ಕಾರವಾರ: ಬೈಕ್‌ನಿಂದ ಸ್ಕಿಡ್ ಆಗಿ ಕೆಳಗೆ ಬಿದ್ದ ಶಿಕ್ಷಕನ ಮೇಲೆ ಲಾರಿ ಹರಿದು (Road Accident) ಮೃತಪಟ್ಟಿರುವ ದಾರುಣ ಘಟನೆ ಉತ್ತರಕನ್ನಡದ ಕಾರವಾರದ ಹಬ್ಬುವಾಡದಲ್ಲಿ ನಡೆದಿದೆ. ಉಮೇಶ ಗುನಗಿ (50) ಮೃತ ದುರ್ದೈವಿ.
ಶಿಕ್ಷಕ ಉಮೇಶ ಕಾರವಾರದಿಂದ ದೇವಳಮಕ್ಕಿ ಶಾಲೆಗೆ ತೆರಳುತ್ತಿದ್ದರು. ಬೈಕ್‌ನಲ್ಲಿ ತೆರಳುತ್ತಿದ್ದಾಗ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಎದುರಿಗೆ ಬಂದ ಲಾರಿಯು ಶಿಕ್ಷಕ ಉಮೇಶ ಮೇಲೆ ಹರಿದಿದೆ. ಪರಿಣಾಮ ಗಂಭೀರ ಗಾಯಗೊಂಡ ಉಮೇಶ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.
ರಸ್ತೆ ಅವ್ಯವಸ್ಥೆಯಿಂದಲೇ ಈ ಅಪಘಾತ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಅವೈಜ್ಞಾನಿಕ ರಸ್ತೆಯಿಂದ ಹಲವರ ಜೀವ ಕಸಿಯುತ್ತಿದೆ ಎಂದು ಪ್ರತಿಭಟನೆ ನಡೆಸಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಾರವಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಇತ್ತ ಅಪಘಾತದಿಂದಾಗಿ ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇದನ್ನೂ ಓದಿ: Lokayukta Raid : ಹೆರಿಗೆ ಮಾಡಿಸಲು ಕೊಡಬೇಕು ಗರಿ ಗರಿ ನೋಟು; ಲೋಕಾಯುಕ್ತ ಬಲೆಗೆ ಬಿದ್ದ ಡಾಕ್ಟರ್
ಬೈಕ್‌ಗೆ ಬಸ್ ಡಿಕ್ಕಿ, ಸವಾರ ಗಂಭೀರ
ಮೈಸೂರು-ತಿ.ನರಸೀಪುರ ಮುಖ್ಯರಸ್ತೆಯ ಇಂಡವಾಳು ಗ್ರಾಮದದಲ್ಲಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಟಿ ನರಸೀಪುರ ತಾಲ್ಲೂಕಿನ ರಾಯರಹುಂಡಿ ಗ್ರಾಮದ ನಿವಾಸಿ ಜಯಶಂಕರ್ ಎಂಬಾತ ಗಂಭೀರ ಗಾಯಗೊಂಡಿದ್ದಾರೆ.
ಅಪಘಾತದ ದೃಶ್ಯ ಬಸ್‌ನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಸ್ತೆಯ ಎಡ ಬದಿಯಿಂದ ರಸ್ತೆಯ ಬಲ ಭಾಗಕ್ಕೆ ಬೈಕ್ ಸವಾರ ತಿರುವು ಪಡೆಯುವಾಗ, ಹಿಂದಿನಿಂದ ಬಂದ ಬಸ್ ಬೈಕ್‌ಗೆ ಗುದ್ದಿದೆ. ನರಸೀಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಬೋಟ್ ಮುಳುಗಡೆ, 8 ಮೀನುಗಾರರ ರಕ್ಷಣೆ
ಉಡುಪಿ: ಮಲ್ಪೆಯಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ 8 ಮೀನುಗಾರರ ರಕ್ಷಣೆ ಮಾಡಲಾಗಿದೆ. ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಬೋಟ್ ಮುಳುಗಡೆಯಾಗಿದೆ. ಕಡೆಕಾರು ರಕ್ಷಾ ಅವರಿಗೆ ಸೇರಿದ ಮೀನುಗಾರಿಕಾ ಬೋಟ್ ಇದಾಗಿದ್ದು, ಬೋಟ್ ತಳ ಭಾಗಕ್ಕೆ ವಸ್ತುವೊಂದು ತಗುಲಿದೆ. ಪರಿಣಾಮ ಬೋಟ್‌ವೊಳಗೆ ನೀರು ನುಗ್ಗಿ ಮುಳುಗಡೆಯಾಗಿದೆ.
ವಯರ್ ಲೆಸ್ ಮೂಲಕ ರಕ್ಷಣೆ ಕರೆ ಬಂದ ಹಿನ್ನೆಲೆಯಲ್ಲಿ ಶ್ರೀ ಮೂಕಾಂಬಿಕಾ ಅನುಗ್ರಹ ಬೋಟ್‌ನವರಿಂದ ರಕ್ಷಣೆ ಮಾಡಲಾಗಿದೆ. ಬೋಟ್‌ನಲ್ಲಿದ್ದ 8 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಈ ದುರಂತದಲ್ಲಿ ಸುಮಾರು 18 ಲಕ್ಷ ರೂಪಾಯಿ ನಷ್ಟವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.