ಮೈಸೂರು: ದೀಪಾವಳಿ ಜಾತ್ರೆ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಗೂಡ್ಸ್ ವಾಹನವು (Road Accident) ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಯುವಕನೊರ್ವ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದರೆ, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದರ್ಶನ್ (20) ಮೃತ ದುರ್ದೈವಿ.
ಮೈಸೂರು- ತಿ.ನರಸೀಪುರ ಮುಖ್ಯರಸ್ತೆಯ ಮೇಗಳಾಪುರ ಬಳಿ ಈ ದುರ್ಘಟನೆ ನಡೆದಿದೆ. ದರ್ಶನ್ ಹಾಗೂ ಆತನ ಸಹಚರರು ಮಲೆ ಮಹದೇಶ್ವರ ಬೆಟ್ಟಕ್ಕೆ ಗೂಡ್ಸ್ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನವು ರಸ್ತೆ ಬದಿಯಲ್ಲಿದ್ದ ತಡೆಗೋಡೆಯಿಂದ ಹಾರಿ ಕೆಳಗೆ ಬಿದ್ದಿದೆ.
ಪರಿಣಾಮ ದರ್ಶನ್ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಸುಮಾರು 10 ಯುವಕರಿಗೆ ಗಾಯವಾಗಿದೆ. ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಾಕಿಂಗ್ ಹೋಗಿದ್ದ ಅಜ್ಜಿ-ಮೊಮ್ಮಗಳಿಗೆ ಕಾರು ಡಿಕ್ಕಿ
ಬೆಂಗಳೂರಿನ ಕಲ್ಯಾಣ ನಗರದ ಚಳ್ಳಿಕೆರೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಅಜ್ಜಿ ಮತ್ತು ಮೊಮ್ಮಗಳಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಶೀಲಾ (60) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೊಮ್ಮಗಳಿಗೆ ಸಣ್ಣಪುಟ್ಟ ಗಾಯವಾಗಿದೆ.
ಅತಿವೇಗವಾಗಿ ಬಂದ ಕಾರು ಚಾಲಕ ಕುಮಾರ್ ಎಂಬಾತ ಮೊದಲಿಗೆ ಇಬ್ಬರಿಗೂ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ಬೈಕ್‌ಗೆ ಡಿಕ್ಕಿಯಾಗಿ ಕಾಂಪೌಂಡ್‌ಗೆ ಡಿಕ್ಕಿಯಾಗಿದೆ. ಸ್ಥಳಕ್ಕೆ ಬಾಣಸವಾಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವೇಗವಾಗಿ ಚಲಿಸುತ್ತಿದ್ದ ರೈಲಿನ ಮೇಲೆ ಬಿದ್ದ ವಿದ್ಯುತ್ ತಂತಿ; ಇಬ್ಬರು ಪ್ರಯಾಣಿಕರ ಸಾವು
ರಾಂಚಿ: ಆಂಧ್ರಪ್ರದೇಶದಲ್ಲಿ ರೈಲು ಅಪಘಾತ ಸಂಭವಿಸಿ 13 ಜನ ಮೃತಪಟ್ಟ ಬೆನ್ನಲ್ಲೇ ಜಾರ್ಖಂಡ್‌ನಲ್ಲಿ ವಿದ್ಯುತ್ ತಂತಿಯು ರೈಲಿನ ಮೇಲೆ ಬಿದ್ದಿದ್ದು (Train Accident), ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ. ರೈಲಿನ ಮೇಲೆ ವಿದ್ಯುತ್ ತಂತಿ ಬಿದ್ದ ಕಾರಣ ಕೂಡಲೇ ರೈಲು ಸಂಚಾರ ಸ್ಥಗಿತವಾಗಿದೆ. ಆಗ ಉಂಟಾದ ಎಳೆತದ (Jerk) ತೀವ್ರತೆಗೆ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕೊಡೆರ್ಮಾ ಜಿಲ್ಲೆಯ ಪರ್ಸಾಬಾದ್ ಬಳಿಯ ಗೊಮೊಹ್ ಹಾಗೂ ಕೊಡೆರ್ಮಾ ರೈಲು ನಿಲ್ದಾಣದ ಮಧ್ಯ ಅಪಘಾತ ಸಂಭವಿಸಿದೆ. ಪುರಿಯಿಂದ ದೆಹಲಿಗೆ ತೆರಳುತ್ತಿದ್ದ ಪುರುಷೋತ್ತಮ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ವಿದ್ಯುತ್ ತಂತಿ ಕಡಿದು ಬಿದ್ದಿದೆ. ಆಗ ರೈಲಿನ ಚಾಲಕ ಎಮರ್ಜನ್ಸಿ ಬ್ರೇಕ್ ಹಾಕಿದ್ದಾರೆ. ಇದರಿಂದಾಗಿ ಜರ್ಕ್ ಉಂಟಾಗಿದ್ದು, ಹೆಚ್ಚಿನ ಪ್ರಯಾಣಿಕರು ಇದ್ದ ಕಾರಣ ತೀವ್ರತೆಗೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಕಾಏಕಿ ರೈಲು ನಿಂತ ಕಾರಣ ಪ್ರಯಾಣಿಕರು ಕೆಳಗೆ ಇಳಿಯಲು ಯತ್ನಿಸಿದ್ದು, ಇದೇ ವೇಳೆ ನೂಕುನುಗ್ಗಲು ಉಂಟಾಗಿದೆ.
Purushottam Express pic.twitter.com/yV8s90XLlj
— HUNTER (@HuntToYou) November 11, 2023
“ವಿದ್ಯುತ್ ತಂತಿ ಕಡಿದು ಬಿದ್ದ ಕಾರಣ ಕೂಡಲೇ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಆಗ ಚಾಲಕ ಎಮರ್ಜನ್ಸಿ ಬ್ರೇಕ್ ಹಾಕಿದ್ದಾರೆ. ಗಂಟೆಗೆ ಸುಮಾರು 130 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದ್ದ ರೈಲು ಸಂಚಾರ ಏಕಾಏಕಿ ಸ್ಥಗಿತಗೊಂಡ ಕಾರಣ ಜರ್ಕ್ ಉಂಟಾಗಿದೆ. ಕೆಲವು ಜನರಿಗೆ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಧನ್‌ಬಾದ್ ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ಮ್ಯಾನೇಜರ್ ಅಮರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಬಳಿಕ ಡೀಸೆಲ್ ಎಂಜಿನ್ ಅಳವಡಿಸಿದ್ದು, ರೈಲು ಸಂಚಾರ ಆರಂಭವಾಗಿದೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದಷ್ಟೇ ಆಂಧ್ರಪ್ರದೇಶದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ 13 ಜನ ಮೃತಪಟ್ಟಿದ್ದರು. ವಿಜಯನಗರ ಜಿಲ್ಲೆಯಲ್ಲಿ ಸಂಭವಿಸಿದ ಎರಡು ರೈಲುಗಳ ಡಿಕ್ಕಿಯಲ್ಲಿ 50 ಮಂದಿ ಗಾಯಗೊಂಡಿದ್ದರು. ವಿಶಾಖಪಟ್ಟಣದಿಂದ ರಾಯಗಢಕ್ಕೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲು ವಿಜಯನಗರದಲ್ಲಿ ಹಳಿ ತಪ್ಪಿತ್ತು. ರೈಲು ಅಪಘಾತದ ಕಾರಣವನ್ನು ರೈಲ್ವೇ ಇಲಾಖೆ ಬಹಿರಂಗಪಡಿಸಿದೆ. ರಾಯಗಢಕ್ಕೆ ತೆರಳುತ್ತಿದ್ದ ರೈಲು ನಿಲುಗಡೆಗೆ ಸಿಗ್ನಲ್ ನೀಡಿದರೂ ಗಮನಿಸದೆ ಮುಂದೆ ಹೋಗಿದ್ದೇ ದುರಂತಕ್ಕೆ ಮೂಲ ಕಾರಣ ಎಂದು ತಿಳಿದುಬಂದಿದೆ.
ಈ ವರ್ಷದ ಜೂನ್ 2ರಂದು ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 288 ಜನರು ಸಾವನ್ನಪ್ಪಿದ್ದರು ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯಲ್ಲಿನ ದೋಷದಿಂದ ಈ ದುರಂತ ಸಂಭವಿಸಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ