ಹೈದರಾಬಾದ್: ಹಣ, ಆಸ್ತಿ ಹೆಸರಲ್ಲಿ ಜನರನ್ನು ವಂಚಿಸುವುದನ್ನು ಕೇಳಿದ್ದೇವೆ. ನಂಬಿಸಿ ಬೆನ್ನಿಗೆ ಚೂರಿ ಹಾಕುವವರ ಕುರಿತು ತಿಳಿದುಕೊಂಡಿದ್ದೇವೆ. ಮನೆಗೆ ನುಗ್ಗಿ ದರೋಡೆ, ಆಸ್ತಿಗಾಗಿ ಕೊಲೆ, ನಿಧಿಗಾಗಿ ಮಾಟ-ಮಂತ್ರ ಮಾಡಿಸಿದ ಪ್ರಕರಣಗಳೂ ನಮಗೆ ಗೊತ್ತಿವೆ. ಆದರೆ, ಸೂರ್ಯ, ಚಂದ್ರನ ಹೆಸರಿನಲ್ಲಿ ಯಾರಾದರೂ ವಂಚಿಸಿದ್ದನ್ನು ಕೇಳಿದ್ದೀರಾ? ಇಲ್ಲ ತಾನೆ? ಆದರೆ, ಹೈದರಾಬಾದ್‌ನಲ್ಲಿ ರೈಸ್ ಪುಲ್ಲಿಂಗ್ (Rice Pulling) ಗ್ಯಾಂಗೊಂದು (ಹಣ ದ್ವಿಗುಣಗೊಳಿಸುವ ಹೆಸರಿನಲ್ಲಿ ಚೊಂಬು ತೋರಿಸಿ ವಂಚಿಸುವುದು) ಚಂದ್ರಯಾನ 3 ಮಿಷನ್ (Chandrayaan 3) ಹೆಸರಿನಲ್ಲಿ ಉದ್ಯಮಿಯೊಬ್ಬರಿಗೆ ಬರೋಬ್ಬರಿ 20 ಕೋಟಿ ರೂ. ವಂಚಿಸಿದೆ.
ನಗರದಲ್ಲಿರುವ ಉದ್ಯಮಿಯೊಬ್ಬರನ್ನು ಭೇಟಿಯಾದ ಮೂವರು ಖದೀಮರು, ಅವರ ಎಲ್ಲ ದೌರ್ಬಲ್ಯಗಳನ್ನು ತಿಳಿದುಕೊಂಡಿದ್ದಾರೆ. ಉದ್ಯಮಿಯು ಇನ್ನೂ ಹೆಚ್ಚು ಹಣ ಮಾಡಬೇಕು ಎಂಬ ಬಯಕೆ ಹೊಂದಿದ್ದಾರೆ ಎಂಬುದನ್ನು ಅರಿತ ಇವರು ಸಿನಿಮೀಯ ರೀತಿಯಲ್ಲಿ ಕತೆ ಹೆಣೆದಿದ್ದಾರೆ. ಅಲ್ಲದೆ, ಅದಕ್ಕಾಗಿ ಇಸ್ರೋದ ಚಂದ್ರಯಾನ 3 ಮಿಷನ್ ಹೆಸರು ಬಳಸಿದ್ದಾರೆ. ಚಂದ್ರಯಾನ 3 ಮಿಷನ್ ಯಶಸ್ಸಿನ ಕುರಿತೇ ಎಲ್ಲರೂ ಮಾತನಾಡುತ್ತಿರುವುದು, ಸುದ್ದಿಯಾಗುತ್ತಿರುವುದನ್ನು ಕಂಡಿದ್ದ ಉದ್ಯಮಿಯು ‘ಧನ ಲಾಭ’ ಮಾಡಿಕೊಡುವ ಚೊಂಬಿಗಾಗಿ 20 ಕೋಟಿ ರೂ. ಕಳೆದುಕೊಂಡಿದ್ದಾರೆ.
ಹೀಗಿದೆ ಸಿನಿಮೀಯ ಕತೆ
ಮೂವರು ಖದೀಮರು ತಾಮ್ರದ ಚೊಂಬೊಂದನ್ನು ಉದ್ಯಮಿಗೆ ತೋರಿಸಿದ್ದು, ಇದು ಯಾವುದೇ ಸಂಪತ್ತನ್ನು ದ್ವಿಗುಣಗೊಳಿಸುವ, ಯಶಸ್ಸನ್ನು ತಂದುಕೊಂಡುವ ಮ್ಯಾಜಿಕ್ ಚೊಂಬಾಗಿದೆ. ಇದೇ ಚೊಂಬನ್ನು ಬಳಸಿಯೇ ಚಂದ್ರಯಾನ 3 ಮಿಷನ್ ಯಶಸ್ವಿಗೊಳಿಸಲಾಗಿದೆ. ಈ ಒಂದು ಚೊಂಬಿನಿಂದ ನೀವು ಹಣ, ಆಸ್ತಿ, ಸಂಪತ್ತನ್ನು ಗಳಿಸಬಹುದು ಎಂಬುದಾಗಿ ಉದ್ಯಮಿಯನ್ನು ನಂಬಿಸಿದ್ದಾರೆ. ಅಲ್ಲದೆ, ಉದ್ಯಮಿಯು ಚೌಕಾಸಿ ಮಾಡಿದ ಬಳಿಕ 20 ಕೋಟಿ ರೂ.ಗೆ ತಾಮ್ರದ ಚೊಂಬು ನೀಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: GST Evasion: ಜಿಎಸ್‌ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
ಹಣದ ಆಸೆಗೆ ಬಿದ್ದ ಉದ್ಯಮಿಯು ಮೂವರು ವಂಚಕರಿಗೆ 20 ಕೋಟಿ ರೂ. ನೀಡಿ ಒಂದು ತಾಮ್ರದ ಚೊಂಬು ಪಡೆದಿದ್ದಾರೆ. ಆದರೆ, ಯಾವಾಗ ತಾಮ್ರದ ಚೊಂಬು ತಮ್ಮ ಸಂಪತ್ತನ್ನು ದ್ವಿಗುಣಗೊಳಿಸುವುದಿಲ್ಲ, ನನ್ನನ್ನು ವಂಚಿಸಲಾಗಿದೆ ಎಂಬುದು ತಿಳಿಯಿತೋ, ಕೂಡಲೇ ಉದ್ಯಮಿಯು ಮೇದಿಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸರು, ವಿಜಯ್ ಕುಮಾರ್ ಎಂಬಾತ ಸೇರಿ ಮೂವರನ್ನು ಬಂಧಿಸಿದ್ದಾರೆ.