ನೊಯ್ಡಾ: ಉತ್ತರ ಪ್ರದೇಶದಲ್ಲಿ ಒಂದು ಕಾಲದಲ್ಲಿ ಕಾಲೇಜು ಪ್ರಾಂಶುಪಾಲೆ ಆಗಿದ್ದವಳು ಈಗ ಮೂರು ಕ್ರಿಮಿನಲ್ ಕೇಸ್ನಲ್ಲಿ ಬೇಕಾದವಳಾಗಿ ಪೊಲೀಸ್ ಇಲಾಖೆಯ ಮೋಸ್ಟ್ ವಾಂಟೆಡ್ ಪಟ್ಟಿ ಸೇರಿದ್ದಾಳೆ. ಆಕೆಯ ತಲೆಗೆ ಪೊಲೀಸರು 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಆಕೆಯ ಸುಳಿವು ಕೊಟ್ಟವರಿಗೆ ಇಷ್ಟು ಬಹುಮಾನದ ಮೊತ್ತ ನೀಡುವುದಾಗಿ ಹೇಳಿದ್ದಾರೆ. ಆಕೆ ಮತ್ಯಾರೂ ಅಲ್ಲ, ಬೈಕ್ ಬಾಟ್ (ಬೈಕ್ ಟ್ಯಾಕ್ಸಿ-Bike Bot Scam) ಹಗರಣ ಕೇಸ್ನ ಪ್ರಮುಖ ಆರೋಪಿ ಸಂಜಯ್ ಭಾಟಿ(Sanjay Bhati)ಯ ಪತ್ನಿ ದೀಪ್ತಿ ಬಹಲ್ (Deepti Bahal). ಈ ಸಂಜಯ್ ಭಾಟಿ 2010ರಲ್ಲಿ ಗರ್ವಿತ್ ಇನ್ನೋವೇಟರ್ಸ್ ಪ್ರಮೋಟರ್ಸ್ ಲಿಮಿಟೆಡ್ ಎಂಬ ಕಲ್ಪಿತ ಕಂಪನಿಯನ್ನು ಹುಟ್ಟುಹಾಕಿ, 2017ರಲ್ಲಿ ಇದೇ ಕಂಪನಿಯ ಮೂಲಕ 2017ರಲ್ಲಿ ಬೈಕ್ ಬಾಟ್ ಯೋಜನೆಯನ್ನು ಪರಿಚಯಿಸಿದ್ದಾನೆ. ಬೈಕ್ ಟ್ಯಾಕ್ಸಿ ಯೋಜನೆಯಡಿ ಸುಮಾರು 2.25 ಲಕ್ಷ ಹೂಡಿಕೆದಾರರಿಗೆ, 1500 ಕೋಟಿ ರೂಪಾಯಿ ವಂಚನೆ ಮಾಡಿ ಸದ್ಯ ಜೈಲಿನಲ್ಲಿ ಇದ್ದಾನೆ. ಆತ ಅದೆಷ್ಟೇ ಬಾರಿ ಜಾಮೀನು ಅರ್ಜಿ ಸಲ್ಲಿಸುತ್ತಿದ್ದರೂ, ಅರ್ಜಿ ತಿರಸ್ಕೃತಗೊಳ್ಳುತ್ತಲೇ ಇದೆ.
ತ್ವರಿತವಾಗಿ ಹಣ ಮಾಡುವ ಉದ್ದೇಶದಿಂದ ಸಂಜಯ್ ಭಾಟಿ ಈ ಬೈಕ್ ಬಾಟ್ ಅಂದರೆ ಬೈಕ್ ಟ್ಯಾಕ್ಸಿ ಯೋಜನೆಯನ್ನು ಪರಿಚಯಿಸಿದ್ದ. ಅದರಡಿಯಲ್ಲಿ ಟ್ಯಾಕ್ಸಿಯಂತೆ ಬಳಸಬೇಕಿದ್ದ ಬೈಕ್ಗೆ ಹಣ ಪಾವತಿಸುವಂತೆ ಹೂಡಿಕೆದಾರರ ಬಳಿ ಹೇಳುತ್ತಿದ್ದ. ಅಷ್ಟೇ ಅಲ್ಲ, ಅವರ ಹೂಡಿಕೆಗೆ ಪ್ರತಿಯಾಗಿ ದೊಡ್ಡ ಮೊತ್ತದ ಹಣ ಹಿಂದಿರುಗಿಸುವ ಭರವಸೆಯನ್ನೂ ನೀಡಿದ್ದ. ಪ್ರತಿಯೊಬ್ಬ ಹೂಡಿಕೆದಾರನ ಬಳಿ ಒಂದು ಬೈಕ್ಗೆ ತಲಾ 62,100 ರೂಪಾಯಿ ತುಂಬಿಸಿಕೊಂಡಿದ್ದ. ಪ್ರತಿತಿಂಗಳಿಗೆ ಇಎಂಐ 5,175 ರೂಪಾಯಿ ಮತ್ತು ಬಾಡಿಗೆಯನ್ನು ಪ್ರತಿತಿಂಗಳಿಗೆ 4590 ರೂಪಾಯಿ ಎಂದು ಫಿಕ್ಸ್ ಮಾಡಿದ್ದ. ಬಳಿಕ ಹೂಡಿಕೆ ಮಾಡಿದವರಿಗೆಲ್ಲ ವಂಚನೆ ಮಾಡಿದ್ದ.
2019ರಲ್ಲಿ ಜೈಪುರದ ನಿವಾಸಿಯಾಗಿದ್ದ ಸುನೀಲ್ ಕುಮಾರ್ ಮೀನಾ ಎಂಬುವರು ದಾದ್ರಿ ಪೊಲೀಸ್ ಸ್ಟೇಶನ್ನಲ್ಲಿ ಸಂಜಯ್ ಭಾಟಿ ಮತ್ತು ಗರ್ವಿತ್ ಇನ್ನೋವೇಟಿವ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಐವರು ನಿರ್ದೇಶಕರ ವಿರುದ್ಧ ದೂರು ನೀಡಿದ್ದರು. ಈ ಕಂಪನಿಯಲ್ಲಿ ಸಂಜಯ್ ಭಾಟಿ ಪತ್ನಿ ದೀಪ್ತಿ ಬಹಲ್ ಕೂಡ ಒಬ್ಬರು. 2019ರಲ್ಲಿ ಬೈಕ್ ಬಾಟ್ ಹಗರಣದ ತನಿಖೆ ಬೆಳಕಿಗೆ ಬಂದಾಗಿನಿಂದಲೂ ಈಕೆ ತಲೆಮರೆಸಿಕೊಂಡಿದ್ದಾಳೆ.
ದೀಪ್ತಿ ಬಹಲ್ ಮೊದಲು ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ವಾಸವಾಗಿದ್ದಳು. ಮದುವೆಗೂ ಮುನ್ನ ಬಾಘ್ಪಾಟ್ನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿದ್ದಳು ಎಂದು ತನಿಖೆ ವೇಳೆ ಗೊತ್ತಾಗಿದೆ. ಆದರೆ ಆಕೆ ಶಿಕ್ಷಕಿಯಾಗಿದ್ದಳು ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಆಕೆ ಕಾಣಿಸದೆ ಇದ್ದರೂ, ಅವಳ ಪರ ವಕೀಲರು ಕೋರ್ಟ್ನಲ್ಲಿ ವಾದ ಮಂಡಿಸಿ, ದೀಪ್ತಿ ಬಹಲ್ ಅವರು ಗರ್ವಿತ್ ಇನ್ನೋವೇಟಿವ್ ಕಂಪನಿಯ ಕಾರ್ಯ ನಿರ್ವಾಹಕೇತರ ನಿರ್ದೇಶಕಿಯಾಗಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಅವರ ಪಾಲಿಲ್ಲ ಎಂದು ಹೇಳಿದ್ದಾರೆ.
ಬೈಕ್ ಬಾಟ್ ಹಗರಣಕ್ಕೆ ಸಂಬಂಧಪಟ್ಟಂತೆ ಗ್ರೇಟರ್ ನೊಯ್ಡಾದಲ್ಲಿ ದಾಖಲಾದ 118 ಕೇಸ್ಗಳಲ್ಲಿ ಮತ್ತು ದೇಶಾದ್ಯಂತ ದಾಖಲಾಗಿರುವ 150 ಕೇಸ್ಗಳಲ್ಲಿ ದೀಪ್ತಿ ಹೆಸರು ಇದೆ. ಇನ್ನು ಹಣ ಅಕ್ರಮ ವರ್ಗಾವಣೆಯಲ್ಲಿ ಸಕ್ರಿಯವಾಗಿದ್ದ 13 ಕಂಪನಿಗಳು ಮತ್ತು 31 ಜನರ ಹೆಸರನ್ನೂ ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.