ಚಿತ್ರದುರ್ಗ/ಬೆಂಗಳೂರು: ರೀಲ್ಸ್‌ಗಾಗಿ ಎಕೆ 47 (AK 47 Rifle) ರೈಫಲ್ ಹಿಡಿದ ಗನ್ ಮ್ಯಾನ್‌ಗಳನ್ನು ಬಾಡಿಗಾರ್ಡ್ಸ್ (Bodyguards) ಆಗಿಟ್ಟುಕೊಂಡು ಶೋಕಿ (Reels Obsession) ಮಾಡಿದ ಅರುಣ್ ಕಟಾರೆ ಎಂಬಾತನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದರು. ಆದರೆ ಕಳೆದ ವರ್ಷವೇ ಚಿತ್ರದುರ್ಗದಲ್ಲಿ ಅರುಣ್ ವಿರುದ್ಧ ಪ್ರತ್ಯೇಕ ಎರಡು ಎಫ್‌ಐಆರ್‌ಗಳು ದಾಖಲಾಗಿವೆ.
ಶೋಕಿಲಾಲ ಅರುಣ್ ಕಟಾರೆ ವಿರುದ್ಧ ಕಳೆದ 2023ರ ಏಪ್ರಿಲ್ ಹಾಗೂ ಜುಲೈನಲ್ಲಿ ಬ್ಲ್ಯಾಕ್‌ಮೇಲ್ ಹಾಗೂ ಚೀಟಿಂಗ್ ಮಾಡಿರುವ ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ಬಾಲಕನಿಗೆ ಮದ್ಯ ಕುಡಿಸಿ, ಸಿಗರೇಟ್ ಸೇದಿಸಿ ಮೊಬೈಲ್‌ನಲ್ಲಿ ವಿಡಿಯೊ ಮಾಡಿ ಬೆದರಿಸುತ್ತಿದ್ದ. ಮನೆಯಿಂದ ಒಡವೆ ತರುವಂತೆ ಬಾಲಕನಿಗೆ ಅರುಣ್ ಕಟಾರೆ ಬೆದರಿಸುತ್ತಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಬಾಲಕನ ತಂದೆ ಬಾಲಾಜಿ ಎಂ.ಕೆ ಎಂಬುವವರಿಂದ ದೂರು ದಾಖಲಿಸಿದ್ದರು.
ಹಣ ಡಬಲ್ ಮಾಡುವುದಾಗಿ ವಂಚನೆ
ಮತ್ತೊಬ್ಬರಿಗೆ ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ಸುಮಾರು 3,68,000 ಹಣ ಪಡೆದು ಅರುಣ್ ಕಟಾರೆ ವಂಚಿಸಿದ್ದಾನೆ. ಡ್ಯೂಯೆಟ್ ಪಬ್‌ನಲ್ಲಿ ಬಂಡವಾಳ ಹಾಕಿ ಡಬಲ್ ಮಾಡುವುದಾಗಿ ಹೇಳಿದ್ದ. ವಂಚನೆಗೆ ಒಳಗಾದ ರವಿತೇಜ ಎಲ್.ಯು ಎಂಬುವುವರಿಂದ ದೂರು ದಾಖಲಾಗಿದೆ. ರವಿತೇಜನಿಂದ ಹಣ ಪಡೆದ ಬಳಿಕ ಫೋನ್ ಸ್ವಿಚ್ ಮಾಡಿಕೊಂಡು ಅರುಣ್ ಕಟಾರೆ ಪರಾರಿ ಆಗಿದ್ದ.
ಸ್ಯಾಂಡಲ್‌ವುಡ್ ಟೆಕ್ನಿಷಿಯನ್‌ಗೆ ಸಂಕಷ್ಟ
ಅರುಣ್ ಕಟಾರೆ ರೀಲ್ಸ್ ಶೋಕಿಯಿಂದಾಗಿ ಸ್ಯಾಂಡಲವುಡ್‌ನ ಟೆಕ್ನಿಷಿಯನ್‌ಗೆ ಸಂಕಷ್ಟ ಎದುರಾಗಿದೆ. ಕನ್ನಡದ ಸೂಪರ್ ಹಿಟ್ ಸಿನಿಮಾಗಳಿಗೆ ಡಮ್ಮಿ ಗನ್ ಒದಗಿಸುವ ಟೆಕ್ನಿಷಿಯನ್ ಸಾಹಿಲ್‌ಗೆ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ಹೊಂಬಾಳೆ ಫಿಲ್ಸ್, ಗೀತಾ ಪಿಕ್ಚರ್ಸ್ ನಂತಹ ಬ್ಯಾನರ್‌ಗಳ ಸಿನಿಮಾಗಳಿಗೆ ಸಾಹಿಲ್ ಟೆಕ್ನಿಷಿಯನ್ ಆಗಿದ್ದರು. ಕನ್ನಡದ ಸೂಪರ್ ಹಿಟ್ ಚಿತ್ರಗಳಾದ ಕಬ್ಜ, ಭೈರತಿ ರಣಗಲ್, ಮಪ್ತಿ ಸಿನಿಮಾಗಳಿಗೆ ಟೆಕ್ನಿಷಿಯನ್ ಸಾಹಿಲ್ ಡಮ್ಮಿ ಗನ್ ಒದಗಿಸಿದ್ದರು. ಇದೇ ಸಾಹಿಲ್ ಬಳಿ ಅರುಣ್ ಕಟಾರೆ ಡಮ್ಮಿ ಗನ್ ಬಾಡಿಗೆ ಪಡೆದಿದ್ದರು. ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಲು ಡಮ್ಮಿ ಗನ್ ಅನ್ನು ಅರುಣ್ ಕಟಾರೆ ಬಳಸಿದ್ದ. ಸದ್ಯ ಕೊತ್ತನೂರು ಠಾಣೆ ಪೊಲೀಸರಿಂದ ಬಂಧಿತನಾಗಿದ್ದ ಅರುಣ್ ಕಾಟೇರ, ಸಾಹಿಲ್ ಬಳಿ ಶಾರ್ಟ್ ಮೂವಿಗೆ ಎಂದು ಡಮ್ಮಿ ಗನ್ ಬಾಡಿಗೆ ತೆಗೆದುಕೊಂಡಿದ್ದ. ಈಗ ಕೊತ್ತನೂರು ಪೊಲೀಸರು ಸಾಹಿಲ್‌ಗೆ ನೊಟೀಸ್ ಜಾರಿ ಮಾಡಿದ್ದಾರೆ.
ಇದನ್ನೂ ಓದಿ: Viral Video: ರೀಲ್ಸ್‌ಗಾಗಿ ಸಿಗರೇಟ್ ದಂ ಹೊಡೆದ ಯುವತಿ; ಮನೇಲಿ ಹಿಗ್ಗಾಮುಗ್ಗಾ ಹೊಡೆದ ಅಪ್ಪ!
ಏನಿದು ಪ್ರಕರಣ?
ಬೆಂಗಳೂರು: ರೀಲ್ಸ್‌ಗಾಗಿ ಶೋಕಿ (Reels Obsession) ಮಾಡಿದವನನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಮುದ್ದೆ ಮುರಿಯಲು ಕಳಿಸಿದ್ದರು. ಈತ ಎಕೆ 47 (AK 47 Rifle) ರೈಫಲ್ ಹಿಡಿದ ಗನ್ ಮ್ಯಾನ್‌ಗಳನ್ನು ಬಾಡಿಗಾರ್ಡ್ಸ್ (Bodyguards) ಆಗಿಟ್ಟುಕೊಂಡು, ಪಾಶ್ ಕಾರುಗಳನ್ನು ಚಲಾಯಿಸಿಕೊಂಡು, ಮೈಮೇಲೆ ಕಿಲೋಗಟ್ಟಲೆ ಚಿನ್ನ ಧರಿಸಿಕೊಂಡು ಶೋಕಿ ಮಾಡುತ್ತಿದ್ದ. ಬೀದಿಬೀದಿಯಲ್ಲಿ ಈತನ ಗನ್ ಕಂಡು ಜನ ಆತಂಕಕ್ಕೊಳಗಾಗಿದ್ದರು.
ಬೆಂಗಳೂರಿನಲ್ಲಿ ಹೀಗೆ ಶೋ ಕೊಡಲು ಹೋಗಿ ಜೈಲು ಸೇರಿದ ರೀಲ್ಸ್ ಸ್ಟಾರ್ ಹೆಸರು ಅರುಣ್ ಕಟಾರೆ. ಕೊತ್ತನೂರು ಪೊಲೀಸರು ಈತನನ್ನು ಬಂಧಿಸಿದ್ದರು. ರೌಡಿ ಚಟುವಟಿಕೆ ಮತ್ತು ಹಳೆಯ ಎಂಓಬಿಗಳ ಮೇಲೆ ನಿಗಾ ವಹಿಸಿದ್ದ ಕೊತ್ತನೂರು ಸಿಬ್ಬಂದಿ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಅರುಣ್ ಕಟಾರೆಯನ್ನು ವಶಕ್ಕೆ ಪಡೆದಿದ್ದರು.
ಈತ ಬಾಡಿಗಾರ್ಡ್ಸ್ ಥರ ಮನುಷ್ಯರನ್ನಿಟ್ಟುಕೊಂಡು, ಅವರ ಕೈಲಿ ಎಕೆ 47 ಮಾದರಿಯ ನಕಲಿ ಗನ್ ಹಿಡಿಸಿ ರಸ್ತೆಯಲ್ಲಿ ಶೋಆಫ್ ಮಾಡುತ್ತಿದ್ದ. ಮೈಮೇಲೆ ನಕಲಿ ಚಿನ್ನ ಹೇರಿಕೊಳ್ಳುತ್ತಿದ್ದ. ಅರುಣ್ ಕಟಾರೆ ಶೋನಿಂದ ಬೆದರಿದ ಸಾರ್ವಜನಿಕರು ಆತಂಕದಿಂದ ಈ ಬಗ್ಗೆ ಮಾಹಿತಿ ನೀಡಿದ್ದರು. ಆರ್ಮ್ಸ್ ಕಾಯಿದೆ ಸೆ. 290 ಅಡಿಯಲ್ಲಿ ಪ್ರಕರಣ ದಾಖಲಿಸಿ ಈತನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ, ನಕಲಿ ಗನ್ ಹಿಡಿದು ಏರಿಯಾದಲ್ಲಿ ಹವಾ ಸೃಷ್ಟಿಸಲು ಹೋದವನ ಗುಟ್ಟು ಬಯಲಾಗಿತ್ತು. ರೀಲ್ಸ್ ಶೋಕಿಗೆ ಬಿದ್ದ ಯುವಕನನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕಳಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ