ಬೆಂಗಳೂರು: ಇದು ಹಣದ ಮುಂದೆ ಯಾವ ಸ್ನೇಹವೂ ಇಲ್ಲ ಅನ್ನುವುದನ್ನು ಸಾಬೀತುಪಡಿಸುವಂಥ ಪ್ರಕರಣ. ಸ್ನೇಹಿತನ ಮಾತು ನಂಬಿ ವಿದೇಶದಿಂದ ಕೋಟಿ ಕೋಟಿ ಹಣ ಕಳಿಸಿದ ವ್ಯಕ್ತಿಯ ಕೈಗೆ ಕಡೆಗೆ ಸಿಕ್ಕಿದ್ದು ಚೆಂಬು. ಬೆಂಗಳೂರಲ್ಲಿ ಪ್ರಾಪರ್ಟಿ ಖರೀದಿಸಬೇಕೆಂಬ ಸ್ನೇಹಿತನ ಆಸೆಯನ್ನೇ ಬಂಡವಾಳ ಮಾಡಿಕೊಂಡ ಮತ್ತೊಬ್ಬ ಕೋಟಿಗಟ್ಟಲೆ ಹಣಕ್ಕೆ ಟೋಪಿ ಹಾಕಿದ್ದಾನೆ.
ಇಂಜಿನಿಯರ್ ಆಗಿ ಹತ್ತು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದ ರಘು ಎಂಬವರು ತಾವು ದುಡಿದ ಹಣದಲ್ಲಿ ಬೆಂಗಳೂರಿನಲ್ಲಿ ಸೈಟ್ ಆಥವಾ ಮನೆ ತೆಗೆದುಕೊಳ್ಳಬೇಕು ಎಂದುಕೊಂಡಿದ್ದರು. ಆ ವೇಳೆ ಬಾಲ್ಯ ಸ್ನೇಹಿತ ಲೋಕೇಶ್ ಎಂಬಾತ, ತಮ್ಮದೇ ಆಸ್ತಿಯನ್ನು ಮಾರಾಟ ಮಾಡಿದ್ದೇವೆ, ಅದನ್ನು ತೆಗೆದುಕೊಂಡಿದ್ದವರು ಮತ್ತೆ ಸೇಲ್ ಮಾಡುತ್ತಿದ್ದಾರೆಂದು ಹೇಳಿದ್ದ. ಅದನ್ನು ತೆಗೆದುಕೊಂಡರೆ ಲಕ್ಷ ಲಕ್ಷ ಬಾಡಿಗೆ ಬರುತ್ತೆ ಎಂದು ನಂಬಿಸಿದ್ದ.
ಸ್ನೇಹಿತನ ಮಾತು ನಂಬಿದ ರಘು, ನಾಲ್ಕುವರೆ ಕೋಟಿ ರೂಪಾಯಿಗಳನ್ನು ಲೋಕೇಶ್ ಅಕೌಂಟ್‌ಗೆ ಹಾಕಿದ್ದರು. ಇತ್ತ ಲೋಕೇಶ್ ಮನೆ ಖರೀದಿ ಮಾಡಿ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದ. ಜತೆಗೆ ತನ್ನ ಪತ್ನಿ ಹೆಸರಲ್ಲಿ ದಾನ ಪತ್ರದ ಮೂಲಕ ನೊಂದಣಿ ಮಾಡಿಸಿಕೊಂಡಿದ್ದ. ವಿದೇಶದಲ್ಲಿದ್ದ ರಘು ಆಸ್ತಿ ಪತ್ರ ಕೇಳಿದಾಗಲೆಲ್ಲ ರೆಡಿಯಾಗ್ತಿದೆ ಎಂದೇ ಸಬೂಬು ಹೇಳಿಕೊಂಡು ಬಂದಿದ್ದ. ಬೆಂಗಳೂರಿಗೆ ಬಂದೇ ನೋಡೋಣ ಎಂದರೆ ಕೋವಿಡ್ ಹಿನ್ನೆಲೆಯಲ್ಲಿ ಪ್ರಯಾಣ ಸಾಧ್ಯವಿರಲಿಲ್ಲ. ಕಡೆಗೂ ಇತ್ತೀಚೆಗೆ ಲೋಕೇಶ್ ನಡವಳಿಕೆ ಮೇಲೆ ಅನುಮಾನ ಬಂದು ಚೆಕ್ ಮಾಡಿದಾಗ ವಂಚನೆ ಬೆಳಕಿಗೆ ಬಂದಿದೆ.
ಲೋಕೇಶ್ ಹಾಗೂ ಆತನ ಪತ್ನಿ ಸೇರಿ ರಘುವಿಗೆ 4.5 ಕೋಟಿ ರೂ. ವಂಚನೆ ಮಾಡಿದ್ದಾರೆ. ಪ್ರಕರಣದ ಸಂಬಂಧ ಗೋವಿಂದಪುರ ಪೊಲೀಸರು ಲೋಕೇಶ್‌ನನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಆಥನ ಪತ್ನಿ ಪ್ರತಿಭಾ ಬಂಧನಕ್ಕಾಗಿ ತೀವ್ರ ಶೋಧ ನಡೆದಿದೆ. ಪ್ರತಿಭಾ ಮೇಲೆ ಕೂಡ ನಾಲ್ಕು ಕೋಟಿ ರೂ.ಗಳಷ್ಟು ಎಲ್‌ಐಸಿ ಹಣವನ್ನು ವಂಚಿಸಿರುವ ಆರೋಪ ಇದೆ.
ಇದನ್ನೂ ಓದಿ | Crime News | ಅಕ್ರಮವಾಗಿ ಎಟಿಎಂ ಕಾರ್ಡ್ ಪಡೆದು, ಕಾವೇರಿ ಎಂಪೋರಿಯಮ್ ನಿವೃತ್ತ ಸಿಬ್ಬಂದಿಗೆ 6 ಲಕ್ಷ ರೂ. ವಂಚನೆ