Site icon Vistara News

Road Accident : ಕಾರು ಡ್ರೈವಿಂಗ್‌ ಕಲಿಯುವಾಗ ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದಳು; ಡೆಡ್ಲಿ ಆಕ್ಸಿಡೆಂಟ್‌ಗೆ ಬಾಲಕಿ ಬಲಿ

Road Accident in Bengaluru

ಬೆಂಗಳೂರು: ಮಹಿಳೆಯೊಬ್ಬರು ಕಾರು ಕಲಿಯುವಾಗ (Car Driving) ನಿಯಂತ್ರಣ ತಪ್ಪಿದ್ದು, ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಗೆ ಗುದ್ದಿದೆ. ಪರಿಣಾಮ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬಾಲಕಿಗೆ (Road Accident) ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಗ್ರಾಮದಲ್ಲಿ ಅಪಘಾತ ನಡೆದಿದೆ.

ಕಗ್ಗಲೀಪುರದ ನಿವಾಸಿಗಳಾದ ವೆಂಕಟೇಶ್‌ ಮತ್ತು ಲಕ್ಷ್ಮೀ ದಂಪತಿಯ ಮಗಳು ನಾಗಲಕ್ಷ್ಮೀ (7) ಮೃತ ದುರ್ದೈವಿ. ಪಕ್ಕದ ಮನೆಯ ಮಹಿಳೆಯೊಬ್ಬರು ಕಾರು ಕಲಿಯಲು ಮುಂದಾಗಿದ್ದರು. ಇದೇ ವೇಳೆ ನಾಗಲಕ್ಷ್ಮೀ ಮನೆ ಮುಂದೆ ಆಟವಾಡುತ್ತಿದ್ದಳು. ಕಾರು ಓಡಿಸುವಾಗ ನಿಯಂತ್ರಣ ತಪ್ಪಿದ್ದು ಏಕಾಏಕಿ ವೇಗವಾಗಿ ಬಂದು ನಾಗಲಕ್ಷ್ಮಿಗೆ ಗುದ್ದಿ, ಮನೆಯೊಂದರ ತಡೆಗೋಡೆ ಡಿಕ್ಕಿ ಹೊಡೆದು ನಿಂತಿದೆ. ನಾಗಲಕ್ಷ್ಮೀ ತಲೆಗೆ ಪೆಟ್ಟು ಬಿದ್ದಿದ್ದು, ರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ. ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದಿದ್ದೆ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.

ಮೃತಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಕಗ್ಗಲೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ. ಅಪಘಾತ ಮಾಡಿದ ಮಹಿಳೆಯನ್ನು ವಶಕ್ಕೆ ಪಡೆದು ಕಾರನ್ನು ಸೀಜ್‌ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ರಸ್ತೆ ತಡೆದು ಪ್ರತಿಭಟನೆ

ಮಗು ಆಟವಾಡುತ್ತಿರುವಾಗ ಕಾರು ಹತ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಮೃತದೇಹ ಹಿಡಿದು ರಸ್ತೆ ತಡೆದು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಕನಕಪುರ ರಸ್ತೆಯಲ್ಲಿ ಪ್ರತಿಭಟಿಸಿದ ಮೃತ ಕುಟುಂಬಸ್ಥರು ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿದರು. ದಿಢೀರ್‌ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅರ್ಧ ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್ ಆದ ಕಾರಣ ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಹರಸಾಹಸ ಪಟ್ಟರು.

ಚಿಕ್ಕೋಡಿಯಲ್ಲಿ ಸರಣಿ ಅಪಘಾತ; ಮೂವರ ಸ್ಥಿತಿ ಗಂಭೀರ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಹೊರವಲಯದ ಮಾಹಲಿಂಗಪುರ-ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಬೃಹತ್ ಲಾರಿ- ಕಾರು ಹಾಗೂ ಎರಡು ಬೈಕುಗಳ ನಡುವೆ ಅಪಘಾತ ನಡೆದಿದೆ. ಅಪಘಾತ ತೀವ್ರತೆಗೆ ಮೂವರ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಚಿಕ್ಕೋಡಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

ಇದನ್ನೂ ಓದಿ: Hassan Accident: ಹಾಸನದಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಐವರ ದುರ್ಮರಣ

ಬಸ್‌ಗೆ ಸ್ಕೂಟರ್‌ ಡಿಕ್ಕಿ; ಸವಾರನ ಪ್ರಾಣವನ್ನೇ ಕಸಿದ ಅತಿ ವೇಗ ಚಾಲನೆ

ಕಾರವಾರ: ಬಸ್‌ಗೆ ಸ್ಕೂಟರ್‌ ಡಿಕ್ಕಿಯಾಗಿದ್ದು, ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರ ಕನ್ನಡದ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರ ಹಳದೀಪುರ ಗ್ರಾಮದ ಬಳಿ ಘಟನೆ (Road Accident) ನಡದಿದೆ. ಸವಾರ ಶಂಕರ ಹೆಗಡೆ (50) ಮೃತ ದುರ್ದೈವಿ.

ಕೆಎಸ್‌ಆರ್‌ಟಿಸಿ ಬಸ್‌ ಭಟ್ಕಳ ಭಾಗದಿಂದ ಕುಮಟಾದತ್ತ ತೆರಳುತ್ತಿತ್ತು. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಸ್ಕೂಟರ್‌ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸ್ಕೂಟರ್‌ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಂಭೀರ ಗಾಯಗೊಂಡ ಶಂಕರ ಅವರು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಲ್ಲಿ ಬಸ್‌ ಮುಂಭಾಗ ಹಾನಿಯಾಗಿದ್ದು, ಅದೃಷ್ಟವಶಾತ್‌ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version