ಬೆಂಗಳೂರು: ಮೇ 19ರ ತಡರಾತ್ರಿ ಎಲೆಕ್ಟ್ರಾನಿಕ್ ಸಿಟಿಯ (Electronic city) ಫಾರಂ ಹೌಸ್‌ನಲ್ಲಿ (Farm house) ನಡೆದಿದ್ದ ರೇವ್ ಪಾರ್ಟಿಯಲ್ಲಿ (Rave party) ಕೇಸ್‌ಗೆ ಸಂಬಂಧಪಟ್ಟಂತೆ ತೆಲುಗು ನಟಿ ಹೇಮಾ (Telugu actress Hema) ಸೇವನೆ ಡ್ರಗ್ಸ್ ಸೇವನೆ ಮಾಡಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ಆದರೆ, ಇನ್ನೊಬ್ಬ ನಟಿ ಆಶಿ ರಾಯ್ (Aashi Roy) ಅವರ ರಿಪೋರ್ಟ್ ನೆಗೆಟಿವ್ ಬಂದಿದೆ ಎಂದು ಹೇಳಲಾಗಿದೆ.
ರೇವ್ ಪಾರ್ಟಿಯಲ್ಲಿ ಇಬ್ಬರು ತೆಲುಗು ನಟಿಯರು ಭಾಗಿ ವಿಚಾರವು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ವೇಳೆ 103 ಮಂದಿ ಭಾಗಿಯಾಗಿದ್ದ 103 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಪ್ರಮುಖವಾಗಿ ನಟಿಯರಾದ ಹೇಮಾ ಮತ್ತು ಆಶಿ ರಾಯ್ ಇದ್ದರು. ಈಗ ಹೇಮಾ ವರದಿ ಪಾಸಿಟಿವ್ ಬಂದರೆ, ಆಶಿ ರಾಯ್ ಅವರದ್ದು ನೆಗೆಟಿವ್ ಬಂದಿದೆ.
ನಟಿ ಹೇಮಾ ಸೇವಿಸಿರೋದು ಯಾವ ಡ್ರಗ್ಸ್?
ನಟಿ ಹೇಮಾ ಯಾವ ಡ್ರಗ್ಸ್ ಸೇವಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಅವರು ಎಂಡಿಎಂಎ ಎಂಬ ಡ್ರಗ್ಸ್ ಅನ್ನು ಸೇವನೆ ಮಾಡಿದ್ದರು ಎಂದು ವರದಿ ಹೇಳುತ್ತಿದೆ. ಮಾತ್ರೆ ರೂಪದಲ್ಲಿ ಇರುವ ಈ ಡ್ರಗ್ಸ್ ಅನ್ನು ಪಾರ್ಟಿಯಲ್ಲಿ ನೀಡಲಾಗಿತ್ತು. ಹೇಮಾ ಅವರು ಈ ಎಂಡಿಎಂಎ ಮಾತ್ರೆಯನ್ನು ತೆಗೆದುಕೊಂಡಿದ್ದಾರೆ ಎಂಬುದು ಗೊತ್ತಾಗಿದೆ.
ಸದ್ಯ ಈ ಪಾರ್ಟಿಯನ್ನು ಆಯೋಜನೆ ಮಾಡಿರುವ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆ ಐವರನ್ನು ಈಗ ವಶಕ್ಕೆ ಪಡೆದುಕೊಳ್ಳಲು ಸಿಸಿಬಿ ಅರ್ಜಿ ಸಲ್ಲಿಸಲು ಮುಂದಾಗಿದೆ. ಅವರನ್ನು ಮತ್ತಷ್ಟು ವಿಚಾರಣೆಗೊಳಪಡಿಸಲು ಪ್ಲ್ಯಾನ್ ಮಾಡಿದ್ದು, ಈ ಡ್ರಗ್ಸ್‌ಗಳು ಎಲ್ಲಿಂದ ಬಂದವು? ಯಾರು ವಿತರಣೆ ಮಾಡುತ್ತಿದ್ದಾರೆ? ಇದರ ಜಾಲ ಯಾವುದು? ಎಂಬಿತ್ಯಾದಿ ಅಂಶಗಳನ್ನು ಬಯಲಿಗೆಳೆಯಲು ತಯಾರಿ ನಡೆಸಲಾಗಿದೆ.
ಬಿಲ್ಡಪ್ ಕೊಡಲು ಹೋಗಿ ಲಾಕ್ ಆದ ತೆಲುಗು ನಟಿ ಹೇಮಾ!
ರೇವ್ ಪಾರ್ಟಿಗೆ ಸಂಬಂಧಪಟ್ಟಂತೆ ತೆಲುಗು ನಟಿ ಹೇಮಾ ಅವರು ಪೊಲೀಸರ ಮುಂದೆ ಬಿಲ್ಡಪ್ ಕೊಡಲು ಹೋಗಿ ಲಾಕ್ ಆಗಿದ್ದಾರೆ ಎಂಬ ಸಂಗತಿ ಗೊತ್ತಾಗಿದೆ. ನಾನು ತೆಲುಗಿನ ಫೇಮಸ್ ನಟಿ ಎಂದು ಹೇಳಿಕೊಂಡಿದ್ದೇ ಅವರಿಗೆ ಮುಳುವಾಗಿದೆ ಎನ್ನಲಾಗಿದೆ.
ನಗರದ ಹೊರವಲಯದಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಅಪಾರ ಪ್ರಮಾಣದ ಮಾದಕ ವಸ್ತು ಸಿಕ್ಕಿರುವ ಕೇಸ್‌ನ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಎರಡು ದಿನ ಎಗ್ಗಿಲ್ಲದೆ ಪಾರ್ಟಿ ನಡೆದಿದೆ. ಹೀಗಾಗಿ ಆ ಜೋಶ್‌ನಲ್ಲಿದ್ದ ನಟಿ ಹೇಮಾ ಅವರು ಪೊಲೀಸರು ದಾಳಿ ಮಾಡಿದ ವೇಳೆ ತಮ್ಮ ಬಗ್ಗೆ ಹೇಳಿಕೊಂಡು ಸರಿಯಾಗಿ ಸಿಕ್ಕಿಬಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ತಾವು ದೊಡ್ಡ ಹಳ್ಳ ತೋಡಿ ಬಚಾವ್ ಆಗುತ್ತೇನೆ ಎಂದು ಮಾಡಿದ ಪ್ಲ್ಯಾನ್ ಫ್ಲಾಪ್ ಆಗಿದ್ದು, ಆ ಹಳ್ಳಕ್ಕೆ ಅವರೇ ಬಿದ್ದಂತೆ ಆಗಿದೆ.
ಅಸಲಿಗೆ ಸಿಸಿಬಿ ಪೊಲೀಸರಿಗೆ ಹೇಮಾ ಒಬ್ಬರು ನಟಿ ಎಂಬುದೇ ಗೊತ್ತಾಗಿರಲಿಲ್ಲ. ಸಾಮಾನ್ಯವಾಗಿ ಎಲ್ಲರನ್ನು ವಿಚಾರಣೆ ನಡೆಸುವಂತೆಯೇ ಹೇಮಾರನ್ನೂ ವಿಚಾರಿಸುತ್ತಿದ್ದರು. ಈ ವೇಳೆ ಪೊಲೀಸರರ ಮುಂದೆ ಹೇಮಾ ನಾನು ದೊಡ್ಡ ನಟಿ ಇದ್ದೇನೆ. ಸಾವಿರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ಆಗ ಪೊಲೀಸರು ಪರಿಶೀಲನೆ ಮಾಡಿದಾಗ ಆಕೆ ನಟಿ ಅನ್ನೋದು ಗೊತ್ತಾಗಿದೆ.
ಕಿರಿಕ್ ಮಾಡಿದ್ದ ನಟಿ ಹೇಮಾ
ಜಿಆರ್ ಫಾರ್ಮ್ ಹೌಸ್‌ನಲ್ಲಿ ಶನಿವಾರ ರಾತ್ರಿಯಿಂದಲೇ ರೇವ್ ಪಾರ್ಟಿ ಶುರುವಾಗಿತ್ತು ಎಂಬುದು ಗೊತ್ತಾಗಿದೆ. ಒಂದು ದಿನ ಪಾರ್ಟಿ ಆದ ಬಳಿಕ ಸಿಸಿಬಿ ಪೊಲೀಸರಿಗೆ ವಿಚಾರ ತಿಳಿದು ರೈಡ್ ಮಾಡಲಾಗಿದೆ. ಇದರ ಜತೆಗೆ ಸಿಸಿಬಿ ಪೊಲೀಸರೊಂದಿಗೆ ನಟಿ ಹೇಮಾ ಕಿರಿಕ್ ಮಾಡಿದ್ದಾರೆ. ವಿಚಾರಣೆಗೆಂದು ಪೊಲೀಸರು ಇರಿಸಿಕೊಂಡಿದ್ದಾಗ ಕಿರಿಕ್ ತೆಗೆದು, ನನಗೆ ಸರಿಯಾದ ಊಟ ಕೊಟ್ಟಿಲ್ಲ. ನಾನೊಬ್ಬ ನಟಿ ಸರಿಯಾಗಿ ಟ್ರೀಟ್ ಮಾಡಿ ಎಂದು ಆಕ್ರೋಶ ಹೊರಹಾಕಿದ್ದರು ಎಂದು ತಿಳಿದುಬಂದಿದೆ.
ರೇವ್ ಪಾರ್ಟಿ ಕೇಸ್; ಹೆಬ್ಬಗೋಡಿ ಠಾಣೆಯ ಎಎಸ್‌ಐ ಸೇರಿ ಮೂವರ ಸಸ್ಪೆಂಡ್
ರೇವ್ ಪಾರ್ಟಿಗೆ ಸಂಬಂಧಪಟ್ಟಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿನ ಎಎಸ್ಐ ಸೇರಿ ಮೂವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ. ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ ಅವರು ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ರೇವ್ ಪಾರ್ಟಿ ಬಗ್ಗೆ ಮಾಹಿತಿ ಕಲೆ ಹಾಕಲು ವಿಫಲವಾಗಿರುವ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಇದೇ ವೇಳೆ ಡಿವೈಎಸ್ಪಿ ಹಾಗೂ ಇನ್ಸ್‌ಪೆಕ್ಟರ್‌ಗಳಿಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಚಾರ್ಜ್ ಮೆಮೋ ನೀಡಿದ್ದು, ಇಷ್ಟೆಲ್ಲ ಆಗುತ್ತಿದ್ದರೂ ನಿಮ್ಮ ಗಮನಕ್ಕೆ ಯಾಕೆ ಬಂದಿಲ್ಲ? ಇದಕ್ಕೆ ಕಾರಣ ನೀಡಿ ಎಂದು ವಿವರಣೆಯನ್ನು ಕೇಳಿದ್ದಾರೆ. ಡಿವೈಎಸ್ಪಿ ಹಾಗೂ ಇನ್ಸ್‌ಪೆಕ್ಟರ್ ಅವರ ಉತ್ತರ ಆಧರಿಸಿ ಅವರ ಮೇಲೂ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: Couples Fight: ಗಂಡ-ಹೆಂಡಿರ ಜಗಳ ಪೊಲೀಸ್ ಸ್ಟೇಷನ್ ಗ್ಲಾಸ್ ಪೀಸ್ ಪೀಸ್ ಆಗುವ ತನಕ!
ಠಾಣೆಯ ಎಸ್.ಬಿ. ಗಿರೀಶ್, ಎಎಸ್ಐ ನಾರಾಯಣ ಸ್ವಾಮಿ ಮತ್ತು ಬೀಟ್ ಕಾನ್ಸ್‌ಟೇಬಲ್ ದೇವರಾಜು ಅಮಾನತಾದವರು. ಸಿಸಿಬಿ ಪೊಲೀಸರಿಗೆ ಸಿಕ್ಕ ಮಾಹಿತಿ ಸ್ಥಳೀಯ ಪೊಲೀಸರಿಗೆ ಯಾಕೆ ಇರಲಿಲ್ಲ ಎಂದು ಪ್ರಶ್ನೆ ಮಾಡಲಾಗಿದ್ದು, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.