Site icon Vistara News

Road Accident : ಪ್ರತ್ಯೇಕ 5 ಕಡೆಗಳಲ್ಲಿ ಆ್ಯಕ್ಸಿಡೆಂಟ್‌; ಕಾರು ಡಿಕ್ಕಿಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಸವಾರ ಸಾವು

Road Accident

ಕೋಲಾರ/ಶಿವಮೊಗ್ಗ: ಪ್ರತ್ಯೇಕ ಕಡೆಗಳಲ್ಲಿ ಅಪಘಾತಗಳು (Road Accident ) ನಡೆದಿದ್ದು, ಸಾವು-ನೋವಿಗೆ ಕಾರಣವಾಗಿದೆ. ಕೋಲಾರದ ಶ್ರೀನಿವಾಸಪುರ ತಾಲೂಕಿನ ಕಲ್ಲೂರು ಗ್ರಾಮದ ಬಳಿ ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲ್ಲೂರು ಗ್ರಾಮದ ನಾಗರಾಜ (50) ಮೃತ ದುರ್ದೈವಿ.

ಚವರ್ಲೈಟ್ ಕಾರು ಹಾಗೂ ಸೂಪರ್ ಎಕ್ಸ್ ಎಲ್ ಸ್ಕೂಟರ್‌ ನಡುವೆ ಅಪಘಾತ ನಡೆದಿದೆ. ನಾಗರಾಜ ಅವರು ಸ್ಕೂಟರ್‌ನಲ್ಲಿ ಮನೆಯಿಂದ ತೋಟದ ಕಡೆಗೆ ಹೊರಟಿದ್ದರು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ನಾಗರಾಜ ರಸ್ತೆ ಬದಿಯ‌ ಡಿವೈಡರ್‌ ಹಾರಿ ಬಿದ್ದಿದ್ದಾರೆ. ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಕಾರಿಗೆ ಬೈಕ್‌ ಡಿಕ್ಕಿ; ಹಾರಿ ಬಿದ್ದ ಸವಾರರು

ಶಿವಮೊಗ್ಗ ತಾಲೂಕಿನ ಯಡೆಹಳ್ಳಿ ಗ್ರಾಮದ ಬಳಿ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಶಿವಮೊಗ್ಗದ ಕಡೆಯಿಂದ ಹೋಗುತ್ತಿದ್ದ ಕಾರಿಗೆ ಬೈಕ್‌ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂವರು ಯುವಕರಿಗೆ ಗಂಭೀರ ಗಾಯವಾಗಿದೆ.

ಹೊಳೆ ಬೈರನಹಳ್ಳಿ ಗ್ರಾಮದ ಮೂವರು ಯುವಕರು ಒಂದೇ ಬೈಕ್‌ ಹೊರಡುವಾಗ ನಿಯಂತ್ರಣ ತಪ್ಪಿ ಕಾರಿಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಮೂವರು ಹಾರಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರು. ಕೈ-ಕಾಲುಗಳಿಗೆ ಗಾಯವಾಗಿದ್ದು, ಮೂವರನ್ನು ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಕಾರು ರಿವರ್ಸ್‌ ತೆಗೆಯುವಾಗ ಸ್ಕೂಟಿಗೆ ಡಿಕ್ಕಿ

ಕಾರು ರಿವರ್ಸ್‌ ತೆಗೆಯುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಸ್ಕೂಟಿಗೆ ಡಿಕ್ಕಿಯಾಗಿದೆ. ಸ್ಕೂಟಿಯಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದೆ. ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರ ಸಂಡೇ ಮಾರ್ಕೆಟ್ ಬಳಿ ಕಾರು ಹಾಗೂ ಸ್ಕೂಟರ್‌ ನಡುವೆ ಅಪಘಾತ ಸಂಭವಿಸಿದೆ.

ಸ್ಕೂಟಿಯಲ್ಲಿದ್ದ ಎಲಿಜಬೆತ್ ಕಲ್ವಕುರಿ, ಯೇಸುದಾಸ್ ಕಲ್ವಕುರಿ ಎಂಬುವವರಿಗೆ ಗಂಭೀರ ಗಾಯವಾಗಿದೆ. ಮಹಿಳೆಯೊಬ್ಬರು ತಮ್ಮ ಕಾರನ್ನು ರಿವರ್ಸ್‌ ತೆಗೆಯುವಾಗ ಈ ಅವಘಡ ನಡೆದಿದೆ. ಗಾಯಾಳುಗಳು ಧಾರವಾಡ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Actor Darshan : ರೇಣುಕಾಸ್ವಾಮಿಯನ್ನು ಕೊಂದು ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ ಫೋನ್‌ ಮಾಡಿದ್ದು ಯಾರಿಗೆ?

ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿ

ಹಾಸನ ಹೊರವಲಯದ ಸಮುದ್ರವಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್‌ ಟ್ಯಾಂಕರ್‌ ಪಲ್ಟಿ ಹೊಡೆದಿದೆ. ಅಪಘಾತದಿಂದಾಗಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್, ಸಮುದ್ರವಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪಲ್ಟಿಯಾಗಿತ್ತು.

ಇತ್ತ ಗ್ಯಾಸ್ ಪಲ್ಟಿಯಾದ ವೇಳೆ ಡ್ರೈವಿಂಗ್ ಸೀಟ್‌ನಲ್ಲಿ ಚಾಲಕ ಸಿಲುಕಿಕೊಂಡಿದ್ದ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಚಾಲಕನನ್ನು ರಕ್ಷಿಸಿದರು. ಬಳಿಕ ಗ್ಯಾಸ್ ಟ್ಯಾಂಕರ್ ತೆರವುಗೊಳಿಸಿದರು. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿಂತಿದ್ದ ಬೈಕ್‌ಗಳಿಗೆ ಕಾರು ಡಿಕ್ಕಿ

ರಸ್ತೆ ಬದಿ ನಿಂತಿದ್ದ ಎರಡು ಬೈಕ್‌ಗಳಿಗೆ ಕಾರೊಂದು ಡಿಕ್ಕಿ ಹೊಡೆದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ದಾವಣಗೆರೆ ನಗರದ ವಿಮಾನ‌ಮಟ್ಟಿ ಚಕ್ ಪೋಸ್ಟ್ ಬಳಿ ಘಟನೆ ನಡೆದಿದೆ. ಕುಡಿದು ಕಾರು ಚಲಾಯಿಸಿದ್ದೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಹರಪ್ಪನಹಳ್ಳಿ ತಾಲೂಕಿನ ಅಣಜಿಕೆರೆ ಗ್ರಾಮದ ಪ್ರದೀಪ್, ಲೋಕೇಶ್ ಮದ್ಯಪಾನ ‌ಮಾಡಿ ಕಾರು ಚಲಾಯಿಸಿದವರು. ಸದ್ಯ ಗಾಯಗೊಂಡವರ ಗುರುತು ಪತ್ತೆಯಾಗಿಲ್ಲ. ಅಪಘಾತ ಆಗುತ್ತಿದ್ದಂತೆ ಕಾರಿ‌ನಲ್ಲಿದ್ದ ಒಬ್ಬನನ್ನು ‌ಹಿಡಿದು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಮತ್ತೊಬ್ಬ ಕಾರಿನಲ್ಲಿ ತಪ್ಪಿಸಿಕೊಂಡು ಹೋಗುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version