ಬೆಂಗಳೂರು: ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Road Aciddent) ಇಬ್ಬರು ಮೃತಪಟ್ಟಿದ್ದಾರೆ. ಒಂದು ಬೈಕ್‌ನಲ್ಲಿ ಸಾಗುತ್ತಿದ್ದ ಲೆಕ್ಚರರ್ ನರಸಪ್ಪ (51) ಮತ್ತು ಇನ್ನೊಂದು ಬೈಕ್‌ನಲ್ಲಿ ಯುವಕನ ಜತೆ ಸಾಗುತ್ತಿದ್ದ ಕಿಂಡರ್ ಗಾರ್ಟನ್ ಟೀಚರ್ ರಕ್ಷಾ (21) ಮೃತಪಟ್ಟವರು (Two bike riders dead). ಇದು ಮಂಗಳವಾರ ರಾತ್ರಿ 11.40ರ ಹೊತ್ತಿಗೆ ಸಂಭವಿಸಿದ ದುರಂತವಾಗಿದ್ದು, ಮೃತರ ಹಿನ್ನೆಲೆಯಲ್ಲಿ ತಿಳಿಯುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ.
ಚಂದನ್ ಎಂಬ ಯುವಕ ರಕ್ಷಾ ಎನ್ನುವ ಯುವತಿ ಜತೆ ಪಲ್ಸರ್ ಬೈಕ್‌ನಲ್ಲಿ ಸಾಗುತ್ತಿದ್ದ. ಕೆಂಗೇರಿ ಸಮೀಪದ ಮಾರುತಿ ನಗರದ ಮುಖ್ಯ ರಸ್ತೆಯಲ್ಲಿ ಕೆಎಲ್‌ಇ ಕಾಲೇಜು ಕಡೆ ರಾತ್ರಿ 11.40ರ ಸುಮಾರಿಗೆ ಸ್ಪೀಡಾಗಿ ಹೋಗುತ್ತಿದ್ದ. ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ನರಸಪ್ಪ ಎಂಬವರು ಓಡಿಸುತ್ತಿದ್ದ ಬೈಕ್‌ಗೆ ಆತ ಡಿಕ್ಕಿ ಹೊಡೆದಿದ್ದಾನೆ.
ಘಟನೆಯಲ್ಲಿ ಬೈಕ್‌ನಿಂದ ಉರುಳಿಬಿದ್ದ ನರಸಪ್ಪ ಅವರಿಗೆ ಗಂಭೀರ ಗಾಯವಾಗಿ ಅವರು ಘಟನಾ ಸ್ಥಳದಲ್ಲೇ ಸಾವು ಕಂಡರು. ಇದೇ ಸಂದರ್ಭದಲ್ಲಿ ಚಂದನ್ ಮತ್ತು ರಕ್ಷಾಗೂ ಗಂಭೀರ ಗಾಯಗಳಾಗಿತ್ತು. ಕೂಡಲೇ ಅವರಿಬ್ಬರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ರಕ್ಷಾ ಕೂಡಾ ಮೃತಪಟ್ಟಿದ್ದಾಳೆ. ಸದ್ಯ ಗಾಯಾಳು ಚಂದನ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು.. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಂಗೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದ ಬಗ್ಗೆ ಸಂಚಾರ ಪಶ್ಚಿಮ ವಿಭಾಗ ಡಿಸಿಪಿ ಸುಮನ ಡಿ.ಪಿ. ಹೇಳಿಕೆ
ʻʻಉಲ್ಲಾಳದ ಮಾರುತಿ ನಗರದಲ್ಲಿ ಅಪಘಾತವಾಗಿದೆ. ಚಂದನ್ ಎನ್ನುವವರ ಪಲ್ಸರ್ ಬೈಕ್ ನಲ್ಲಿ ಹಿಂಬದಿ ರಕ್ಷಾ ಎಂಬವರು ಪ್ರಯಾಣ ಮಾಡುತ್ತಿದ್ದರು. ನರಸಪ್ಪ ಎನ್ನುವವರು ತಮ್ಮ ಬೈಕ್‌ನಲ್ಲಿ ಟರ್ನಿಂಗ್ ತೆಗೆದುಕೊಳ್ಳುವಾಗ ಅಪಘಾತವಾಗಿದೆ. ಪಲ್ಸರ್ ಬೈಕ್‌ನ ಅತಿವೇಗ ಹಾಗು ನಿರ್ಲಕ್ಷ್ಯದಿಂದ ಚಂದನ್ ಡ್ರೈವಿಂಗ್ ಮಾಡಿಕೊಂಡು ಬಂದಿದ್ದಾನೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ನರಸಪ್ಪ ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಡ್ರೈವರ್ ಚಂದನ್ ಕುಡಿದು ಡ್ರೈವಿಂಗ್ ಮಾಡಿರೊ ಶಂಕೆ ಇದೆ. ಚಂದನ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೈಕ್ ಗುದ್ದಿದ ರಭಸಕ್ಕೆ 50 ಮೀಟರ್ ದೂರಕ್ಕೆ ಉಜ್ಜಿಕೊಂಡು ಹೋಗಿದೆ. ಮೃತ ನರಸಪ್ಪ ಲೆಕ್ಟರರ್ ಆಗಿದ್ದರೆ ಚಂದನ್ ಜೊತೆಗಿದ್ದ ರಕ್ಷಾ ಕಿಂಡರ್ ಗಾರ್ಟನ್ ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪಲ್ಸರ್ ಸವಾರ ಚಂದನ್ ಮೇಲೆ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆʼʼ ಎಂದಿದ್ದಾರೆ ಸಂಚಾರ ಪಶ್ಚಿಮ ವಿಭಾಗ ಡಿಸಿಪಿ ಸುಮನ ಡಿ.ಪಿ.
Murder Case: ಪತ್ನಿಯ ಶೀಲದ ಮೇಲೆ ಶಂಕೆ: ಮಡದಿಯನ್ನು ಕೊಂದು 4 ವರ್ಷದ ಮಗನೊಂದಿಗೆ ಪರಾರಿಯಾದ ಗಂಡ!
ಮಂಡ್ಯ: ಪತ್ನಿಯ ಶೀಲದ ಬಗ್ಗೆ ಸದಾ ಶಂಕೆ ವ್ಯಕ್ತಪಡಿಸುತ್ತಿದ್ದ ಗಂಡನೊಬ್ಬ ಆಕೆಯನ್ನು ಕೊಂಡು ನಾಲ್ಕು ವರ್ಷದ ಮಗನೊಂದಿಗೆ ಪರಾರಿಯಾಗಿದ್ದಾನೆ. ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಟಿಬಿ ಬಡಾವಣೆಯಲ್ಲಿ ಘಟನೆ ನಡೆದಿದೆ.
ನಾಗಮಂಗಲ ಪಟ್ಟಣದ ವಾಸಿ ಮಧುಶ್ರಿ (25) ಕೊಲೆಯಾಗಿರುವ ಮಹಿಳೆ. ಐದು ವರ್ಷದ ಹಿಂದೆ ಆಕೆಯ ಮದುವೆ ತಾಲೂಕಿನ ಕರಡಹಳ್ಳಿ ಗ್ರಾಮದ ಮಂಜುನಾಥ್ ಜೊತೆ ನಡೆದಿತ್ತು. ಅವರಿಗೆ ಒಬ್ಬ ಪುಟ್ಟ ಮಗನಿದ್ದಾನೆ.
ಮಧುಶ್ರೀ ಮತ್ತು ಮಂಜುನಾಥ್ ಕಳೆದ ಒಂದುವರೆ ವರ್ಷಗಳಿಂದ ನಾಗಮಂಗಲದ ಟಿಬಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. 4 ವರ್ಷದ ಗಂಡು ಮಗುವಿನ ಜೊತೆ ಅವರು ವಾಸವಾಗಿದ್ದರು.
ಮಂಜುನಾಥ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮಂಡ್ಯದಿಂದಲೇ ಹೋಗಿ ಬರುತ್ತಿದ್ದ. ಕೆಲವೊಮ್ಮೆ ಬೆಂಗಳೂರಿನಲ್ಲೇ ಉಳಿಯುತ್ತಿದ್ದ. ಮಂಗಳವಾರ ಮಧ್ಯಾಹ್ನ ಬೆಂಗಳೂರಿನಿಂದ ಬಂದಿದ್ದ ಮಂಜುನಾಥ್ ಪತ್ನಿ ಜತೆಗೆ ಜಗಳವಾಡಿದ್ದ ಎಂದು ಹೇಳಲಾಗಿದೆ.
ಪತ್ನಿಯ ಶೀಲ ಶಂಕಿಸುತ್ತಿದ್ದ ಆತ ಈ ಬಾರಿಯೂ ಅದೇ ವಿಚಾರವನ್ನು ಎತ್ತಿ ಜಗಳ ಶುರು ಮಾಡಿದ್ದಾನೆ ಎನ್ನಲಾಗಿದೆ. ಈ ಜಗಳ ತಾರಕಕ್ಕೇರಿದ್ದು ಮಂಜುನಾಥ್ ತನ್ನ ಪತ್ನಿ ಮಧುಶ್ರೀಯನ್ನು ಕೊಲೆ ಮಾಡಿದ್ದಾನೆ. ಬಳಿಕ ಮಗ ಮನ್ವಿತ್ ಕರೆದುಕೊಂಡು ಪರಾರಿಯಾಗಿರುವ ಶಂಕೆ ಇದೆ.
ಬುಧವಾರ ಬೆಳಗ್ಗೆ ಮಧು ಎಂಬಾತ ಮನೆ ಬಳಿ ಬಂದಾಗ ಮಧುಶ್ರೀ ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ನಾಗಮಂಗಲ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.