ಬೆಂಗಳೂರು: ನಟ ದರ್ಶನ್ (Actor Darshan) ಗ್ಯಾಂಗ್‌ನಿಂದ ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಹತ್ಯೆ ಕೇಸ್‌ನಲ್ಲಿ, (Renuka Swamy Murder Case) ರಾಜಕಾಲುವೆ (Rajakaluve) ಪಾಲಾಗಿರುವ ರೇಣುಕಾಸ್ವಾಮಿ ಹಾಗೂ ಆರೋಪಿ ರಾಘವೇಂದ್ರ ಮೊಬೈಲ್‌ಗಳಿಗಾಗಿ (mobile phones) ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಪ್ರಕರಣದ ಬಗ್ಗೆ ಮಹತ್ವದ ಸಾಕ್ಷಿಗಳನ್ನು ಇದು ಹೊಂದಿದ್ದು, ಇದೀಗ ಶೋಧಕ್ಕಾಗಿ ಅಗ್ನಿಶಾಮಕ ದಳದ ಮೊರೆ ಹೋಗಲಾಗಿದೆ.
ಸತತ 11 ದಿನಗಳಿಂದ ಮೃತ ರೇಣುಕಾಸ್ವಾಮಿ ಮೊಬೈಲ್‌ಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಜೂನ್ 8ರಂದು ಪಟ್ಟಣಗೆರೆಯ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು. ಜೂನ್ 9ರ ಮುಂಜಾನೆ ಮೃತ ರೇಣುಕಾಸ್ವಾಮಿ ಹಾಗೂ A5 ಆರೋಪಿ ರಾಘವೇಂದ್ರ ಇಬ್ಬರ ಮೊಬೈಲ್ ಅನ್ನು ಪಡೆದು ಸುಮನಹಳ್ಳಿಯ ರಾಜಕಾಲುವೆ ಬಳಿ ಪ್ರದೂಶ್ ಬಿಸಾಡಿದ್ದ.
ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ನಡೆಸಲಾದ ಹಲ್ಲೆಯನ್ನು ಈ ಮೊಬೈಲ್‌ಗಳಲ್ಲಿ ಆರೋಪಿಗಳು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ರೇಣುಕಾಸ್ವಾಮಿ ಹಾಗೂ ಆರೋಪಿ ರಾಘವೇಂದ್ರರ ಮೊಬೈಲ್‌ಗಳು ಪ್ರಮುಖ ಸಾಕ್ಷಿಯಾಗಿವೆ. ಇಬ್ಬರ ಮೊಬೈಲ್‌ಗಳನ್ನೂ ರಾಜಕಾಲುವೆಗೆ ಬಿಸಾಡಿದ್ದಾಗಿ ಪ್ರದೂಶ್ ಹೇಳಿಕೆ ನೀಡಿದ್ದಾನೆ.
ಆತ ತೋರಿಸಿದ ಸುಮನಹಳ್ಳಿ ರಾಜಕಾಲುವೆಯ ಬಳಿ ಪೋಲಿಸ್ ಅಧಿಕಾರಿಗಳು ಮಹಜರು ನಡೆಸಿದ್ದಾರೆ. ಬಿಬಿಎಂಪಿ ಪೌರ ಕಾರ್ಮಿಕರ ಸಹಾಯದಿಂದ ರಾಜಕಾಲುವೆಯಲ್ಲಿ ಮೊಬೈಲ್ ಹುಡುಕಾಡಿಸಿದ್ದಾರೆ. ಆದರೆ ಪತ್ತೆಯಾಗಿಲ್ಲ. ಹೀಗಾಗಿ ಮೊಬೈಲ್ ಪತ್ತೆ ಮಾಡಿಕೊಡುವಂತೆ ಪೊಲೀಸರು ರಾಜಾಜಿನಗರ ಅಗ್ನಿಶಾಮಕ ಠಾಣೆ ಅಧಿಕಾರಿಗಳಿಗೆ ಮೊರೆ ಹೋಗಿದ್ದಾರೆ.
ಈ ನಡುವೆ, ಮೊಬೈಲ್ ಅನ್ನು ಬೇರೆ ಕಡೆ ಅವಿತಿರಿಸಿ ಅಥವಾ ನಾಶ ಮಾಡಿ, ಸುಮನಹಳ್ಳಿ ರಾಜಕಾಲುವೆಗೆ ಎಸೆದಿದ್ದೇನೆ ಎಂದು ಪ್ರದೂಶ್ ಹೇಳಿಕೆ ನೀಡಿ ಪೊಲೀಸರ ದಾರಿ ತಪ್ಪಿಸಿರುವ ಸಾಧ್ಯತೆಯೂ ಇದೆ. ಅಥವಾ ಆತ ಬಿಸಾಡಿರುವ ಮೊಬೈಲ್‌ಗಳನ್ನು ಗುಜರಿ ವಸ್ತು ಆಯುವವರು ಎತ್ತಿಕೊಂಡುಹೋಗಿರುವ ಸಾಧ್ಯತೆಯೂ ಇದೆ. ಇವೆಲ್ಲ ಸಾಧ್ಯತೆಗಳಿಂದಾಗಿ ಈ ಮೊಬೈಲ್ ಹುಡುಕಾಟ ಹುಲ್ಲಿನ ಬಣವೆಯಲ್ಲಿ ಸೂಜಿ ಹುಡುಕಿದಂತಾಗಿದೆ.
ಪವಿತ್ರಾ ಗೌಡ ಅಸ್ವಸ್ಥ, ಆಸ್ಪತ್ರೆಗೆ ಶಿಫ್ಟ್
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ1 ಪವಿತ್ರಾಗೌಡ ಅಸ್ವಸ್ಥಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆ ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡ (Pavithra Gowda), ಅಸ್ವಸ್ಥಗೊಂಡಿದ್ದರಿಂದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಕೆಲವೇ ಕ್ಷಣಗಳ ಹಿಂದೆ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ವೈದ್ಯರು ಬಂದಿದ್ದರು. ಆದರೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಹಿನ್ನೆಲೆಯಲ್ಲಿ ಪವಿತ್ರಾಗೌಡಳನ್ನು ಮಲ್ಲತ್ತಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ರಾಜಕಾಲುವೆ ಮೇಲೆ ನಿರ್ಮಿಸಿದ ದರ್ಶನ್ ಮನೆಯತ್ತ ಬಿಬಿಎಂಪಿ ಬುಲ್‌ಡೋಜರ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಕ್ರಮವಾಗಿ ರಾಜಕಾಲುವೆ ಮೇಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಮನೆ ಒತ್ತುವರಿ ತೆರವು ಮಾಡಲು ರಾಜ್ಯ ಸರ್ಕಾರ ಸೂಚಿಸಿದೆ. ನಟ ದರ್ಶನ್ (Actor Darshan) ಮನೆ ತೆರವಿಗೆ ಪಾಲಿಕೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರದಿಂದ ಮೌಕಿಕ ಸೂಚನೆ ಸಿಕ್ಕಿದೆ ಎನ್ನಲಾಗಿದ್ದು, ಯಾರೇ ಒತ್ತುವರಿ ಮಾಡಿ ಸ್ಟೇ ತಂದಿದ್ದರೂ ಕಾನೂನಿನ ಪ್ರಕಾರ ತೆರವು ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ನಟ ದರ್ಶನ್ ಮನೆ ರಾಜಕಾಲುವೆ ಮೇಲೆ ಇದ್ದರೂ ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಹಿಂದೇಟು ಹಾಕಿದ್ದರು. ಇದೀಗ ಒತ್ತುವರಿಗೆ ತೆರವಿಗೆ ಸೂಚನೆ ಹಿನ್ನೆಲೆಯಲ್ಲಿ ಕ್ರಮಕ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ಮಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಕೂಡ ಒತ್ತುವರಿ ವಿಚಾರದಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ.
ರಾಜಧಾನಿಯಲ್ಲಿ 2016ರಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾದಾಗ ರಾಜ ಕಾಲುವೆಗಳ ಮೇಲೆ ನಿರ್ಮಾಣವಾಗಿರುವ ಕಟ್ಟಡಗಳನ್ನು ತೆರವುಗೊಳಿಸಲು ಅಂದಿನ ಸಿದ್ದರಾಮಯ್ಯ ಸರ್ಕಾರ ಬಿಬಿಎಂಪಿಗೆ ಸೂಚನೆ ನೀಡಿತ್ತು. ಆಗ ಆರ್.ಆರ್. ನಗರದ ದರ್ಶನ್ ಅವರ ನಿವಾಸ ಕೂಡ ರಾಜ ಕಾಲುವೆಯ ಬಫರ್ ಜೋನ್ ಮೇಲೆ ನಿರ್ಮಿಸಿರುವುದು ತಿಳಿದುಬಂದಿತ್ತು.
ಇದನ್ನೂ ಓದಿ: Prajwal Revanna Case: ಪರಾರಿಯಾಗಲು ಸಹಾಯ; ಪ್ರಜ್ವಲ್ ರೇವಣ್ಣ ಗರ್ಲ್ ಫ್ರೆಂಡ್‌ಗೆ ಎಸ್‌ಐಟಿ ನೊಟೀಸ್!