ಬೆಂಗಳೂರು: ರಿಲ್ಸ್ ಶೋಗಾಗಿ ಶೋಕಿ (Reels Obsession) ಮಾಡಿದವನನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಮುದ್ದೆ ಮುರಿಯಲು ಕಳಿಸಿದ್ದಾರೆ. ಈತ ಎಕೆ 47 (AK 47 Rifle) ರೈಫಲ್ ಹಿಡಿದ ಗನ್ ಮ್ಯಾನ್‌ಗಳನ್ನು ಬಾಡಿಗಾರ್ಡ್ಸ್ (Bodyguards) ಆಗಿಟ್ಟುಕೊಂಡು, ಪಾಶ್ ಕಾರುಗಳನ್ನು ಚಲಾಯಿಸಿಕೊಂಡು, ಮೈಮೇಲೆ ಕಿಲೋಗಟ್ಟಲೆ ಚಿನ್ನ ಧರಿಸಿಕೊಂಡು ಶೋಕಿ ಮಾಡುತ್ತಿದ್ದ. ಬೀದಿಬೀದಿಯಲ್ಲಿ ಈತನ ಗನ್ ಝಳಪಿಸುವಿಕೆ ಕಂಡು ಜನ ಆತಂಕಕ್ಕೊಳಗಾಗಿದ್ದರು.
ಬೆಂಗಳೂರಿನಲ್ಲಿ ಹೀಗೆ ಶೋ ಕೊಡಲು ಹೋಗಿ ಜೈಲು ಸೇರಿದ ರೀಲ್ಸ್ ಸ್ಟಾರ್ ಹೆಸರು ಅರುಣ್ ಕಟಾರೆ. ಕೊತ್ತನೂರು ಪೊಲೀಸರು ಈತನನ್ನು ಬಂಧಿಸಿದ್ದಾರೆ. ರೌಡಿ ಚಟುವಟಿಕೆ ಮತ್ತು ಹಳೆಯ ಎಂಓಬಿಗಳ ಮೇಲೆ ನಿಗಾ ವಹಿಸಿದ್ದ ಕೊತ್ತನೂರು ಸಿಬ್ಬಂದಿ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಅರುಣ್ ಕಟಾರೆಯನ್ನು ವಶಕ್ಕೆ ಪಡೆದಿದ್ದಾರೆ.
ಈತ ಬಾಡಿಗಾರ್ಡ್ಸ್ ಥರ ಮನುಷ್ಯರನ್ನಿಟ್ಟುಕೊಂಡು, ಅವರ ಕೈಲಿ ಎಕೆ 47 ಮಾದರಿಯ ನಕಲಿ ಗನ್ ಹಿಡಿಸಿ ರಸ್ತೆಯಲ್ಲಿ ಶೋಆಫ್ ಮಾಡುತ್ತಿದ್ದ. ಮೈಮೇಲೆ ನಕಲಿ ಚಿನ್ನ ಹೇರಿಕೊಳ್ಳುತ್ತಿದ್ದ. ಅರುಣ್ ಕಟಾರೆ ಶೋನಿಂದ ಬೆದರಿದ ಸಾರ್ವಜನಿಕರು ಆತಂಕದಿಂದ ಈ ಬಗ್ಗೆ ಮಾಹಿತಿ ನೀಡಿದ್ದರು.
ಆರ್ಮ್ಸ್ ಕಾಯಿದೆ ಸೆ. 290 ಅಡಿಯಲ್ಲಿ ಪ್ರಕರಣ ದಾಖಲಿಸಿ ಈತನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ, ನಕಲಿ ಗನ್ ಹಿಡಿದು ಏರಿಯಾದಲ್ಲಿ ಹವಾ ಸೃಷ್ಟಿಸಲು ಹೋದವನ ಗುಟ್ಟು ಬಯಲಾಗಿದೆ. ರೀಲ್ಸ್ ಶೋಕಿಗೆ ಬಿದ್ದ ಯುವಕನನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕಳಿಸಿದ್ದಾರೆ.
ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದ ಹೊರವಲಯದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ (Dead Body Found) ಪತ್ತೆಯಾಗಿದೆ. ಮೃತನ ಕೈ ಮೇಲೆ ಲಕ್ಷ್ಮಿ ಎಂಬ ಹಚ್ಚೆ ಗುರುತು ಪತ್ತೆಯಾಗಿದೆ.
ಪ್ರೀತಿ-ಪ್ರೇಮ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ದುಷ್ಕರ್ಮಿಗಳು ಕೊಲೆ ಮಾಡಿ ಮರಕ್ಕೆ ನೇತು ಹಾಕಿ ಹೋಗಿರುವ ಅನುಮಾನವಿದೆ. ಮರದಲ್ಲಿ ನೇತಾಡುತ್ತಿದ್ದ ಮೃತದೇಹವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗೌರಿಬಿದನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರದಲ್ಲಿದ್ದ ಮೃತದೇಹವನ್ನು ಕೆಳಗಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತನ ಗುರುತು ಪತ್ತೆಯಾಗಿಲ್ಲ. ಸದ್ಯ ಪೊಲೀಸರು ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Murder Case : ರೌಡಿಯಾಗಲು ಹೊರಟವನನ್ನು ಕೊಂದು ಹಾಕಿದ್ರು ಪುಂಡರು