Site icon Vistara News

Road Accident : ಬೈಕ್‌ಗಳಿಗೆ ಗುದ್ದಿ ಸವಾರರನ್ನು ಕೊಂದು ಪರಾರಿಯಾಗಲು ಯತ್ನಿಸಿದ ಕಾರು ಚಾಲಕ

Road Accident

ಬೆಂಗಳೂರು ಗ್ರಾಮಾಂತರ: ಅಪಘಾತ ಮಾಡಿ (Road Accident) ಪರಾರಿ ಆಗುವ ಭರದಲ್ಲಿ ಕಾರು ಚಾಲಕನೊಬ್ಬ ಮತ್ತೆರಡು ಬೈಕ್‌ಗಳಿಗೆ ಗುದ್ದಿದ್ದಾನೆ. ಕಾರು ಗುದ್ದಿದ ರಭಸಕ್ಕೆ ಇಬ್ಬರ ದುರ್ಮರಣ ಹೊಂದಿದ್ದರೆ, ಮೂವರು ಗಂಭೀರ ಗಾಯಗೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರದ ಹೊಸಕೋಟೆ- ಚಿಂತಾಮಣಿ ರಾಜ್ಯ ಹೆದ್ದಾರಿಯ ಮದೀನ ಹೋಟೆಲ್ ಬಳಿ ಘಟ‌ನೆ ನಡೆದಿದೆ.

ಕಣ್ಣೂರಹಳ್ಳಿ ನಿವಾಸಿ ಜಗದೀಶ್ (30) ಮತ್ತು ಶಿವಾಜಿನಗರ ನಿವಾಸಿ ಮೊಹಮದ್ ಪೈಜ್ (18) ಮೃತ ದುರ್ದೈವಿಗಳು. ಅಬ್ಬಾಸ್, ಹಬ್ಬಾಸ್ ಪಾಷ ಮತ್ತು ಅಬುಜರ್ ಗಾಯಾಳುಗಳು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಐ20 ಕಾರಿನಲ್ಲಿ ಬಂದ ಚಾಲಕ ಪ್ರಗತೀಶ್ ರಾವ್‌ ಎಂಬಾತ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಅಪಘಾತ ಮಾಡಿದ್ದಾನೆ. ಜನರು ಸೇರುತ್ತಿದ್ದಂತೆ ಎಸ್ಕೇಪ್‌ ಆಗಲು ಯತ್ನಿಸಿದ್ದಾನೆ. ಪರಾರಿ ಆಗುವ ಭರದಲ್ಲಿ ರಸ್ತೆ ಬದಿಯಲ್ಲಿದ್ದ ಬೈಕ್‌ಗಳಿಗೆ ಗುದ್ದಿದ್ದಾನೆ. ಪರಿಣಾಮ ಸವಾರು ಚೆಲ್ಲಾ ಪಿಲ್ಲಿಯಾಗಿ ಬಿದ್ದರು. ಕಾರು ಚಾಲಕ ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕುಡಿದ ಅಮಲಿನಲ್ಲಿ ಕಾರು ಅಡ್ಡಾದಿಡ್ಡಿ ಚಲಾಯಿಸಿ ಅಪಘಾತ ಮಾಡಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪರಾರಿಯಾಗಲು ಯತ್ನಿಸಿದ್ದಕ್ಕೆ ಸಿಟ್ಟಿನಲ್ಲಿ ಕಾರಿಗೆ ಕಲ್ಲು ತೂರಾಟ ಮಾಡಿದ್ದಾರೆ. ಮೃತರ ಕುಟುಂಬಗಳಿಗೆ ನ್ಯಾಯ ಕೊಡಿಸುವಂತೆ ಸ್ಥಳೀಯರು ಒತ್ತಾಯಿಸಿದರು. ಹೊಸಕೋಟೆ ಶವಾಗಾರದ ಬಳಿ ಮೃತ ಜಗದೀಶ್ ಕುಟುಂಬಸ್ಥರು ಪ್ರತಿಭಟಿಸಿದರು. ಹೊಸಕೋಟೆ ಸಂಚಾರಿ ಪೊಲೀಸರು ಮನವೊಲಿಸಿದ ಬಳಿಕ ಮೃತದೇಹವನ್ನು ಕೊಂಡೊಯ್ದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Physical Abuse : ಕಾಂಪೌಂಡ್‌ ಹಾರಿ ಬಂದ ಪುರಸಭೆ ಮಾಜಿ ಅಧ್ಯಕ್ಷೆಯ ಗಂಡನಿಗೆ ಚಳಿ ಬಿಡಿಸಿದ ಮಹಿಳೆಯರು

ಚಲಿಸುತ್ತಿದ್ದ ಕ್ರೇನ್‌ ಮೇಲೆ ಬಿದ್ದ ಮರ

ಉಡುಪಿಯ ಬ್ರಹ್ಮಾವರ ತಾಲೂಕು ಬೆಣ್ಣೆಕುದ್ರು ಬಾರ್ಕೂರು ಪಾಂಡೇಶ್ವರ ರಸ್ತೆಯಲ್ಲಿ ಚಲಿಸುತ್ತಿದ್ದ ಕ್ರೇನ್ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದಿದೆ. ಮರ ಬಿದ್ದ ರಭಸಕ್ಕೆ ಕ್ರೇನ್ ಹಾಗೂ ವಿದ್ಯುತ್ ಕಂಬ ಜಖಂಗೊಂಡಿತ್ತು. ಬೆಣ್ಣೆ ಕುದ್ರುವಿನಲ್ಲಿ ನಡೆಯುತ್ತಿರುವ ಕಾಮಗಾರಿ ಮುಗಿಸಿ ಬರುತ್ತಿದ್ದಾಗ ಘಟನೆ ನಡೆದಿದೆ. ಈ ಘಟನೆಯಿಂದಾಗಿ ಸುಮಾರು 2 ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಮೆಸ್ಕಾಂ ಸಿಬ್ಬಂದಿ ಮತ್ತು ಸಾರ್ವಜನಿಕರ ನೆರವಿನಿಂದ ಮರ ತೆರವು ಕಾರ್ಯ ನಡೆಯಿತು.

ಬಿಯರ್ ತುಂಬಿದ ಲಾರಿ ಪಲ್ಟಿ; ಎಣ್ಣೆಗಾಗಿ ಮುಗಿಬಿದ್ದ ಜನ

ರಾಯಚೂರು ತಾಲೂಕಿನ ಹೆಗ್ಗಸನಹಳ್ಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಿಯರ್‌ ತುಂಬಿದ್ದ ಲಾರಿಯು ಪಲ್ಟಿಯಾಗಿದೆ. ವಾಹನ ಪಲ್ಟಿಯಾಗುತ್ತಿದ್ದಂತೆ ಬಿಯರ್ ಬಾಟಲ್ ರಸ್ತೆ ಮಧ್ಯೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇದನ್ನು ಕಂಡ ಬಿಯರ್ ಪ್ರಿಯರು ಬಾಟಟ್‌ಗಾಗಿ ಮುಗಿ ಬಿದ್ದರು. ಬಿಯರ್ ಡಬ್ಬಿಗೆ ಒಮ್ಮೆಲೆ ಜನ ಮುಗಿ ಬಿದ್ದ ಕಾರಣ ಕೆಲಹೊತ್ತು ರಸ್ತೆ ಸಂಚಾರ ಸ್ಥಗಿತವಾಗಿತ್ತು. ಟ್ರಾಫಿಕ್ ಜಾಂನಿಂದ ವಾಹನ ಸವಾರರು ಹೈರಾಣಾದರು. ರಾಯಚೂರು ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version