ಉಡುಪಿ: ವಾಹನಗಳಿಗೆ ನಾಯಿಗಳು ಅಡ್ಡ ಬಂದು ಅಪಘಾತ (Road Accident) ಸಂಭವಿಸುವ ಪ್ರಕರಣಗಳು ಹೆಚ್ಚುತ್ತಿವೆ. ಹಠಾತ್ತಾಗಿ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋದಾಗ ಬೈಕ್‌ನಿಂದ ಕೆಳಗೆ ಬಿದ್ದು ನವವಿವಾಹಿತೆ ಮೃತಪಟ್ಟಿದ್ದಾಳೆ. ಕಾರ್ಕಳ ತೆಳ್ಳಾರು ನಿವಾಸಿ ನೀಕ್ಷಾ ಮೃತಪಟ್ಟವರು.
ಎರಡು ತಿಂಗಳ ಹಿಂದಷ್ಟೇ ವಿಶಾಲ್ ಎಂಬುವರೊಂದಿಗೆ ನೀಕ್ಷಾ ಮದುವೆಯಾಗಿದ್ದರು. ಮಂಗಳೂರು ತೆರಳುವ ಖಾಸಗಿ ಬಸ್ ಏರಲು ಪತಿಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಉಡುಪಿಯ ಈದು ಗ್ರಾಮದ ಹೊಸ್ಮಾರು ಸೇತುವೆ ಬಳಿ ಬೈಕ್‌ಗೆ ಅಚಾನಕ್ ಆಗಿ ಶ್ವಾನ ಅಡ್ಡ ಬಂದಿದೆ.
ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋದಾಗ ಬೈಕ್‌ನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮುಗುಚಿ ಬಿದ್ದಿದ್ದಾರೆ. ಬೈಕ್ ಹಿಂಭಾಗದಲ್ಲಿದ್ದ ನೀಕ್ಷಾ, ರಸ್ತೆಗೆ ಎಸೆಯಲ್ಪಟ್ಟಿದ್ದು, ತಲೆಗೆ ಗಂಭೀರವಾಗಿದೆ. ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ವಿಶಾಲ್ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Road Accident: ಭೀಕರ ರಸ್ತೆ ಅಪಘಾತ; 2 ಕಾರು ಮುಖಾಮುಖಿ ಡಿಕ್ಕಿಯಾಗಿ 6 ಮಂದಿ ಸಾವು
ಸವಾರನ ಬಲಿ ಪಡೆದ ಬೊಲೆರೋ ವಾಹನ
ಚಿಕ್ಕಬಳ್ಳಾಪುರ: ಬೊಲೆರೋ ವಾಹನಕ್ಕೆ ಬೈಕ್ ಸವಾರ ಬಲಿಯಾಗಿದ್ದಾನೆ. ಚಿಕ್ಕಬಳ್ಳಾಪುರದ ಗುಡಿಬಂಡೆ – ಪೆರೇಸಂದ್ರ ಮಾರ್ಗದ ಕಮ್ಮಗುಟ್ಟಹಳ್ಳಿ ಕ್ರಾಸ್‌ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ನಾಗೇಶ್(21) ಮೃತ ದುರ್ದೈವಿ.
ಗುಡಿಬಂಡೆ ತಾಲೂಕಿನ ಗರುಡಾಚಾರ್ಲಹಳ್ಳಿ ಗ್ರಾಮದ ನಾಗೇಶ್ ಬೈಕ್‌ನಲ್ಲಿ ಬರುವಾಗ ಜಿಲಿಟಿನ್ ಸ್ಫೋಟಕ ತುಂಬಿದ್ದ ಬೊಲೆರೋ ವಾಹನದ ನಡುವೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ನಾಗೇಶ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ.
ಇತ್ತ ಅಪಘಾತ ಸಂಭವಿಸುತ್ತಿದ್ದಂತೆ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಹಿರೇನಾಗವಲ್ಲಿ ಬೆಟ್ಟ ಸುತ್ತಮುತ್ತ ಕಲ್ಲು ಗಣಿಗಾರಿಕೆಗೆ ಸ್ಫೋಟಗಳನ್ನು ವಾಹನದಲ್ಲಿ ಸಾಗಿಸುತ್ತಿದ್ದರು. ಅತಿ ವೇಗದಿಂದ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದಾನೆ.
ಇತ್ತೀಚೆಗೆ ಟಿಪ್ಪರ್‌ಗಳು, ಜಿಲೆಟಿನ್ ವಾಹನಗಳಿಗೆ ಹತ್ತಾರು ಜನ ಬಲಿಯಾಗಿದೆ. ಕಲ್ಲು ಗಣಿಗಾರಿಕೆಯಿಂದ ಸಾಕಷ್ಟು ಅವಾಂತರವೇ ಸೃಷ್ಟಿಯಾಗಿದೆ. ಘಟನಾ ಸ್ಥಳಕ್ಕೆ ಪೆರೇಸಂದ್ರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪರಾರಿ ಆದ ಚಾಲಕನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಬಳ್ಳಾರಿಯಲ್ಲಿ ಬಸ್ ಡಿಕ್ಕಿಗೆ ಕರು ಸಾವು
ಚಾಲಕನ ನಿರ್ಲಕ್ಷ್ಯಕ್ಕೆ ಕರುವೊಂದು ಮೃತಪಟ್ಟಿದೆ. ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕರು ಜೀವ ಬಿಟ್ಟಿದೆ. ಬಳ್ಳಾರಿ ನಗರದ ಮೋಕಾ ರಸ್ತೆಯ ಬಸವೇಶ್ವರ ಸರ್ಕಲ್ ಬಳಿ ಘಟನೆ ನಡೆದಿದೆ. ಹಸುಗಳು ರಸ್ತೆ ದಾಟುವ ವೇಳೆ ಆಕಳು ಕರುವಿಗೆ ಜಿಂದಾಲ್ ಕಾರ್ಖಾನೆಯ ಬಸ್ ಡಿಕ್ಕಿ ಹೊಡೆದಿದೆ. ತೀವ್ರ ರಕ್ತಸ್ರಾವದಿಂದ ಕರು ರಸ್ತೆಯಲ್ಲೇ ಪ್ರಾಣ ಬಿಟ್ಟಿದೆ. ಇತ್ತ ಸತ್ತ ಕರುವನ್ನು ನೋಡಿ ತಾಯಿ ಹಸು ರೋಧಿಸುತ್ತಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ