗಡಿಯ ಇಬ್ಬರು ಯುವಕರನ್ನು ಎನ್‌ಐಎ ವಿಚಾರಣೆ ನಡೆಸಿತ್ತು. ಇದೀಗ ಅವರ ಜತೆ ಸಂಪರ್ಕ ಇದ್ದ ಕಾರಣಕ್ಕೆ ಹಿಂದು ಕಾರ್ಯಕರ್ತನನ್ನೂ ವಿಚಾರಣೆಗೆ ಒಳಪಡಿಸಿರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟ ಕೇಸ್‌; ಹಿಂದು ಕಾರ್ಯಕರ್ತನನ್ನು ಎನ್‌ಐಎ ವಿಚಾರಣೆ ಮಾಡಿದ್ದು ಯಾಕೆ?

ಸಾಯಿ ಪ್ರಸಾದ್ ಹಳೆಯ ಮೊಬೈಲ್ ಅನ್ನು ಮೊಬೈಲ್ ಅಂಗಡಿ ಮಾಲೀಕನಿಗೆ ಮಾರಾಟ ಮಾಡಿದ್ದ. ಇದನ್ನು ಅಂಗಡಿ ಮಾಲೀಕ ಚಿಕ್ಕಮಗಳೂರಿನ ಮುಜಾಮಿಲ್‌ಗೆ ಮಾರಾಟ ಮಾಡಿದ್ದ. ಇದೇ ಮೊಬೈಲ್‌ನಲ್ಲಿ ಮುಜಾಮಿಲ್ ತಲೆ ಮರೆಸಿಕೊಂಡ ಆರೋಪಿಗಳಾದ ಅಬ್ದುಲ್ ಮತೀನ್ ತಾಹ ಹಾಗೂ ಮುಸಾವೀರ್ ಹುಸೇನ್ ಜತೆ ಸಂಪರ್ಕ ಹೊಂದಿದ್ದ. ಮುಜಾಮಿಲ್ ಬಂಧನದ ವೇಳೆ ಎನ್‌ಐಎ ಮೊಬೈಲ್ ವಶಪಡಿಸಿಕೊಂಡಿತ್ತು. ಪರಿಶೀಲನೆ ವೇಳೆ ಆ ಮೊಬೈಲ್‌ ಸಾಯಿ ಪ್ರಸಾದ್‌ಗೆ ಸೇರಿದ್ದು ಎಂಬ ಮಾಹಿತಿ ಸಿಕ್ಕಿದೆ. ಇದೇ ಕಾರಣಕ್ಕೆ ಇಬ್ಬರನ್ನೂ ವಿಚಾರಣೆ ನಡೆಸಲಾಗಿದೆ.

Exit mobile version