Site icon Vistara News

Road Accident: ಬೆಂಗಳೂರು, ಗದಗದಲ್ಲಿ ಸರಣಿ ಅಪಘಾತ; ಗ್ಯಾಸ್ ಟ್ಯಾಂಕರ್ ಸ್ಫೋಟಕ್ಕೆ ಮನೆಗಳೇ ಭಸ್ಮ

Road Accident

ಬೆಂಗಳೂರು/ಗದಗ/ಪುಣೆ: ಮಹಾರಾಷ್ಟ್ರದ ಪುಣೆಯ ಚಾಕನ ಶಿಕ್ರಾಪುರ ರಾಷ್ಟ್ರೀಯ ಹೆದ್ದಾರಿ ಮೇಲೆ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡಿದೆ. ಸ್ಫೋಟದಿಂದ ಮೂರು ಕಂಟೇನರ್ ವಾಹನಗಳು, ಒಂದು ಹೋಟೆಲ್ ಮತ್ತು ಮೂರು ಮನೆಗಳು ಬೆಂಕಿ ಆಹುತಿಯಾಗಿವೆ. ಭಾನುವಾರ ಬೆಳಗಿನ ಜಾವ 5 ಗಂಟೆಗೆ ಸುಮಾರಿಗೆ ಘಟನೆ ನಡೆದಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎರಡು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ (road Accident) ನಡೆದಿದೆ.

ಕುಡಿದು ಅಡ್ಡಾದಿಡ್ಡಿ ಕಾರು ಚಾಲನೆ

ಕುಡಿದ ಅಮಲಿನಲ್ಲಿ ಕಾರು ಚಾಲನೆ ಮಾಡಿದ್ದರಿಂದ ಬೆಂಗಳೂರಿನಲ್ಲಿ ಸರಣಿ ಅಪಘಾತ ಸಂಭವಿಸಿದೆ. ಸ್ವಿಫ್ಟ್ ಕಾರು ಚಾಲಕನಿಂದ ಅಡ್ಡಾದಿಡ್ಡಿ ಚಾಲನೆಗೆ ಆಟೋ, ಎರಡು ಬೈಕ್‌ಗೆ ಡಿಕ್ಕಿಯಾಗಿದೆ. ಬೆಂಗಳೂರಿನ ರಾಜಾಜಿನಗರದ ಈಸ್ಟ್ ವೆಸ್ಟ್ ಪಬ್ಲಿಕ್ ಸ್ಕೂಲ್ ಬಳಿ ಅಪಘಾತ ನಡೆದಿದೆ. ಘಟನೆಯಲ್ಲಿ ಓರ್ವ ಸ್ಥಿತಿ‌ ಗಂಭೀರವಾಗಿದೆ. ಮಲ್ಲೇಶ್ವರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನೂ ಬೈಕ್ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅಲ್ಲಿದ್ದ ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಡಿಕ್ಕಿ ರಭಸಕ್ಕೆ ಸುಬ್ರಮಣ್ಯನಗರದ ವಿನಯ್ (32) ಮೃತಪಟ್ಟಿದ್ದಾರೆ. ಬೈಕ್‌ಗೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದ ಬೈಕ್ ಸವಾರನನ್ನು ಸ್ವಲ್ಪ ದೂರ ಎಳೆದೊಗಿತ್ತು. ಇದರಿಂದ ತೀವ್ರ ಗಾಯಗೊಂಡ ಬೈಕ್ ಸವಾರ ವಿನಯ್ ಮತ್ತು ಆತನ ಸ್ನೇಹಿತ ಇಬ್ಬರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ವಿನಯ್‌ ಮೃತಪಟ್ಟಿದ್ದು, ಹಿಂಬದಿ ಸವಾರನಿಗೆ ಚಿಕಿತ್ಸೆ ಮುಂದುವರೆದಿದೆ. ಸದ್ಯ ಕಾರು ಚಾಲಕ ಹರಿನಾಥ್‌ ಎಂಬಾತನನ್ನು ಮಲ್ಲೇಶ್ವರ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಗದಗದಲ್ಲಿ ಭೀಕರ ಅಪಘಾತ

ಗದಗ ಜಿಲ್ಲೆಯ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ವಿಜಯಪುರ- ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ನಸುಕಿನ ಜಾವ 4 ಗಂಟೆ ಸುಮಾರಿಗೆ ಸರಣಿ ಅಪಘಾತ ನಡೆದಿದೆ. ಹುಬ್ಬಳ್ಳಿಯಿಂದ ಬಾಗಲಕೋಟೆ ಕಡೆ ಹೋಗುತ್ತಿದ್ದ ವಾಹನಗಳ ನಡುವೆ ಅಪಘಾತ ನಡೆದಿದೆ.

ಬೊಲೆರೋ ಪಿಕಪ್ ವಾಹನ ಎರ್ಟಿಗಾ ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಎರ್ಟಿಗಾ ಕಾರು ಚಾಲಕನ ನಿಯಂತ್ರಣ ತಪ್ಪಿ ಮುಂದಿನ ಕ್ಯಾಂಟರ್ ಡಿಕ್ಕಿಯಾಗಿದೆ. ಅದೃಷ್ಟವಾಶತ್‌ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಎರ್ಟಿಗಾ ಚಾಲಕ ಮತ್ತು ಸ್ನೇಹಿತ ಪಾರಾಗಿದ್ದಾರೆ. ಅಪಘಾತ ರಭಸಕ್ಕೆ ಕಾರು ‌ನಜ್ಜುಗುಜ್ಜಾಗಿದೆ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version