ಮಂಗಳೂರು/ಚಿಕ್ಕಮಗಳೂರು: ಖ್ಯಾತ ಕಬಡ್ಡಿ ಆಟಗಾರ ಮತ್ತು ಈರುಳ್ಳಿ ಬೆಳೆಗಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರಿನಲ್ಲಿ ನಡೆದಿದೆ.
ಖ್ಯಾತ ಕಬಡ್ಡಿ ಆಟಗಾರ ಆತ್ಮಹತ್ಯೆ
ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟಿನಲ್ಲಿ, ಪುದುವೆಟ್ಟು ನಿವಾಸಿ ಸ್ವರಾಜ್(24) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಖ್ಯಾತ ಕಬಡ್ಡಿ ಆಟಗಾರರು. ಕಬಡ್ಡಿಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ ಗಮನ ಸೆಳೆದಿದ್ದರು. ಸ್ಥಳೀಯ ಕೂಟಗಳಲ್ಲಿ ಸಾಕಷ್ಟು ಆಕರ್ಷಣೆ ಹೊಂದಿದ್ದರು. ಉಜಿರೆಯ ಸಾನಿಧ್ಯ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದ ಸ್ವರಾಜ್ ಅವರು ಸ್ನಾನದ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಧರ್ಮಸ್ಥಳ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಚಿಕ್ಕಮಗಳೂರು: ಮಳೆ ನಂಬಿ ಈರುಳ್ಳಿ ಬೆಳೆದಿದ್ದ ರೈತ ಆತ್ಮಹತ್ಯೆ
ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದರಿಂದ ಬೇಸರಗೊಂಡ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಈರುಳ್ಳಿ ಬೆಳೆಯಲು ಸಾಲ ಮಾಡಿದ್ದು, ಅದನ್ನು ತೀರಿಸುವುದು ಹೇಗೆ ಎಂಬ ಆತಂಕದಲ್ಲೇ ಸಾವಿಗೆ ಶರಣಾಗಿದ್ದಾರೆ. ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದ ಸತೀಶ್ (48), ಮಾಡಿಕೊಂಡ ಆತ್ಮಹತ್ಯೆ ಮಾಡಿಕೊಂಡ ರೈತರು.
ಅವರು ಕೃಷಿ ಪತ್ತಿನ ಸಹಕಾರ ಸಂಘ, ಸೇರಿದಂತೆ ವಿವಿಧ ಕಡೆ ಸಾಲ ಮಾಡಿದ್ದರು. ಈರುಳ್ಳಿ ಬೆಳೆ ನೀರಿಲ್ಲದೆ ಒಣಗಿದ್ದರಿಂದ ಅವರು ಮುಂದೆ ಸಾಲ ಮರುಪಾವತಿ ಮಾಡುವುದು ಹೇಗೆ ಎಂದು ಭಯದಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಚಿಕ್ಕಮಗಳೂರಿನಲ್ಲಿ ಬರಕ್ಕೆ ಈ ವರ್ಷ ಮೊದಲ ರೈತನ ಬಲಿಯಾದಂತಾಗಿದೆ.
ಇದನ್ನೂ ಓದಿ : Elephant attack : ಚಿಕಿತ್ಸೆಗೆ ಹೋದಾಗ ಅಟ್ಟಾಡಿಸಿದ ಗಾಯಾಳು ಕಾಡಾನೆ; ಅರಣ್ಯ ಸಿಬ್ಬಂದಿ ಸಾವು!
ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ, ವೃದ್ಧ ಸಾವು
ರಾಮನಗರ: ರಾಮನಗರ ತಾಲೂಕಿನ ಚೆನ್ನಯ್ಯನಹಳ್ಳಿ ಬಳಿ ಬೈಕ್‌ಗಳ ನಡುವೆ ಅಪಘಾತ ಸಂಭವಿಸಿ ನಂಜಯ್ಯ ಮಾಸ್ಟರ್ (75) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಂದು ಬೈಕ್ ನಲ್ಲಿದ್ದ ಸವಾರನಿಗೂ ಗಂಭೀರ ಗಾಯಗಳಾಗಿವೆ.
ರಾಮನಗರದಿಂದ ಅಂಕನಹಳ್ಳಿಗೆ ತೆರಳುತ್ತಿದ್ದ ನಂಜಯ್ಯ ಮಾಸ್ಟರ್ ಅವರ ಬೈಕ್‌ಗೆ ವೇಗವಾಗಿ ಬಂದ ಪಲ್ಸರ್ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ನಂಜಯ್ಯ ಮಾಸ್ಟರ್ ತಲೆಗೆ ಬಲವಾದ ಪೆಟ್ಟು ಬಿದ್ದು, ಕಾಲು ಮುರಿತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.