ಶಿವಮೊಗ್ಗ: ಸವಾರನ ನಿಯಂತ್ರಣ ತಪ್ಪಿದ ಸ್ಕೂಟರ್ ಅಪಘಾತಕ್ಕೀಡಾಗಿದ್ದು, ನಡು ರಸ್ತೆಯಲ್ಲಿ ದಂಪತಿ (Road Accident) ಗೋಳಾಡಿದ್ದಾರೆ. ಶಿವಮೊಗ್ಗದ ಸಾಗರ ತಾಲೂಕಿನ ಆನಂದಪುರ ಸಮೀಪದ ಹೊಸಗುಂದ ಬಳಿ ಘಟನೆ ನಡೆದಿದೆ. ಸ್ಕೂಟರ್ ಪಲ್ಟಿಯಾದ ಹಿನ್ನೆಲೆಯಲ್ಲಿ ದಂಪತಿ ರಸ್ತೆ ಬದಿ ಬಿದ್ದು ನರಳಾಡುತ್ತಿದ್ದರು. ಇದೇ ಮಾರ್ಗದಲ್ಲಿ ಆನಂದಪುರ ಕಡೆಗೆ ಆಗಮಿಸುತ್ತಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ ನೆರವಿಗೆ ಧಾವಿಸಿದ್ದಾರೆ.
ಅಪಘಾತದಿಂದ ಒದ್ದಾಡುತ್ತಿದ್ದ ಗಾಯಾಳು ದಂಪತಿಯನ್ನು ಕೂಡಲೇ ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅದೃಷ್ಟವಶಾತ್ ಶಾಸಕರ ಸಮಯ ಪ್ರಜ್ಞೆಯಿಂದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾಸನದಲ್ಲಿ ಕುಡುಕ ಚಾಲಕನಿಗೆ ಧರ್ಮದೇಟು
ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಓಡಿಸಿದ ಚಾಲಕನೊಬ್ಬ ಸಾರಿಗೆ ಬಸ್‌ಗೆ ಅಡ್ಡ ಹಾಕಿದ್ದಾನೆ. ಬಳಿಕ ಬಸ್‌ವೊಳಗೆ ಹೋಗಿ ಬಸ್ ಡೈವರ್‌ಗೆ ಅವಾಜ್ ಹಾಕಿದ್ದಾನೆ. ಇದರಿಂದ ಸಿಟ್ಟಾದ ಚಾಲಕ ಹಾಗೂ ಪ್ರಯಾಣಿಕರು ಕುಡುಕನಿಗೆ ಧರ್ಮದೇಟು ನೀಡಿದ್ದಾರೆ.
ಹಾಸನ: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದಲ್ಲದೇ, ಕುಡುಕನೊಬ್ಬ ಸಾರಿಗೆ ಬಸ್‌ಗೆ ಅಡ್ಡಲಾಗಿ ಕಾರು ನಿಲ್ಲಿಸಿ ಅವಾಜ್ ಹಾಕಿದ್ದಾನೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಭೈರಾಪುರ ಬಳಿ ಘಟನೆ ನಡೆದಿದೆ. ಬಸ್‌ವೊಳಗೆ ನುಗ್ಗಿ ದಾಂಧಲೆ ಮಾಡುತ್ತಿದ್ದ ಕುಡುಕನಿಗೆ ಜನರು ಧರ್ಮದೇಟು ನೀಡಿದ್ದಾರೆ.
ಸಾರಿಗೆ ಬಸ್ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿತ್ತು. ಕಂಠಪೂರ್ತಿ ಕುಡಿದು ಹಾಸನದ ಕಡೆಗೆ ಬರುತ್ತಿದ್ದ ಕಾರು ಚಾಲಕ, ಅದೇ ಮತ್ತಿನಲ್ಲಿ ಎದುರಿಗೆ ಬಂದ ಬಸ್‌ಗೆ ಅಡ್ಡಹಾಕಿದ್ದಾನೆ. ಮಾತ್ರವಲ್ಲ ಬಸ್ಸಿನಲ್ಲಿ ಇದ್ದವರಿಗೆ ಅವಾಜ್ ಹಾಕಿ ನಿಂದಿಸಿದ್ದಾನೆ. ಈತನ ಹುಚ್ಚಾಟಕ್ಕೆ ಸಿಟ್ಟಾದ ಪ್ರಯಾಣಿಕರು, ಚಾಲಕನೊಟ್ಟಿಗೆ ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Self Harming : ವೆಗಾ ಸಿಟಿ ಮಾಲ್ ಮೇಲಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ
ಕುಸಿದು ಬಿದ್ದ ಮನೆಯ ಚಾವಣಿ; ಮಣ್ಣಿನಡಿ ಸಿಲುಕಿ ಮಕ್ಕಳಿಬ್ಬರು ಸಾವು
ಬಾಗಲಕೋಟೆ: ಮನೆಯ ಚಾವಣಿ ಕುಸಿದ ಪರಿಣಾಮ ಇಬ್ಬರು ಮಕ್ಕಳು ದಾರುಣವಾಗಿ (Rooftop collapse) ಮೃತಪಟ್ಟಿದ್ದಾರೆ. ಬಾಗಲಕೋಟೆಯ ಕಂದಗಲ್ಲ ಗ್ರಾಮದಲ್ಲಿ ಘಟನೆ ನಡೆದಿದೆ. ಗೀತಾ ಈಶ್ವರಯ್ಯಾ ಆದಾರಪುರಮಠ (15), ರುದ್ರಯ್ಯಾ ಈಶ್ವರಯ್ಯಾ ಆದಾಪುರಮಠ (10) ಮೃತ ದುರ್ದೈವಿಗಳು.
40-50 ವರ್ಷಗಳಷ್ಟು ಹಳೆಯ ಮನೆಗೆ ಮಣ್ಣಿನ ಚಾವಣಿ ಇತ್ತು. ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮನೆ ಸೋರಿಕೆಯಾಗಿತ್ತು. ಈ ವೇಳೆ ಚಾವಣಿಗೆ ಮಣ್ಣು ಹಾಕಿ ತಟ್ಟಿ ಸರಿಮಾಡಿಕೊಂಡಿದ್ದರು. ಆದರೆ ಶುಕ್ರವಾರ ಏಕಾಏಕಿ ಮನೆ ಚಾವಣಿ ಕುಸಿದಿದೆ. ಮನೆಯೊಳಗೆ ಇದ್ದ ಮಕ್ಕಳಿಬ್ಬರ ಮೇಲೆ ರಭಸವಾಗಿ ಮಣ್ಣು ಬಿದ್ದಿದೆ.
ಈ ದುರ್ಘಟನೆ ನಡೆದಾಗ ಮನೆಯಲ್ಲಿ ಮಕ್ಕಳ ತಂದೆ-ತಾಯಿ ಇರಲಿಲ್ಲ. ಮಕ್ಕಳ ಮೇಲೆ ಚಾವಣಿ ಬಿದ್ದ ಪರಿಣಾಮ ಹೊರಬರಲು ಆಗದೆ ಮಣ್ಣಲ್ಲಿ ಸಿಲುಕಿದ್ದಾರೆ. ಇತ್ತ ಕೂಡಲೇ ಸ್ಥಳೀಯರ ಸಹಾಯದಿಂದ ಮಕ್ಕಳನ್ನು ಹೊರತೆಗೆಯಲಾಯಿತು. ಇಳಕಲ್ಲ ತಾಲ್ಲೂಕಾಸ್ಪತ್ರೆಗೆ ಸಾಗಿಸಲಾಯಿತಾದರೂ ಮಕ್ಕಳಿಬ್ಬರು ಬದುಕುಳಿಯಲಿಲ್ಲ.
ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆಸ್ಪತ್ರೆಗೆ ಶಾಸಕ ವಿಜಯಾನಂದ ಕಾಶಪ್ಪನರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬೆಳೆದು ನಿಂತ ಮಕ್ಕಳನ್ನು ಕಳೆದುಕೊಂಡಿದ್ದಕ್ಕೆ ಕಣ್ಣೀರು ಹಾಕಿದರು. ಬಾಗಲಕೋಟೆಯ ಇಳಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಈ ದುರಂತ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ