ಹೆಣ್ಣು ಮಕ್ಕಳು, ಇವರ ಪೋಷಕರು ಆತಂಕ ಪಡುವ (sexual abuse) ಸುದ್ದಿಯೊಂದಿದೆ. ದೇಶದಲ್ಲಿ ಪ್ರತಿ ಗಂಟೆಗೆ ನಾಲ್ಕು ಅತ್ಯಾಚಾರ (Rape Case) ಪ್ರಕರಣಗಳು ನಡೆಯುತ್ತಿದ್ದು, ಶೇ. 95 ಪ್ರಕರಣಗಳಲ್ಲಿ ತಿಳಿದಿರುವ ವ್ಯಕ್ತಿಗಳಿಂದಲೇ (Known person) ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿರುವುದು ಆತಂಕದ ಸಂಗತಿಯಾಗಿದೆ. ಅದರಲ್ಲೂ 18ರಿಂದ 30 ವರ್ಷದೊಳಗಿನವರೇ ಹೆಚ್ಚಿನ ಪ್ರಕರಣಗಳಲ್ಲಿ ಬಲಿಪಶುಗಳಾಗಿದ್ದಾರೆ. 2017ರಿಂದ 2022ರ ನಡುವೆ ಪ್ರತಿದಿನ ಸರಾಸರಿ 86 ಅತ್ಯಾಚಾರ ಪ್ರಕರಣಗಳು ವರದಿಯಾಗಿದೆ. ಇದರಲ್ಲಿ 82 ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆಗೆ ಗೊತ್ತಿರುವವರಿಂದಲೇ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.
ಗಂಟೆಗೆ ನಾಲ್ಕು ಪ್ರಕರಣ
ದೇಶದಲ್ಲಿ ಪ್ರತಿ ಗಂಟೆಗೆ ಸುಮಾರು ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿದ್ದು, ಇವುಗಳಲ್ಲಿ ಮೂರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸಂತ್ರಸ್ತೆಯು ಅತ್ಯಾಚಾರ ನಡೆಸಿದವರನ್ನು ಬಲ್ಲವಳಾಗಿದ್ದಳು ಎಂದು ದಾಖಲೆಗಳು ಹೇಳಿವೆ.
ವಾರ್ಷಿಕ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯ ಪ್ರಕಾರ 2017ರಿಂದ 2022ರ ನಡುವೆ ಭಾರತದಲ್ಲಿ ಒಟ್ಟು 1.91 ಲಕ್ಷ ಅತ್ಯಾಚಾರ ಪ್ರಕರಣಗಳು ನಡೆದಿದೆ ಎನ್ನಲಾಗಿದ್ದು, 1.89 ಲಕ್ಷ ಅತ್ಯಾಚಾರ ಪ್ರಕರಣಗಳು ವರದಿಯಾಗಿದೆ. ಕನಿಷ್ಠ 1.79 ಲಕ್ಷ ಪ್ರಕರಣಗಳಲ್ಲಿ ಅತ್ಯಾಚಾರಿ ತಿಳಿದಿರುವ ವ್ಯಕ್ತಿಯಾಗಿದ್ದು, 9,670 ಪ್ರಕರಣಗಳಲ್ಲಿ ಅಷ್ಟೇ ಬಲಿಪಶುವಿಗೆ ತಿಳಿದಿಲ್ಲ.
18ರಿಂದ 30 ವರ್ಷದೊಳಗಿನವರೇ ಹೆಚ್ಚಿನ ಬಲಿಪಶುಗಳು
1.89 ಲಕ್ಷ ಪ್ರಕರಣಗಳಲ್ಲಿ 1.13 ಲಕ್ಷ ಅತ್ಯಾಚಾರ ಸಂತ್ರಸ್ತರು 18ರಿಂದ 30 ವರ್ಷ ವಯಸ್ಸಿನವರಾಗಿದ್ದಾರೆ. ಹೀಗಾಗಿ ಪ್ರತಿದಿನ ದಾಖಲಾಗುವ 86 ಅತ್ಯಾಚಾರ ಪ್ರಕರಣದಲ್ಲಿ 52 ಮಂದಿ 18ರಿಂದ 30 ವರ್ಷದೊಳಗಿನವರು. ಉಳಿದ ಪ್ರಕರಣಗಳು ದಿನಕ್ಕೆ 35 ಆಗಿದ್ದು, ಇತರ ವಯಸ್ಸಿನವರು ಎನ್ನಲಾಗಿದೆ.
ಕೆಲಸದ ಸ್ಥಳ ಸುರಕ್ಷಿತವೇ?
ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳು ಬಹಳ ಕಡಿಮೆಯಾದರೂ ಸರಾಸರಿಯಾಗಿ ಪ್ರತಿದಿನ ಕನಿಷ್ಠ ಒಬ್ಬ ಮಹಿಳೆ ಕೆಲಸದಲ್ಲಿ ಅಥವಾ ಕಚೇರಿ ಆವರಣದಲ್ಲಿ ಲೈಂಗಿಕ ಕಿರುಕುಳವನ್ನು ಎದುರಿಸುತಿದ್ದರೆ ಎನ್ನುವುದನ್ನು ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿ ಅಂಶ ತಿಳಿಸಿದೆ. 2014ರಿಂದ ಎನ್‌ಸಿಆರ್‌ಬಿ ಕಚೇರಿಯು ಐಪಿಸಿಯ ಸೆಕ್ಷನ್ 509 ಅವಮಾನದ ವರ್ಗದ ಅಡಿಯಲ್ಲಿ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಕುರಿತು ಡೇಟಾವನ್ನು ಸಂಗ್ರಹಿಸಲು ಪ್ರಾರಂಭಿಸಿತು.
ಆರಂಭಿಕ ವರ್ಷಗಳಲ್ಲಿ ಅಂದರೆ 2014 ಮತ್ತು 2015ರಲ್ಲಿ ಕಚೇರಿ ಆವರಣದಲ್ಲಿ ಲೈಂಗಿಕ ಕಿರುಕುಳ ಮತ್ತು ಇನ್ನೊಂದು ಕೆಲಸಕ್ಕೆ ಸಂಬಂಧಿಸಿದ ಸ್ಥಳಗಳು ಎಂಬ ಎರಡು ವಿಭಿನ್ನ ವಿಭಾಗಗಳನ್ನು ಹೊಂದಿದ್ದವು. ಆದರೆ 2016 ರ ಅನಂತರ ಈ ವರ್ಗಗಳನ್ನು ಲೈಂಗಿಕ ಕಿರುಕುಳ ‘ಕೆಲಸ ಅಥವಾ ಕಚೇರಿ ಆವರಣದಲ್ಲಿ’ ಎಂಬುದಾಗಿ ವಿಲೀನಗೊಳಿಸಲಾಗಿದೆ.
2014 ಮತ್ತು 2022ರ ನಡುವೆ ಕೆಲಸ ಅಥವಾ ಕಚೇರಿ ಆವರಣದಲ್ಲಿ ಕನಿಷ್ಠ 4,231 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ. ಆರಂಭದಲ್ಲಿ ಕಚೇರಿ ಆವರಣದಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳ ಸಂಖ್ಯೆಯು ಕಡಿಮೆಯಿತ್ತು. ಆದರೆ 2017 ರ ಅನಂತರ ಪ್ರತಿ ವರ್ಷ 400 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತವೆ.
2014, 2015 ಮತ್ತು 2016 ರಲ್ಲಿ ಎನ್‌ಸಿಆರ್‌ಬಿ ಉದ್ಯೋಗದಾತರು ಅಥವಾ ಸಹೋದ್ಯೋಗಿಗಳಿಂದ ಅತ್ಯಾಚಾರಗಳ ಸಂಖ್ಯೆಯನ್ನು ಬಹಿರಂಗಪಡಿಸಿದೆ. ಆರಂಭದ ಮೂರು ವರ್ಷಗಳಲ್ಲಿ ಉದ್ಯೋಗದಾತರು ಅಥವಾ ಸಹೋದ್ಯೋಗಿಗಳಿಂದ 1,795 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಪ್ರತಿದಿನ ಸುಮಾರು ಎರಡು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Child Trafficking: ಗೋವಾಗೆ ಕಳ್ಳಸಾಗಣೆ ಮಾಡುತ್ತಿದ್ದ ಹೆಣ್ಣು ಶಿಶು ರಕ್ಷಣೆ ವೇಳೆ ಅಧಿಕಾರಿಗಳ ಮೇಲೆ ಹಲ್ಲೆ
ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ಕಾಯಿದೆಯ ಅಡಿಯಲ್ಲಿ 2013ರಿಂದ ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳದ ದೂರುಗಳನ್ನು ಸ್ವೀಕರಿಸಲು 10ಕ್ಕಿಂತ ಹೆಚ್ಚು ಕೆಲಸಗಾರರನ್ನು ಹೊಂದಿರುವ ಎಲ್ಲಾ ಕೆಲಸದ ಸ್ಥಳಗಳಲ್ಲಿ ಆಂತರಿಕ ಸಮಿತಿಗಳನ್ನು ರಚಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ನೊಂದ ಮಹಿಳೆ ಅಥವಾ ಆಕೆಯ ಪರವಾಗಿ ಅಧಿಕಾರ ಹೊಂದಿರುವ ಯಾವುದೇ ವ್ಯಕ್ತಿ ಲೈಂಗಿಕ ಕಿರುಕುಳದ ಲಿಖಿತ ದೂರನ್ನು ಸಲ್ಲಿಸಬಹುದು.