Site icon Vistara News

Road Accident : ಲಾರಿ ಡಿಕ್ಕಿಯಾಗಿ ಎರಡು ತುಂಡಾದರು ಬೈಕ್‌ ಸವಾರರು; ಕಾರಿನ ಬಡಿತಕ್ಕೆ ಮತ್ತಿಬ್ಬರು ಸಾವು

Accidents in Kalaburagi and Davangere Four people dead

ಕಲಬುರಗಿ/ದಾವಣಗೆರೆ: ಭೀಕರ ರಸ್ತೆ ಅಪಘಾತದಲ್ಲಿ (Road Accident) ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಶಹಬಾದ್ ತಾಲೂಕಿನ ಭಂಕೂರ ಗ್ರಾಮದಲ್ಲಿ ಕಾರುಗಳ ಮಧ್ಯೆ ಡಿಕ್ಕಿಯಾಗಿ ಇಬ್ಬರು ಸ್ಧಳದಲ್ಲೇ ಮೃತಪಟ್ಟಿದ್ದಾರೆ.

ಸ್ವೀಫ್ಟ್ ಕಾರಿನಲ್ಲಿದ್ದ ಮೂವರ ಪೈಕಿ ಇಬ್ಬರು ಸ್ಥಳದಲ್ಲೆ ಮೃತಪಟ್ಟರೆ, ಓರ್ವನ ಸ್ಥಿತಿ ಗಂಭೀರವಾಗಿದೆ. ಜಾಹೀದ್ ಪಠಾಣ್ (30), ಶಾಕೀರ್ (20) ಮೃತ ದುರ್ದೈವಿಗಳು. ಮೃತರು ಉತ್ತರಪ್ರದೇಶ ಮೂಲದ ಬಟ್ಟೆ ವ್ಯಾಪಾರಿಗಳೆಂದು ತಿಳಿದು ಬಂದಿದೆ.

ರಂಜಾನ್ ಹಿನ್ನೆಲೆಯಲ್ಲಿ ಬಟ್ಟೆ ವ್ಯಾಪಾರ ಮುಗಿಸಿಕೊಂಡು ಕಲಬುರಗಿಯಿಂದ ಯಾದಗಿರಿಗೆ ಹೋಗುತ್ತಿರುವಾಗ ಅಪಘಾತ ಸಂಭವಿಸಿದೆ. ಶಹಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಹಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಚಿನ್ನದಂಗಡಿಯಲ್ಲಿ ಕಳವಿಗೆ ಯತ್ನಿಸಿದ ನಾಲ್ವರು ಅಂದರ್;‌ ಗುಂಡು ಹಾರಿಸಿದವರಿಗೇ ಗುಂಡೇಟು

Accidents in Kalaburagi and Davangere Four people dead

ಬೈಕ್‌ಗೆ ಟಿಪ್ಪರ್‌ ಲಾರಿ ಡಿಕ್ಕಿ; ಬೈಕ್‌ ಸವಾರರು ಸಾವು

ಬೈಕ್‌ಗೆ ಹಿಂದಿನಿಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಅಪಘಾತ ನಡೆದಿದೆ. ಬಾತಿ ಗ್ರಾಮದ ರಾಕೇಶ್ (22), ಆಕಾಶ್ (23 ) ಮೃತ ದುರ್ದೈವಿಗಳು.

ಟಿಪ್ಪರ್ ಲಾರಿ ಚಾಲಕನ ಅಜಾಗರೂಕತೆಯಿಂದಲೇ ಈ ಅಪಘಾತ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಸವಾರರಿಬ್ಬರ ದೇಹವು ತುಂಡಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಹರಿಹರ ತಾಲೂಕು ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರು-ಮೈಸೂರು ಫ್ಲೈಓವರ್‌ನಿಂದ ಕೆಳಗೆ ಬಿದ್ದ ಕಾರು; ರಕ್ತಕಾರಿ ಮೃತಪಟ್ಟ ಚಾಲಕ

ವಾಹನ ಚಲಾಯಿಸುವಾಗ ಸ್ವಲ್ಪ ಮೈಮರೆತರೂ ಸಾವಿನ ದಾರಿ ತೆರೆದುಕೊಳ್ಳುತ್ತದೆ. ಅತಿವೇಗ ಚಾಲನೆಯು ತಂದ ಆಪತ್ತು ಕಾರು ಚಾಲಕನ ಪ್ರಾಣವನ್ನೇ ಕಸಿದಿದೆ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಫ್ಲೈಓವರ್‌ನಿಂದ ಕೆಳಗೆ ಬಿದ್ದಿದೆ. ಕಾರಿನಿಂದ ಬೇರ್ಪಟ್ಟು ಮೇಲಿಂದ ಬಿದ್ದ ಚಾಲಕ ರಕ್ತಕಾರಿ ಮೃತಪಟ್ಟಿದ್ದಾರೆ. ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿ ಬಳಿಯ ನೇಟಸ್ ಶಾಲೆ ಸಮೀಪ ಘಟನೆ ನಡೆದಿದೆ. ಮದ್ದೂರು ತಾಲೂಕಿನ ಕಸ್ತೂರು ಗ್ರಾಮದ ಅಭಿಷೇಕ್ ಮೃತ ದುರ್ದೈವಿ.

ಫ್ಲೈಓವರ್‌ ಮೇಲೆ ಅತೀವೇಗವಾಗಿ ಬಂದಾಗ ನಿಯಂತ್ರಣ ತಪ್ಪಿದ್ದು, ಈ ವೇಳೆ ಹೆದ್ದಾರಿಯಿಂದ ಅಂಡರ್ ಪಾಸ್‌ಗೆ ಕಾರು ಉರುಳಿದೆ. ಕಾರು ಬಿದ್ದಿರುವ ರಭಸಕ್ಕೆ ಸಂಪೂರ್ಣ ಛಿದ್ರಗೊಂಡಿದೆ. ಇತ್ತ ಕಾರಿನಲ್ಲಿದ್ದ ಏರ್‌ಬ್ಯಾಗ್‌ ಓಪನ್‌ ಆಗಿದ್ದು, ಸ್ಟೇರಿಂಗ್‌ ಹೊರಗೆ ಬಂದಿದೆ. ಅಂಡರ್‌ ಪಾಸ್‌ಗೆ ಕಾರು ಬಿದ್ದಾಗ ಅಲ್ಲಿ ಇತರೆ ವಾಹನ ಸವಾರರು ಇರಲಿಲ್ಲ. ಹೀಗಾಗಿ ಸಂಭವಿಸಬಹುದಾದ ಮತ್ತೊಂದು ಅವಘಡ ತಪ್ಪಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾಮನಗರ ಟ್ರಾಫಿಕ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಅಪಘಾತದಿಂದಾಗಿ ಕೆಲಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version