ವಿಜಯನಗರ/ದೊಡ್ಡಬಳ್ಳಾಪುರ: ರಾಜ್ಯದ ಎರಡು ಕಡೆ ಸಂಭವಿಸಿದ ರಸ್ತೆ ಅಪಘಾತದಲ್ಲಿ (Road Accident) ಇಬ್ಬರು ಮೃತಪಟ್ಟಿದ್ದಾರೆ. ಈ ಎರಡೂ ಅಪಘಾತಕ್ಕೆ “ನಾಯಿ” ಕಾರಣವಾಗಿದೆ. ರಸ್ತೆಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋದ ಪರಿಣಾಮವೇ ಈ ಅವಘಡಗಳು ಸಂಭವಿಸಿದ್ದು, ಇಬ್ಬರ ಜೀವವನ್ನು (Two persons Killed) ತೆಗೆದಿದೆ!
ವಿಜಯನಗರ ಜಿಲ್ಲೆಯ ಉಜ್ಜಯಿನಿಯ ಪ್ರಾಥಮಿಕ ಆರೋಗ್ಯ ಕೇಂದ್ರದ (Ujjain Primary Health Centre) ಮುಂಭಾಗ ಕಾರು ಪಲ್ಟಿಯಾಗಿ (Car Accident) ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಭಾನುವಾರ (ಸೆಪ್ಟೆಂಬರ್ 10) ನಡೆದಿದೆ. ಕಾರಿಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕದ ಗುಂಡಿಗೆ ಕಾರು ಉರುಳಿದೆ ಎಂದು ಹೇಳಲಾಗಿದೆ. ಕಾರಿನಲ್ಲಿದ್ದ ಉಳಿದಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಕಾಶ್ ಎಂಬ ಶಿಕ್ಷಕ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕೊಟ್ಟೂರಿನ ಕೊಟ್ಟೂರೇಶ್ವರ ಶಾಲೆಯಲ್ಲಿ (Kottureshwara School) ಪ್ರಕಾಶ್ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಿಂದ ಕೊಟ್ಟೂರು ತಾಲೂಕಿಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಇದನ್ನೂ ಓದಿ: Basavaraja Bommai : ನೋ ವೇ, ಚಾನ್ಸೇ ಇಲ್ಲ; ಲೋಕಸಭೆಗೆ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ ಎಂದ ಬಸವರಾಜ ಬೊಮ್ಮಾಯಿ
ಇವರು ತಮ್ಮ ತಂದೆ ತಾಯಿಯನ್ನು ಕರೆದುಕೊಂಡು ಬರುವಾಗ ಅಪಘಾತವಾಗಿದೆ. ಶಿಕ್ಷಕರಿಗೆ ಸಂಬಂಧಪಟ್ಟಂತೆ ಸೋಮವಾರ ಕೊಟ್ಟೂರಲ್ಲಿ ನಡೆಯಲಿದ್ದ ಕಾರ್ಯಕ್ರಮಕ್ಕೆ ನೆನಪಿನ ಕಾಣಿಕೆಯನ್ನು ಈ ವೇಳೆ ಪ್ರಕಾಶ್ ತರುತ್ತಿದ್ದರು. ಅಲ್ಲದೆ, ಈ ಕಾರ್ಯಕ್ರಮಕ್ಕಾಗಿ ಪೋಷಕರನ್ನು ಕರೆತರಲು ಹೋಗಿದ್ದರು ಎನ್ನಲಾಗಿದೆ.
ಪ್ರಕಾಶ್ ಅವರೇ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಕಾರು ವೇಗವಾಗಿತ್ತು ಎನ್ನಲಾಗಿದೆ. ಅಲ್ಲದೆ, ಕಾರಿಗೆ ನಾಯಿಯೊಂದು ಅಡ್ಡಲಾಗಿ ಬಂದಿದೆ. ಅದನ್ನು ತಪ್ಪಿಸಲು ಹೋದಾಗ ಪಕ್ಕದಲ್ಲಿದ್ದ ಗುಂಡಿಗೆ ಕಾರು ಉರುಳಿದೆ. ಕಾರಿನಲ್ಲಿದ್ದ ಪ್ರಕಾಶ್ ತಂದೆ – ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಪಲ್ಟಿ ಆಗಿದ್ದರಿಂದ ಕಾರ್ಯಕ್ರಮಕ್ಕೆಂದು ತಂದಿದ್ದ ನೆನಪಿನ ಕಾಣಿಕೆಗಳು ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಕೊಟ್ಟೂರಿನ ಶಿಕ್ಷಕರ ಸಂಘದಲ್ಲಿ ನೀರವ ಮೌನ ಆವರಿಸಿದೆ. ಉಜ್ಜಯಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಯಿ ತಪ್ಪಿಸಲು ಹೋಗಿ ಬಲಿಯಾದ ಮಹಿಳೆ
ದೊಡ್ಡಬಳ್ಳಾಪುರ: ಬೈಕ್‌ಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಕೆಳಗೆ ಬಿದ್ದ ಮಹಿಳೆಯ ಮೇಲೆ ಲಾರಿ ಹರಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ದೊಡ್ಡಬಳ್ಳಾಪುರ ಕೊಂಗಾಡಿಯಪ್ಪ ಕಾಲೇಜು ಬಳಿ ಘಟನೆ ನಡೆದಿದೆ.
ದ್ವಿಚಕ್ರದಲ್ಲಿ ಹೋಗುವಾಗ ಏಕಾಏಕಿ ನಾಯಿ ರಸ್ತೆಗೆ ನುಗ್ಗಿ ಅಡ್ಡ ಬಂದಿದೆ. ನಾಯಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ಮಹಿಳೆ ಮೇಲೆ ಹಿಂದಿನಿಂದ ಬಂದ ಲಾರಿ ಹರಿದಿದೆ. ನಂದಿನಿ (28) ಮೃತ ಮಹಿಳೆ. ಕೆಳಗೆ ಬಿದ್ದ ದ್ವಿಚಕ್ರ ವಾಹನ ಸಮೇತ ಮಹಿಳೆಯನ್ನು ಲಾರಿ ಎಳೆದುಕೊಂಡು ಹೋಗಿದೆ.
ಇದನ್ನೂ ಓದಿ: Karnataka Politics: ಇನ್ನೂ ಆಯ್ಕೆಯಾಗದ ವಿರೋಧ ಪಕ್ಷದ ನಾಯಕ; ರಾಜ್ಯ ಬಿಜೆಪಿಗೆ ಲೀಗಲ್ ನೋಟಿಸ್
ಹೋಂಡಾ ಆ್ಯಕ್ಟಿವಾ ದ್ವಿಚಕ್ರ ವಾಹನದಲ್ಲಿ ನಂದಿನಿ ಮತ್ತು ಅವರ ಮಗು ತೆರಳುತ್ತಿದ್ದರು. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ. ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಮಹಿಳೆ ಸಾವಿಗೀಡಾದರು. ಕೂಡಲೇ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತಾದರೂ ಬದುಕುಳಿಯಲಿಲ್ಲ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Road Accident: ಕಾಂಕ್ರೀಟ್ ಲಾರಿ ಗುದ್ದಿ ಪಾದಚಾರಿ ಸಾವು
ಬೆಂಗಳೂರು: ಕಾಂಕ್ರೀಟ್ ಲಾರಿ ಗುದ್ದಿ (Road Accident) ಪಾದಚಾರಿಯೊಬ್ಬರು ಸಾವಿಗೀಡಾಗಿದ್ದಾರೆ. ನಾಗವಾರದ ಮಹೇಂದ್ರ ಕುಮಾರ್ (50) ಮೃತ ವ್ಯಕ್ತಿ.
ಜೆಎಂಜೆ ರಸ್ತೆಯ ಜೂಡಿಯ ಶಾಪಿಂಗ್ ಮಾಲ್ ಬಳಿ ಅಪಘಾತ ನಡೆದಿತ್ತು. ಸಂಜೆ 7 ಗಂಟೆ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದ ಮಹೇಂದ್ರ ಅವರಿಗೆ ಲಾರಿ ಬಡಿದಿತ್ತು. ಲಾರಿ ಚಾಲಕನನ್ನು ಕೆ.ಜಿ ಹಳ್ಳಿ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆ.ಜಿ. ಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.