ಕೋಲಾರ: ವಾಹನವನ್ನು ರಸ್ತೆಗಿಳಿಸುವ ಮುನ್ನ ಎಷ್ಟೇ ಎಚ್ಚರಿಕೆಯನ್ನೂ ವಹಿಸಿದರೂ ಕಡಿಮೆಯೇ. ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ಸಾವು-ನೋವು ಸಂಭವಿಸಿದೆ. ಸಂಚಾರಿ ಪೊಲೀಸರು ಸಾಕಷ್ಟು ಜಾಗೃತಿ ಮೂಡಿಸಿದರೂ, ರಸ್ತೆ ಅಪಘಾತದಂತಹ ಪ್ರಕರಣಗಳು (Road Accident) ಮಾತ್ರ ಕಡಿಮೆ ಆಗುತ್ತಿಲ್ಲ. ಸದ್ಯ ಅತಿ ವೇಗ ಚಾಲನೆಯು ಹೇಗೆ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬುದು ಕಾರಿನ ಡ್ಯಾಶ್‌ಬೋರ್ಡ್‌ನ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಬೂದಿಕೋಟೆ ಮೇಲ್ಸೇತುವೆ ಮೇಲೆ ಘಟನೆ ನಡೆದಿದೆ. ಬೈಕ್‌ವೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರ ಗಂಭೀರ ಗಾಯಗೊಂಡಿದ್ದಾರೆ. ಬೂದಿಕೋಟೆ ಗ್ರಾಮದ ನಾಗರಾಜಪ್ಪ ಗಾಯಗೊಂಡವರು. ನಾಗರಾಜಪ್ಪ ಫ್ಲೈಓವರ್‌ನಲ್ಲಿ ಬೈಕ್‌ನಲ್ಲಿ ವೇಗವಾಗಿ ಬರುತ್ತಿದ್ದರು. ಇದೇ ವೇಳೆ ಎದುರಿಗೆ ಮಾರುತಿ ಬ್ರಿಜಾ ಕಾರು ಬರುತ್ತಿತ್ತು.
ಬೈಕ್ ವೇಗವಾಗಿ ಇದ್ದರಿಂದ ತಿರುವಿನಲ್ಲಿ ಸವಾರನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿದೆ. ನೋಡನೋಡುತ್ತಿದ್ದಂತೆ ಎದುರಿಗೆ ಬಂದ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಕಾರಿನಡಿ ಸಿಲುಕಿದ ನಾಗರಾಜಪ್ಪ ಗಂಭೀರ ಗಾಯಗೊಂಡಿದ್ದಾರೆ. ಇದೆಲ್ಲವೂ ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರಲ್ಲಿ ನಿಲ್ಲದ ರೋಡ್ ರೇಜ್ ಕೇಸ್
ರಾಜಧಾನಿ ಬೆಂಗಳೂರಲ್ಲಿ ರೋಡ್ ರೇಜ್ ಪ್ರಕರಣಗಳು ಮುಂದುವರಿದಿದೆ. ಆಟೋ ಚಾಲಕನೊಬ್ಬ ಕುಡಿದು ಗಾಡಿ ಓಡಿಸಿದ್ದಲ್ಲದೇ ದರ್ಪ ತೋರಿದ್ದಾನೆ. ಫೆ.1ರಂದು ಬೇಗೂರು ಮುಖ್ಯ ರಸ್ತೆಯ ಯೆಲ್ಲೇನಹಳ್ಳಿ ಬಳಿ ಘಟನೆ ನಡೆದಿದೆ.
ಆಟೋ ಚಾಲಕ ರೈಟ್ ಸೈಡ್ ಇಂಡಿಕೇಟರ್ ಹಾಕಿಕೊಂಡು ನಿಧಾನವಾಗಿ ಹೋಗುತ್ತಿದ್ದ. ಇತ್ತ ಹಿಂದೆ ಬರುತ್ತಿದ್ದ ಕಾರಿನ ಚಾಲಕನಿಗೆ ಓವರ್ ಟೇಕ್ ಮಾಡಲು ಕಷ್ಟವಾಗುತ್ತಿತ್ತು. ಆಟೋ ಚಾಲಕ ಯಾವ ಕಡೆ ಚಲಿಸುತ್ತಾನೆಂದು ತಿಳಿಯುತ್ತಿರಲಿಲ್ಲ. ಹೀಗಾಗಿ ಆಟೋ ಚಾಲಕನಿಗೆ ಇಂಡಿಕೇಟರ್ ಆಫ್ ಮಾಡುವಂತೆ ಹೇಳಿದ್ದ. ಇಷ್ಟಕ್ಕೆ ಕೋಪಗೊಂಡ ಆಟೋ ಚಾಲಕ ಕಾರನ್ನು ಅಡ್ಡಗಟ್ಟಿ ಅವಾಜ್ ಹಾಕಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಆಟೋ ಚಾಲಕನ ವರ್ತನೆಗೆ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆಟೋ ಚಾಲಕ ರೌಡಿಸಂ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ