ಬೆಂಗಳೂರು: ಮೇ 19ರ ತಡರಾತ್ರಿ ಎಲೆಕ್ಟ್ರಾನಿಕ್ ಸಿಟಿಯ (electronic city) ಫಾರಂ ಹೌಸ್‌ನಲ್ಲಿ (Farm house) ನಡೆದಿದ್ದ ರೇವ್ ಪಾರ್ಟಿಯಲ್ಲಿ (Rave party) ತೆಲುಗು ನಟಿಯರಾದ ಹೇಮಾ (Telugu actress Hema) ಹಾಗೂ ಆಶಿ ರಾಯ್ (Aashi Roy) ಒಳಗೊಂಡಂತೆ 103 ಮಂದಿ ಭಾಗಿಯಾಗಿದ್ದರು. ಇಲ್ಲಿ ಮಾದಕ ವಸ್ತುಗಳನ್ನು ಸೇವನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಅಷ್ಟೂ ಮಂದಿಯನ್ನು ತಪಾಸಣೆಗೊಳಪಡಿಸಲಾಗಿತ್ತು. ಈಗ ವೈದ್ಯಕೀಯ ವರದಿ ಬಂದಿದ್ದು, ಅವರಲ್ಲಿ 86 ಮಂದಿಯ ರಿಪೋರ್ಟ್ ಪಾಸಿಟಿವ್ ಬಂದಿದೆ. ನಟಿಯರಾದ ಹೇಮಾ ಹಾಗೂ ಆಶಿ ರಾಯ್ ಸಹ ಮಾದಕ ವಸ್ತುಗಳನ್ನು ಸೇವಿಸಿದ್ದಾರೆಂಬುದು ಸಾಬೀತಾಗಿವೆ ಎನ್ನಲಾಗಿದೆ.
ಈಗಾಗಲೇ ಪಾರ್ಟಿ ಮಾಡಿದ ಐವರನ್ನು ಬಂಧಿಸಲಾಗಿದೆ. 73 ಮಂದಿ ಪುರುಷರಲ್ಲಿ 59 ಮಂದಿ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿದ್ದರೆ, 30 ಮಂದಿ ಯುವತಿಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಹೀಗಾಗಿ ಪಾರ್ಟಿಯಲ್ಲಿ ಸೇರಿದ್ದ ಬಹುತೇಕ ಮಂದಿ ಮಾದಕ ವಸ್ತು ಸೇವನೆ ಮಾಡಿದ್ದಾರೆ.
ವಾಸು ಎಂಬಾತನ ಬರ್ತ್ ಡೇ ಪಾರ್ಟಿಗಾಗಿ ಏರ್ಪಡಿಸಲಾಗಿದ್ದ ಈ ರೇವ್ ಪಾರ್ಟಿಯಲ್ಲಿ ದೊಡ್ಡ ಮಟ್ಟದ ಮಾದಕ ವಸ್ತು ಬಳಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ದೊಡ್ಡ ಪ್ರಮಾಣದಲ್ಲಿ ಎಂಡಿಎಂಎ, ಕೊಕೇನ್, ಹೈಡ್ರೋ ಗಾಂಜಾ ಪತ್ತೆಯಾಗಿದ್ದವು.
Sunset To Sun Rise victory ಶೀರ್ಷಿಕೆಯಲ್ಲಿ ಈ ರೇವ್ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು. ಪಾರ್ಟಿಯಲ್ಲಿ ಸುಮಾರು ನೂರೈವತ್ತು ಮಂದಿ ಸೇರಿದ್ದರು. ಪೊಲೀಸ್ ದಾಳಿ ವೇಳೆ ಕೆಲವರು ತಪ್ಪಿಸಿಕೊಂಡು ಓಡಿದ್ದರು. ಆದರೆ, ಬಹುತೇಕ ಮಂದಿ ಸಿಕ್ಕಿಬಿದ್ದಿದ್ದರು. ಈಗ ಸಿಕ್ಕಿಬಿದ್ದವರಲ್ಲಿ ಬಹುತೇಕರ ಬ್ಲಡ್ ರಿಪೋರ್ಟ್‌ನಲ್ಲಿ ಮಾದಕ ವಸ್ತು ಸೇವನೆ ಸಂಬಂಧ ಪಾಸಿಟಿವ್ ಅಂಶ ಪತ್ತೆಯಾಗಿದೆ. ಹೀಗಾಗಿ ಪಾಸಿಟಿವ್ ರಿಪೋರ್ಟ್ ಬಂದವರಿಗೆ ಸಿಸಿಬಿ ನೋಟಿಸ್ ನೀಡಲಿದ್ದು, ಅವರನ್ನು ಕರೆಸಿ ವಿಚಾರಣೆ ನಡೆಸಲಾಗುತ್ತದೆ.
ʼರೇವ್ ಪಾರ್ಟಿಯಲ್ಲಿ ನಾನಿಲ್ಲʼ ಎಂದು ವಿಡಿಯೋ ಮಾಡಿದ್ದ ಹೇಮಾ!
ಈ ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಭಾಗಿಯಾಗಿದ್ದು, ಪೊಲೀಸ್ ವಶದಲ್ಲಿದ್ದಾರೆ ಎಂದು ಸುದ್ದಿಯಾಗಿದ್ದಂತೆ ವಿಡಿಯೊವೊಂದನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ಹೇಮಾ, ನಾನು ಆ ರೇವ್ ಪಾರ್ಟಿಯಲ್ಲಿ ಭಾಗಿಯಾಗಲೇ ಇಲ್ಲ. ಹೈದರಾಬಾದ್‌ನ ಫಾರ್ಮ್ ಹೌಸ್‌ನಲ್ಲಿದ್ದೇನೆ ಎಂದು ವಿಡಿಯೊ ಸಂದೇಶವನ್ನು ಹರಿಬಿಟ್ಟಿದ್ದರು. ಆದರೆ, ಮುಜುಗರ ತಪ್ಪಿಸಲು ಅವರು ಅದೇ ಫಾರಂ ಹೌಸ್‌ನ ಒಂದು ಕಡೆ ಬಂದು ವಿಡಿಯೊ ಮಾಡಿದ್ದಾರೆ ಎಂದು ಹಲವರು ಅಂದೇ ಹೇಳಿದ್ದರು. ಹೆಬ್ಬಗೋಡಿ ಫಾರ್ಮ್ ಹೌಸ್ ಒಳಗಡೆಯೇ ವಿಡಿಯೋ ಮಾಡಿ, ತಾನು ಹೈದರಾಬಾದ್ ಫಾರ್ಮ್ ಹೌಸ್‌ನಲ್ಲಿದ್ದೀನಿ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಹಲವರು ವಾದಿಸಿದ್ದರು. ಈಗ ಈ ಸಂಬಂಧ ಪೊಲೀಸರಿಗೆ ಬಂದಿರುವ ರಿಪೋರ್ಟ್ ವೈರಲ್ ಆಗಿದ್ದು, ಅವರು ಸಹ ಮಾದಕ ವಸ್ತು ಸೇವನೆ ಮಾಡಿರುವುದು ಸಾಬೀತಾಗಿದೆ ಎಂದು ತಿಳಿದುಬಂದಿದೆ.
రేవ్ పార్టీలో తాను ఉన్నట్లు వస్తున్న వార్తలను ఖండించిన నటి హేమ
— Aadhan Telugu (@AadhanTelugu) May 20, 2024
బెంగళూరులో జరిగిన రేవ్ పార్టీలో నేను లేను.. నేను హైదరాబాద్లోనే ఫామ్ హౌస్లో ఎంజాయ్ చేస్తున్నా. బెంగళూరు రేవ్ పార్టీతో నాకు సంబంధం లేదు – నటి హేమ#Tollywood #RaveParty #Bangalore #Actress #Hema #ActressHema… pic.twitter.com/Wibo416DNK
ಕಮೋಡ್‌ನಲ್ಲಿ ಫ್ಲಶ್ ಮಾಡಿದರು!
ಸಿಸಿಬಿ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಪಾರ್ಟಿ ಆಯೋಜಕರು ಸ್ಥಳದ ಡೋರ್‌ಲಾಕ್ ಮಾಡಿಕೊಂಡಿದ್ದಲ್ಲದೆ, ಎಂಡಿಎಂಎ ಮತ್ತು ಇನ್ನಿತರೆ ಮಾದಕ ವಸ್ತುಗಳನ್ನು ಸಿಕ್ಕಸಿಕ್ಕಲ್ಲಿ ಎಸೆದಿದ್ದರು. ಪೊಲೀಸರು ಎಂದು ಗೊತ್ತಾಗುತ್ತಿದ್ದಂತೆ ಓಡಿಹೋಗಲು ಯತ್ನಿಸಿದ್ದರು. ಡ್ರಗ್ಸ್ ಅನ್ನು ಬಾತ್ ರೂಂನ ಕಮೋಡ್‌ನಲ್ಲಿ ಹಾಕಿ ಫ್ಲಶ್ ಮಾಡಿದ್ದರು.. ಪೊಲೀಸರು ಬಲವಂತವಾಗಿ ಡೋರ್ ತೆಗಿಸಿ ಒಳಹೋಗಿದ್ದು, ಫಾರ್ಮ್ ಹೌಸ್‌ನ ಇಂಚಿಂಚನ್ನೂ ಜಾಲಾಡಿದ್ದರು.
3 ಜನ ಡ್ರಗ್ ಪೆಡ್ಲರ್‌ಗಳು, ಆಯೋಜಕ ವಾಸು ಸೇರಿ ಐದು ಜನರನ್ನು ಅಂದೇ ಪೊಲೀಸರು ಬಂಧಿಸಿದ್ದರು. ಪಾರ್ಟಿಯಲ್ಲಿ ಡ್ರಗ್ ಪೆಡ್ಲರ್‌ಗಳೂ ಭಾಗಿಗಳಾಗಿದ್ದರು. ಇವರು ಯಥೇಚ್ಛವಾಗಿ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದರು. ವಾಸು ಹುಟ್ಟಿದ ಹಬ್ಬಕ್ಕೆ ಪಾರ್ಟಿ ಆಯೋಜಿಸಿದ ಆರ್ಗನೈಸರ್ ಅರುಣ್, ಸಿದ್ಧಿಕಿ, ರಣಬೀರ್, ನಾಗಬಾಬುರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಮಾದಕ ವಸ್ತು ಸಿಕ್ಕಿದಂತಹ ಐಷಾರಾಮಿ ಮರ್ಸಿಡಿಸ್ ಬೆಂಜ್, ರೇಂಜ್ ರೋವರ್, ಆಡಿ ಕಾರುಗಳನ್ನು ವಶಕ್ಕೆ ಪಡೆಯಲಾಗಿತ್ತು.
ಎಂಟ್ರಿಗೆ ಪಾಸ್‌ವರ್ಡ್ ನೀಡಿದ್ದ ವಾಸು
ಪಾರ್ಟಿ ಆಯೋಜಕ, ಆರೋಪಿ ವಾಸು ಪೊಲೀಸರಿಂದ ಬಚಾವಾಗಲು ʼನಾನು ಪಾರ್ಟಿಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅನುಮತಿ ಪಡೆದಿದ್ದೇನೆಂದುʼ ಸುಳ್ಳು ಹೇಳಿಕೆ ನೀಡಿದ್ದ. ಆದರೆ, ಫಾರ್ಮ್ ಹೌಸ್ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ. ಪಾರ್ಟಿಗೆ ಬಂದವರು ಫಾರ್ಮ್ ಹೌಸ್ ಒಳಗೆ ಹೋಗಬೇಕಾದರೆ ಸೆಕ್ಯೂರಿಟಿಗೆ ಪಾಸ್ ವರ್ಡ್ ಹೇಳಬೇಕಿತ್ತು. ವಾಸು ನೀಡಿದ ಪಾಸ್‌ವರ್ಡ್ ಹೇಳಿದರೆ ಮಾತ್ರ ಒಳಗೆ ಎಂಟ್ರಿಯಾಗಬಹುದಿತ್ತು. ಡ್ರಗ್ ಪಾರ್ಟಿ ಹಿನ್ನೆಲೆಯಲ್ಲಿ ಬೇರೆ ಯಾರೂ ಬಾರದಿರಲಿ ಎಂಬ ಕಾರಣಕ್ಕೆ ವಾಸು ಪಾಸ್‌ವರ್ಡ್ ನೀಡಿದ್ದ.
ಮಾದಕ ವಸ್ತುಗಳ ವಶಕ್ಕೆ
ಫಾರಂ ಹೌಸ್‌ನಲ್ಲಿ ಸದ್ಯ ಭಾರಿ ಪ್ರಮಾಣದಲ್ಲಿ ಎಂಡಿಎಂಎ, ಕ್ಯಾಪ್ಸೂಲ್, ಕೊಕೇನ್ ಇತ್ಯಾದಿ ಮಾದಕ ವಸ್ತುಗಳು ದೊರೆತಿದ್ದವು. 45 ಗ್ರಾಂನಷ್ಟು ಡ್ರಗ್ ವಶಕ್ಕೆ ಪಡೆಯಲಾಗಿತ್ತು. 1 ಗ್ರಾಂ ಕೊಕೇನ್‌ಗೆ 8ರಿಂದ 9 ಸಾವಿರ ರೂ. ದರವಿದೆ. ಇಂತಹ ಕೊಕೇನ್ ಭಾರಿ ಪ್ರಮಾಣದಲ್ಲಿ ಪಾರ್ಟಿಯಲ್ಲಿ ಪತ್ತೆಯಾಗಿದೆ. ಸದ್ಯ ಸಿಕ್ಕಿರುವ ಡ್ರಗ್ಸ್‌ನ ಮೌಲ್ಯ ಪರಿಶೀಲನೆಯನ್ನು ಸಿಸಿಬಿ ನಡೆಸುತ್ತಿದೆ.
ಇದನ್ನೂ ಓದಿ: Prajwal Revanna Case: ತಾಳ್ಮೆ ಪರೀಕ್ಷಿಸಬೇಡ, ಈಗಲೇ ಬಂದು ಶರಣಾಗು; ಪ್ರಜ್ವಲ್‌ಗೆ ದೇವೇಗೌಡರ ವಾರ್ನಿಂಗ್
ನಟಿ ಆಶಿ ರಾಯ್ ಹೇಳಿದ್ದೇನು?
ಈ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆಶಿ ರಾಯ್ ಸಹ ವಿಡಿಯೊವೊಂದನ್ನು ಮಾಡಿ ಸ್ಪಷ್ಟನೆ ನೀಡಿದ್ದಾರೆ. ʻʻಅದೊಂದು ಬರ್ತ್‌ಡೇ ಪಾರ್ಟಿಯಾಗಿತ್ತು. ಒಳಗೆ ಏನು ನಡೀತಿತ್ತು ಎಂದು ಗೊತ್ತಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ದಯವಿಟ್ಟು ನೀವೆಲ್ಲ ನನ್ನ ಬೆಂಬಲಿಸಿ. ನಾನು ಕಷ್ಟಪಟ್ಟು ಉದ್ಯಮದಲ್ಲಿ ಬೆಳೆಯುತ್ತಿರುವ ಹುಡುಗಿ. ದಯವಿಟ್ಟು ನನಗೆ ಸಹಾಯ ಮಾಡಿʼʼ ಎಂದು ವಿಡಿಯೊವನ್ನು ಹಂಚಿಕೊಂಡಿದ್ದರು. ಆಶಿ ರಾಯ್ ಹಲವು ಸಂದರ್ಶನದಲ್ಲಿ ಪಾರ್ಟಿಯಲ್ಲಿ ಹೇಮಾ ಅವರನ್ನು ನೋಡಿಲ್ಲ ಎಂದಿದ್ದಾರೆ. ಆಶಿರಾಯ್ ಅವರು ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.