Site icon Vistara News

RD Patil : PSI ಹಗರಣದ ಮಾಸ್ಟರ್‌ ಮೈಂಡ್‌, KEA ಅಕ್ರಮದಲ್ಲೂ ಕಿಂಗ್‌ಪಿನ್‌! ಯಾರೀತ ಆರ್‌.ಡಿ ಪಾಟೀಲ್‌?

RD Patil Examination scam

ಬೆಂಗಳೂರು: ತಮಗೊಂದು ಸರ್ಕಾರಿ ಹುದ್ದೆ (Government Post) ಸಿಗಬೇಕು ಅನ್ನೋದು ಹಲವರ ಕನಸಾಗಿರುತ್ತದೆ. ಇದೇ ಕಾರಣಕ್ಕೆ ಅದೆಷ್ಟೋ ಜನ ಕಷ್ಟಪಟ್ಟು ಓದಿ ಸರ್ಕಾರ ಕಾಲಕಾಲಕ್ಕೆ ನಡೆಸುವ ಪರೀಕ್ಷೆಗೆ ಸಿದ್ಧರಾಗುತ್ತಾರೆ. ವರ್ಷವಿಡೀ ಶ್ರಮ ಹಾಕಿ ಪರೀಕ್ಷೆಗೆ ತಯಾರಿ ಮಾಡ್ತಾರೆ. ಹತ್ತಾರು ಕನಸುಗಳನ್ನು ಕಟ್ಟಿಕೊಂಡು, ನೂರಾರು ನಿರೀಕ್ಷೆಗಳನ್ನು ಇಟ್ಟುಕೊಂಡ ಪರೀಕ್ಷೆ ಬರೀತಾರೆ. ಆದರೆ ಅವರು ಕನಸು ಭಗ್ನವಾಗೋ ರೀತಿಯಲ್ಲಿ ಅಕ್ರಮದ ಘಾಟು. ಯಾರದ್ದೋ ಹಣದ ದಾಹದ ಮೇಲಾಟವೇ ಅಲ್ಲಿ ನಡೆದರೆ ಪ್ರಾಮಾಣಿಕವಾಗಿ ಓದಿದವರ ಮನಸ್ಥಿತಿ ಯಾವ ಹಂತಕ್ಕೆ ಹೋಗಬಹುದು ಅನ್ನೋದು ಊಹಿಸೋದಕ್ಕೂ ಕಷ್ಟ.

ರಾಜ್ಯದಲ್ಲಿ ಮತ್ತೊಮ್ಮೆ ಪರೀಕ್ಷಾ ಅಕ್ರಮದ (Examination Scam) ವಿಚಾರಗಳು ಸುದ್ದಿ ಆಗ್ತಿದೆ. ಅಕ್ಟೋಬರ್‌ 28, 29ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority-KEA) ವಿವಿಧ ಇಲಾಖೆಗಳ ನೇಮಕಾತಿಯ ಪರೀಕ್ಷೆಗೆ ದಿನಾಂಕವನ್ನು ನಿಗದಿ ಮಾಡಿತ್ತು. ಮೊದಲ ದಿನ ಅಕ್ಟೋಬರ್‌ 28ರಂದು ಈ ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ನಡೆಯಬಾರದು ಅನ್ನೋ ಕಾರಣಕ್ಕೆ ಬಿಗಿ ಬಂದೋಬಸ್ತ್‌ನಲ್ಲಿ ರಾಜ್ಯಾದಾದ್ಯಂತ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಇನ್ನೇನು ಎಲ್ಲವೂ ಸುಸೂತ್ರವಾಗಿದೆ ಅನ್ನೋ ಹೊತ್ತಲ್ಲಿ, ಸರ್ಕಾರಿ ಹುದ್ದೆಯ ಕನಸು ಕಟ್ಟಿಕೊಂಡು ಪರೀಕ್ಷೆ ಬರೆದಿದ್ದ ಪರೀಕ್ಷಾರ್ಥಿಗಳಿಗೆ ಶಾಕ್‌ ಎದುರಾಗಿತ್ತು.

RD Patil Examination scam

ಕಳೆದ ವರ್ಷ ದೊಡ್ಡ ಸಂಚಲನಕ್ಕೆ ಕಾರಣವಾಗಿದ್ದ ಪಿಎಸ್‌ಐ ಹಗರಣ ಮಾಸುವ ಮುನ್ನವೇ ಕೆಇಎ ಪರೀಕ್ಷೆಯಲ್ಲಿಯೂ ಅಂತಹದ್ದೇ ಅಕ್ರಮ ನಡೆದಿದೆ ಅನ್ನೋ ವಿಚಾರ ಬೆಳಕಿಗೆ ಬಂದಿತ್ತು. ಥೇಟ್‌ ಪಿಎಸ್‌ಐ ಪರೀಕ್ಷಾ ಹಗರಣದಲ್ಲಿ ಹೇಗೆ ಬ್ಲೂಟೂತ್‌ ಬಳಸಿ ಅಕ್ರಮ ನಡೆದಿತ್ತೋ ಹಾಗೇ ಈ ಪರೀಕ್ಷೆಯಲ್ಲಿಯೂ ಫ್ರಾಡ್‌ ನಡೆದಿದೆ ಅನ್ನೋ ಸಂಗತಿ ಹೊರಬಿದ್ದಿತ್ತು.

ಆ ರೀತಿಯಲ್ಲಿ ಅಡ್ಡ ಮಾರ್ಗದ ಮೂಲಕ ಸರ್ಕಾರಿ ಹುದ್ದೆಯನ್ನು ಗಿಟ್ಟಿಸಿಕೊಳ್ಳುವುದಕ್ಕೆ ಮುಂದಾಗಿದ್ದವರು ರೆಡ್‌ ಹ್ಯಾಂಡ್‌ ಆಗಿಯೇ ಸಿಕ್ಕಿ ಬಿದ್ದಿದ್ದರು. ಹೀಗಾಗಿ ಪೊಲೀಸರು ಅಕ್ರಮದ ಬೆನ್ನಟ್ಟಿ ಹೋಗುವುದಕ್ಕೆ ಮುಂದಾದರು. ಒಂದಿಷ್ಟು ಆರೋಪಿಗಳನ್ನು ಅರೆಸ್ಟ್‌ ಮಾಡಿ ಪ್ರಕರಣದ ತನಿಖೆಯ ಆಳಕ್ಕೆ ಇಳಿದರು. ಹಲವರ ಮೇಲೆ ಕೇಸ್‌ ದಾಖಲಾಗಿ 10ಕ್ಕೂ ಹೆಚ್ಚು ಜನರನ್ನ ಪೊಲೀಸರು ಸದ್ಯ ಹೆಡೆಮುರಿ ಕಟ್ಟಿದ್ದಾರೆ. ಇಡೀ ಪ್ರಕರಣಕ್ಕೆ ಸಂಬಂಧಿದಂತೆ ಖಾಕಿಪಡೆ ತನಿಖೆ ನಡೆಸುತ್ತಾ ಹೋದಂತೆ ಪ್ರಕರಣದ ಸೂತ್ರಧಾರರು ಯಾರು ಅನ್ನೋ ಬಗ್ಗೆ ತೀವ್ರ ವಿಚಾರಣೆಗೆ ಒಳ ಪಡಿಸಲಾಯ್ತು. ಆರೋಪಿಗಳು ಬಾಯಿ ಬಿಟ್ಟಿದ್ದು ಕಿಂಗ್‌ಪಿನ್‌, ಡೀಲ್‌ ಕಿಂಗ್‌ ಹೆಸರನ್ನು.

ಆರ್‌ ಡಿ ಪಾಟೀಲ್‌ ಎಂಬ ಖದೀಮ

ಖಾಕಿಯಿಂದ ಬಂಧಿತರಾದವರು ಬಾಯಿ ಬಿಟ್ಟದ್ದು ಈ ಹಿಂದೆಯೂ ಪರೀಕ್ಷಾ ಅಕ್ರಮಗಳಲ್ಲಿ ಕೇಳಿ ಬಂದಿದ್ದ ಅದೇ ಆರ್‌.ಡಿ ಪಾಟೀಲ್‌ ಹೆಸರು. ಪಿಎಸ್‌ಐ ಹಗರಣದ ಮಾಸ್ಟರ್‌ ಮೈಂಡ್‌ ಆಗಿದ್ದ ಈತ ಮಾಡಿದ ತಪ್ಪಿಗೆ ಮೂರು ತಿಂಗಳು ಜೈಲು ಸೇರಿದ್ದ. ಸೆರೆ ವಾಸ ಅನುಭವಿಸಿದ್ದರೂ ಬುದ್ಧಿ ಕಲಿತಿರಲಿಲ್ಲ. ಮತ್ತದೇ ಚಾಳಿ ಮುಂದುವರಿಸಿದ್ದ.

ಈ ಪ್ರಕರಣದ ಕಿಂಗ್ ಪಿನ್ ಆರ್‌.ಡಿ. ಪಾಟೀಲ್‌ ಅಂತ ಆರೋಪಿಗಳು ಬಾಯ್ಬಿಟ್ಟಿದ್ದೇ ತಡ. ಇಡೀ ಪ್ರಕರಣ ಕುರಿತಂತೆ ಬೆಚ್ಚಿ ಬೀಳಿಸುವ ವಿಚಾರಗಳು ಬಯಲಾಗಿದೆ. ಕೆಇಎ ಹಗರಣ ಡೀಲ್‌ ನಡೆದಿದ್ದು ಆರ್‌.ಡಿ ಪಾಟೀಲ್‌ ಮನೆಯಿಂದಲೇ ಎನ್ನುವ ವಿಚಾರಗಳು ಹೊರ ಬಿದ್ದಿವೆ. ಮಾತ್ರವಲ್ಲದೇ ಉದ್ಯೋಗದ ಮಹತ್ವಾಕಾಂಕ್ಷೆ ಹೊಂದಿದ್ದವರನ್ನೇ ತನ್ನ ಡೀಲ್‌ಗೆ ದಾಳ ಮಾಡಿಕೊಂಡಿದ್ದ ಈತ ಒಂದೊಂದು ಅಭ್ಯರ್ಥಿಗಳಿಂದ 20ರಿಂದ 25 ಲಕ್ಷ ರೂ.ಯನ್ನು ವಸೂಲಿ ಮಾಡುತ್ತಿದ್ದನಂತೆ. ಅಭ್ಯರ್ಥಿಗಳಿಂದ ಹಣ ಪಡೆದು ಆತ ಅತ್ಯಾಧುನಿಕ ಬ್ಲೂಟೂತ್‌ ಡಿವೈಸ್‌ಗಳನ್ನು ನೀಡುತ್ತಿದ್ದ. ಇದೇ ಡಿವೈಸ್‌ನಿಂದ ಈತನ ಸ್ಕ್ಯಾಂ ನಡೆಯುತ್ತಿತ್ತು.

300- 400 ಡಿವೈಸ್‌ ಖರೀದಿ ಮಾಡಿದ್ದ ಆರ್‌.ಡಿ ಪಾಟೀಲ್‌

ಪರೀಕ್ಷೆಯಲ್ಲಿ ಅಕ್ರಮ ನಡೆಸುವುದಕ್ಕಾಗಿಯೇ ಈತ ಏಕಕಾಲಕ್ಕೆ 300- 400 ಅತ್ಯಾಧುನಿಕ ಬ್ಲೂಟೂತ್‌ ಡಿವೈಸ್ ಗಳನ್ನು ಖರೀದಿಸಿದ್ದ. ಈ ಪರಿಯಲ್ಲಿ ಡೀಲ್‌ ಕುದುರಲು ಆರ್‌.ಡಿ. ಪಾಟೀಲ್‌ ಈ ಹಿಂದೆ ನಡೆಸಿದ್ದ ಪರೀಕ್ಷೆಗಳ ಅಕ್ರಮವೂ ಕಾರಣ ಎನ್ನಲಾಗುತ್ತಿದೆ. ಪಿಎಸ್‌ಐ ನೇಮಕಾತಿ ಹಗರಣದಿಂದ ಪಡೆದ ಕುಖ್ಯಾತಿಯೇ ಕೆಇಎ ಹಗರಣ ನಡೆಯುವುದಕ್ಕೆ ಕಾರಣವಾಯ್ತು ಎನ್ನಲಾಗುತ್ತದೆ. ಈ ಹಗರಣದಲ್ಲಿನ ಕುಖ್ಯಾತಿಯೇ ಕೆಇಎ ಪರೀಕ್ಷಾರ್ಥಿಗಳು ಆರ್‌ ಡಿ ಪಾಟೀಲ್‌ ಮನೆ ಬಾಗಿಲು ತಟ್ಟುವುದಕ್ಕೆ ಕಾರಣವಾಯ್ತು. ಸರ್ಕಾರಿ ಉದ್ಯೋಗದ ಆಸೆಯಿಂದ ಈತನನ್ನು ಹುಡುಕಿಕೊಂಡು ಬಂದು ಬ್ಲೂಟೂತ್‌ ಡಿವೈಸ್‌ಗಾಗಿ ಲಕ್ಷ ಲಕ್ಷ ಕೊಟ್ಟು ಡೀಲ್‌ ನಡೆಸಿದ್ದರು ಎನ್ನಲಾಗುತ್ತಿದೆ.

ಪೊಲೀಸ್‌ ದಾಳಿ ವೇಳೆ ತಪ್ಪಿಸಿಕೊಳ್ಳುತ್ತಿರುವ ಆರ್‌.ಡಿ ಪಾಟೀಲ್‌

ಪೊಲೀಸರಿಗೇ ಸತಾಯಿಸಿದ ಚಾಲಾಕಿ ಕ್ರಿಮಿನಲ್

ಬಂಧನ ಮಾಡೋದಕ್ಕೆ ಮುಂದಾಗಿದ್ದ ಪೊಲೀಸರ ಕೈಗೆ ಸಿಗದೇ ಸತಾಯಿಸುತ್ತಿದ್ದ. ಆತ ಎಲ್ಲಿದ್ದಾನೆ ಎನ್ನುವ ಸುಳಿವೂ ಕೂಡ ಆರಂಭದಲ್ಲಿ ಪೊಲೀಸರಿಗೆ ಅಷ್ಟು ಸುಲಭಕ್ಕೆ ಸಿಕ್ಕಿರಲಿಲ್ಲ. ಯಾರ ಭಯವೂ ಇಲ್ಲದಂತೆ ರಾಜಾರೋಷವಾಗಿ ಓಡಾಡಿಕೊಂಡಿದ್ದ ಈತ ಪೊಲೀಸರು ತಾನಿರುವ ಜಾಗದ ಮೇಲೆ ರೇಡ್‌ ಮಾಡ್ತಾರೆ ಅಂತ ತಿಳಿದು ಎಸ್ಕೇಪ್‌ ಆಗಿದ್ದಾನೆ.

ಕಲಬುರಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ವರ್ಧಾ ಅಪಾರ್ಟ್ಮೆಂಟ್‌ನಲ್ಲೇ ಈತ ಉಳಿದುಕೊಂಡಿದ್ದ. ಹರಸಾಹಸ ಪಟ್ಟು ಪೊಲೀಸರು ಈ ವಿಷಯ ತಿಳಿದು ಅಪಾರ್ಟ್‌ಮೆಂಟ್‌ ಮೇಲೆ ರೇಡ್‌ ಮಾಡೋದಕ್ಕೆ ಮುಂದಾಗಿದ್ದರು. ಆದರೆ ಅದ್ಹೇಗೋ ಈ ದಾಳಿಯ ವಿಚಾರದ ಸುಳಿವು ಮೊದಲೇ ಆರ್‌.ಡಿ ಪಾಟೀಲ್ ಮೂಗಿಗೆ ಬಡಿದಿದೆ. ಹೀಗಾಗಿ ಕಳ್ಳ ಮಾರ್ಗದ ಮೂಲಕ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಆತ ಮಹಾರಾಷ್ಟ್ರಕ್ಕೆ ಹೋಗಿರಬಹುದು ಅನ್ನೋದಕ್ಕೆ ಒಂದಿಷ್ಟು ಸಾಕ್ಷ್ಯಗಳು ಕೂಡ ಖಾಕಿ ಪಡೆಗೆ ಸಿಕ್ಕಿವೆ. ಆರ್.ಡಿ. ಪಾಟೀಲ್‌ ಎಸ್ಕೇಪ್‌ ಕೇಸ್‌ಗೆ ಸಂಬಂಧಿಸಿದಂತೆ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದ ಬಳಿಯಲ್ಲಿ ಕಲಬುರಗಿಯ ವಿವಿ ಠಾಣೆ ಪೊಲೀಸರು ಇಬ್ಬರನ್ನು ಬಂಧನ ಮಾಡಿದ್ದು ಪಾಟೀಲ್‌ನ ಈ ಬಲಗೈ ಬಂಟರು ಸೊಲ್ಲಾಪುರದವರಗೆ ಆತನ್ನು ಡ್ರಾಪ್‌ ಮಾಡಿದ್ದರಂತೆ. ಆ ಬಳಿಕ ಅಲ್ಲಿಂದ ಎಸ್ಕೇಪ್‌ ಆಗಿದ್ದ ಈ ಪಾಟೀಲ್‌.

ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧೆ ಮಾಡಿದ್ದ

ಇಡೀ ಪ್ರಕರಣದಲ್ಲಿ ದೊಡ್ಡ ದೊಡ್ಡವರು ಶಾಮೀಲಾಗಿದ್ದಾರಾ ಅನ್ನೋ ಅನುಮಾನ ಜೋರಾಗಿಯೇ ಶುರುವಾಗ್ತಿದೆ. ಯಾಕಂದ್ರೆ ರೇಡ್‌ ಆಗೋ ಸೂಚನೆ ಮುಂಚೆಯೇ ಆ ಪಾಟೀಲ್ ಗೆ ಹೇಗೆ ಸಿಗ್ತು, ಅಧಿಕಾರಿಗಳೇನಾದ್ರೂ ಇದರಲ್ಲಿ ಭಾಗಿಯಾಗಿದ್ದಾರಾ ಅನ್ನೋ ಅನುಮಾನಗಳು ಮೂಡುತ್ತಿವೆ.

ಇದನ್ನೂ ಓದಿ : Exam Cheating : ಪೊಲೀಸರಿಗೆ ಚಳ್ಳೇಹಣ್ಣು ತಿನಿಸಿ ಎಸ್ಕೇಪ್‌ ಆದ ಪಿಎಸ್‌ಐ ಕಿಂಗ್‌ ಪಿನ್‌ ಆರ್.ಡಿ ಪಾಟೀಲ್‌

ಚುನಾವಣೆಗಳಲ್ಲೂ ಸ್ಪರ್ಧೆ ಮಾಡಿದ್ದ ಮಹತ್ವಾಕಾಂಕ್ಷಿ

ಪೊಲೀಸರನ್ನೇ ಯಾಮಾರಿಸಿ , ಕಾಂಪೌಂಡ್‌ ಹಾರಿ ಪರಾರಿಯಾಗಿರುವ ಈ ಆರ್‌ಡಿ ಪಾಟೀಲ್‌ ಸಾಮಾನ್ಯದವನೇನಲ್ಲ. ಡೀಲ್‌ ಕಿಂಗ್‌ ಈ ಆರ್‌ ಡಿ ಪಾಟೀಲ್ ಹಿನ್ನೆಲೆಯೂ ರೋಚಕ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದ ಈತ ಮೂಲತಃ ಕಲಬುರ್ಗಿ ಜಿಲ್ಲೆಯ ಅಪ್ಜಲಪುರ ತಾಲೂಕಿನ ಪುಟ್ಟ ಊರಿನವರು. ಈತನಿಗೆ ರಾಜಕೀಯ ಮಹತ್ವಾಕಾಂಕ್ಷೆ ಸಾಕಷ್ಟಿತ್ತಂತೆ. ರಾಜಕೀಯದಲ್ಲಿ ಉನ್ನತ ಹುದ್ದೆಗೇರಬೇಕು ಅನ್ನೋ ಆಸೆಯಿದ್ದ ಈತ ಸ್ಥಳೀಯವಾಗಿ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ. ಊರಿನ ಒಂದಿಷ್ಟು ಹುಡುಗರ ಗುಂಪು ಕಟ್ಟಿಕೊಂಡು ಇದೇ ರೀತಿಯ ಹಲವು ಅಕ್ರಮಗಳನ್ನು ಈತ ನಡೆಸುತ್ತಿದ್ದನಂತೆ. ಅಕ್ರಮಗಳ ಮೂಲಕವೇ ಈತ ಸುದ್ದಿ ಆಗಿದ್ದು ಹೆಚ್ಚು.

ಇದನ್ನೂ ಓದಿ: Exam Cheating : ಅಭ್ಯರ್ಥಿಗಳಿಗೆ ಬ್ಲ್ಯೂಟೂತ್‌ ಡಿವೈಸ್‌ ಬಳಸಲು ಟ್ರೈನಿಂಗ್‌ ಕೊಟ್ಟನಾ ಕಿಂಗ್‌ಪಿನ್‌ ಆರ್‌.ಡಿ ಪಾಟೀಲ್‌!

ಅಷ್ಟು ಮಾತ್ರವಲ್ಲದೇ ಹಗರಣದಿಂದ ಜೈಲು ಸೇರಿಕೊಂಡಿದ್ದಾಗಲೂ ಚುನಾವಣೆ ಸ್ಪರ್ಧಿಸಲೂ ಯತ್ನಿಸಿದ್ದ. ಜೈಲಿನಲ್ಲಿದ್ದುಕೊಂಡೇ ಕೋರ್ಟ್‌ ನಿಂದ ಅನುಮತಿಯನ್ನು ಪಡೆದುಕೊಂಡು ವಿಧಾನಸಭಾ ಚುನಾವಣೆಗೆ ಈತ ನಾಮಪತ್ರವನ್ನು ಕೂಡ ಸಲ್ಲಿಕೆ ಮಾಡಿದ್ದ. 2023ರ ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ. ನಾಮಪತ್ರ ಸಲ್ಲಿಕೆ ವೇಳೆ ಅಭಿಮಾನಿಗಳು ಆತನಿಗೆ ಹೂವಿನ ಮಳೆ ಸುರಿಸಿ ಬರ ಮಾಡಿಕೊಂಡಿದ್ದು ಕೂಡ ಸುದ್ದಿ ಆಗಿತ್ತು. ಒಂದೊಮ್ಮೆ ಈಗ ಪೊಲೀಸರು ಬಂಧಿಸಿದರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಈತ ಏನೇನೋ ಪ್ಲ್ಯಾನ್‌ ಮಾಡುತ್ತಾನೋ!‌

Exit mobile version