ಆನೇಕಲ್: ಎರಡು ಸಬ್ಜೆಕ್ಟ್ ಫೇಲ್ ಆಗಿರುವುದು ಪೋಷಕರಿಗೆ ತಿಳಿಯುತ್ತದೆ ಎಂದು ಹೆದರಿ, ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ (Self Harming) ನಗರ ಹೊರವಲಯ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನಡೆದಿದೆ.
ಬಿಹಾರ ಮೂಲದ ಹೇಮಲತಾ ಪಾಂಡೆ, ವಿಜಯ್ ಶಂಕರ್ ಪಾಂಡೆ ದಂಪತಿ ಪುತ್ರ ಅಮೃತೇಶ್ ಪಾಂಡೆ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ವಿದ್ಯಾರ್ಥಿಯ ಕುಟುಂಬ ಕೆಲ ವರ್ಷಗಳ ಹಿಂದೆ ಜಿಗಣಿಗೆ ಬಂದು ನೆಲೆಸಿತ್ತು. ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕೆಂದು ಕನಸು ಕಂಡಿದ್ದ ಪೋಷಕರು, ಮೈಸೂರು ರಸ್ತೆಯ ಆರ್.ವಿ. ಕಾಲೇಜಿಗೆ ಸೇರಿಸಿದ್ದರು.
ಆರ್.ವಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಅಮೃತೇಶ್, ಹಾಸ್ಟೆಲ್‌ನಿಂದ ಕಾಲೇಜಿಗೆ ಹೋಗಿ ಬರುತ್ತಿದ್ದ. ಆದರೆ, ಮೂರನೇ ವರ್ಷದಲ್ಲಿ ಎರಡು ವಿಷಯ ಫೇಲ್ ಆಗಿ, ಸರಿಯಾಗಿ ಕಾಲೇಜಿಗೂ ಹೋಗುತ್ತಿರಲಿಲ್ಲ. ಚುನಾವಣೆಗೆ ಮತ ಹಾಕಲು ಜಿಗಣಿಗೆ ಬಂದಿದ್ದ ಅಮೃತೇಶ್, ಫೇಲ್ ಆಗಿರುವ ವಿಚಾರ ತಂದೆಗೆ ತಿಳಿಯುತ್ತದೆ ಎಂದು ಹೆದರಿಕೊಂಡಿದ್ದ. ಕಾಲೇಜಿನವರು ಪೋನ್ ಮಾಡುತ್ತಾರೆ ಎಂದು ತಂದೆ ಫೋನ್‌ನಲ್ಲಿದ್ದ ನಂಬರ್‌ಗಳನ್ನು ಬ್ಲಾಕ್ ಮಾಡಿದ್ದ.
ಇದನ್ನೂ ಓದಿ | Murder Case : ಪತಿಯ ಡೆಡ್ಲಿ ಅಟ್ಯಾಕ್‌ಗೆ ಪತ್ನಿ ಸಾವು; ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ
ಇತ್ತೀಚೆಗೆ ಆರನೇ ಸೆಮಿಸ್ಟರ್‌ಗೆ ಆಡ್ಮಿಷನ್ ಮಾಡಿ ಕಾಲೇಜಿಗೆ ಬಿಟ್ಟು ಬರುತ್ತೀನಿ ಎಂದು ತಂದೆ ಹೇಳಿದ್ದರು. ಆದರೆ, ತಂದೆ ಜತೆ ಕಾಲೇಜಿಗೆ ಹೋದರೆ ಫೇಲ್ ಆದ ವಿಚಾರ ತಿಳಿಯುತ್ತದೆ ಎಂದು ಹೆದರಿದ್ದ ವಿದ್ಯಾರ್ಥಿ, ಮೇ 10ರಂದು ಮನೆಯಿಂದ ಹೊರಗೆ ಹೋಗಿದ್ದ. ಇದರಿಂದ ಎಲ್ಲೆಡೆ ಆತನಿಗಾಗಿ ಪೋಷಕರು ಹುಡುಕಾಟ ನಡೆಸಿದ್ದರು. ಆದರೆ, ಶನಿವಾರ ಜಿಗಣಿ ಕೆರೆಯಲ್ಲಿ ವಿದ್ಯಾರ್ಥಿಯ ಮೃತದೇಹ ದೊರೆತಿದೆ. ಕೂಡಲೇ ಜಿಗಣಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಹೀಗಾಗಿ ಮೃತದೇಹವನ್ನು ಪೊಲೀಸರು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆರೆಯಲ್ಲಿ ಈಜುವ ಸವಾಲು; ಜೋಶ್‌ನಲ್ಲಿ ನೀರಿಗೆ ಇಳಿದ ಟೆಕ್ಕಿ ಮೃತ್ಯು
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ವಾಟದಹೊಸಳ್ಳಿ ಕೆರೆಯಲ್ಲಿ ಈಜಲು ಹೋದ ಟೆಕ್ಕಿ ನೀರಲ್ಲಿ (Drowned in water) ಮುಳುಗಿ ಮೃತಪಟ್ಟಿದ್ದಾರೆ. ನಿನ್ನೆ ಶನಿವಾರ ಮಧ್ಯಾಹ್ನ ನೀರಿನಲ್ಲಿ ಮುಳುಗಿ ವಿನಯ್ ರಮೇಶ್ (42) ಎಂಬುವವರು ಮೃತಪಟ್ಟಿದ್ದರು. ಅಗ್ನಿಶಾಮಕ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಭಾನುವಾರ ಟೆಕ್ಕಿ ಮೃತದೇಹವು ಪತ್ತೆಯಾಗಿದೆ.
ಬೆಂಗಳೂರಿನ ಇಂದಿರಾನಗರ ನಿವಾಸಿಯಾದ ವಿನಯ್ ರಮೇಶ್, ಐದು ಜನ ಸ್ನೇಹಿತರೊಟ್ಟಿಗೆ ಕೆರೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಕೆಲವರು ಈ ದಡದಿಂದ ಆ ದಡಕ್ಕೆ ಯಾರು ಮೊದಲು ಈಜಿಕೊಂಡು ಬರುತ್ತಾರೆ ನೋಡೋಣಾ ಎಂದು ಸವಾಲು ಹಾಕಿಕೊಂಡಿದ್ದಾರೆ. ಈ ಚಾಲೆಂಜ್ ಅನ್ನು ಸ್ವೀಕರಿಸಿದ ರಮೇಶ್ ಜೋಶ್‌ನಲ್ಲಿ ನೀರಿಗೆ ಇಳಿದಿದ್ದಾರೆ. ಆದರೆ ವಿನಯ್ ರಮೇಶ್ ವಾಪಸ್ ಬಂದಿರಲಿಲ್ಲ.
ಹೀಗಾಗಿ ಜತೆಗೆ ಇದ್ದ ಸ್ನೇಹಿತರು ಗಾಬರಿಯಾಗಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ವಿನಯ್ ರಮೇಶ್ ವಿಮಾನದಲ್ಲಿ ಚೆನ್ನೈ ನಿಂದ ಬೆಂಗಳೂರಿಗೆ ಬಂದು ಅಲ್ಲಿಂದ ನೇರವಾಗಿ ಸ್ನೇಹಿತರೊಟ್ಟಿಗೆ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರು. ನಿರಂತರ ಪ್ರಯಾಣದಿಂದ ಬಳಲಿದ್ದ ವಿನಯ್ ಈಜಲು ಕೆರೆಗೆ ಇಳಿದಾಗ ಸುಸ್ತಾಗಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ | Vijayapura News: ಮೀನುಗಳ ಮಾರಣ ಹೋಮ; ಬಿಸಿಲ ತಾಪಕ್ಕೆ 17 ಸಾವಿರ ಮತ್ಸ್ಯಗಳ ಸಾವು
ಈಜುವ ಚಾಲೆಂಜ್ ವಿನಯ್ ರಮೇಶ್‌ಗೆ ಮುಳುವಾಯ್ತಾ ಎಂಬ ಪ್ರಶ್ನೆ ಕಾಡುತ್ತಿದೆ. 24 ಗಂಟೆ ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಕೆರೆಯಿಂದ ಹೊರಗೆ ತಂದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.