ಮುಂಬಯಿ: ಶಕ್ತಿ ಕಪೂರ್ ತೆರೆಯ ಮೇಲೆ ಖಳ ನಾಯಕರಾದರೂ ಬದುಕಿನಲ್ಲಿ ಹೀರೊ ಆಗಿ ವಿಜೃಂಭಿಸಿದವರು. ಅದಕ್ಕಿಂತಲೂ ಹೆಚ್ಚಾಗಿ ಗೌರವಾನ್ವಿತ ಕುಟುಂಬ. ಆದರೆ, ಈಗ ಶಕ್ತಿ ಕಪೂರ್ ತಮ್ಮ 69ನೇ ವಯಸ್ಸಿನಲ್ಲಿ ಮಗನಿಂದಾಗಿ ಮುಜುಗರ ಎದುರಿಸಬೇಕಾಗಿ ಬಂದಿದೆ. ಪುತ್ರ ಸಿದ್ಧಾಂತ್ ಕಪೂರ್ ಬೆಂಗಳೂರಿನಲ್ಲಿ ನಡೆದ ಡ್ರಗ್ಸ್ ಪಾರ್ಟಿಯಲ್ಲಿ ಭಾಗವಹಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಸಹಜವಾಗಿಯೇ ಮಾಧ್ಯಮದ ಮಂದಿ ಶಕ್ತಿ ಕಪೂರ್ ಅವರಲ್ಲಿ ಮಗನ ರಾದ್ಧಾಂತದ ಬಗ್ಗೆ ಕೇಳಿದ್ದಾರೆ. ಅದಕ್ಕೆ ಅವರು ಕೊಟ್ಟಿರುವ ಉತ್ತರ: ನಾನು ಒಂದು ವಿಷಯ ಮಾತ್ರ ಹೇಳಬಲ್ಲೆ. ಅದು ಸಾಧ್ಯವೇ ಇಲ್ಲ.
ಮಗನ ಡ್ರಗ್ಸ್ ವ್ಯಸನ, ಅದಕ್ಕಾಗಿನ ಓಡಾಟಗಳ ಬಗ್ಗೆ ಕುಟುಂಬಕ್ಕೆ ಮಾಹಿತಿ ಇದ್ದಂತಿಲ್ಲ. ಆತ ಬೆಂಗಳೂರಿಗೆ ಬಂದು ಪಾರ್ಟಿಗಳಲ್ಲಿ ಭಾಗಹಿಸಿರುವ ಬಗ್ಗೆಯೂ ಅವರಿಗೆ ತಿಳಿದಂತಿಲ್ಲ. ಸಿದ್ಧಾಂತ್ ಭಾನುವಾರ ಮುಂಬೈನಿಂದ ಬೆಂಗಳೂರಿಗೆ ತೆರಳಿದ್ದರು ಮತ್ತು ತಡರಾತ್ರಿಯ ಪಾರ್ಟಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಸಿದ್ಧಾಂತ್ ಯಾವ ಹೋಟೆಲ್ ನಲ್ಲಿ ತಂಗಿದ್ದರು ಎಂಬುದು ಕಪೂರ್ ಕುಟುಂಬಕ್ಕೆ ತಿಳಿದಿರಲಿಲ್ಲ.
2020ರಲ್ಲಿ, ಮಾದಕವಸ್ತು ನಿಯಂತ್ರಣ ಬ್ಯೂರೋ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆ ನಡಸಿದಾಗ ಶ್ರದ್ಧಾ ಕಪೂರ್ ಅವರನ್ನೂ ವಿಚಾರಣಗೆ ಕರೆದಿತ್ತು.
ಡ್ರಗ್ಸ್ ಸೇವಿಸಿದ್ದು ನಿಜ: ಸುಬ್ರಹ್ಮಣ್ಯೇಶ್ವರ ರಾವ್
ಈ ನಡುವೆ, ಡ್ರಗ್ಸ್ ಸೇವಿಸಿದ್ದ ಆರು ಮಂದಿಯಲ್ಲಿ ಸಿದ್ಧಾಂತ್ ಕಪೂರ್ ಕೂಡ ಒಬ್ಬರು ಎಂದು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಸ್ಪಷ್ಟಪಡಿಸಿದ್ದಾರೆ.
“ಸಿದ್ಧಾಂತ್ ಕಪೂರ್ ಅವರಿಗೆ ಡ್ರಗ್ಸ್ ಪಾಸಿಟಿವ್ ಬಂದಿದ್ದು. ಆತನನ್ನು ಹಲಸೂರು ಪೊಲೀಸ್ ಠಾಣೆಗೆ ಕರೆತರಲಾಗಿದೆ ಎಂದು ಬೆಂಗಳೂರು ನಗರದ ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಎಸ್.ಗುಳೇದ್ ತಿಳಿಸಿದ್ದರು. ಅದನ್ನೇ ಸುಬ್ರಹ್ಮಣ್ಯೇಶ್ವರ ರಾವ್ ದೃಢಪಡಿಸಿದ್ದಾರೆ.
ಪಾರ್ಟಿ ಆಯೋಜಕರು ಯಾರು?
ಈ ನಡುವೆ, ರೇವ್ ಪಾರ್ಟಿ ಆಯೋಜನೆ ಮಾಡಿದ್ದು ಯಾರು? ಅಲ್ಲಿಗೆ ಡ್ರಗ್ಸ್ ಸಪ್ಲೈ ಮಾಡಿದವರು ಯಾರು ಎಂಬ ಹಲವು ಪ್ರಶ್ನೆಗಳಿಗೆ ಪೊಲೀಸರು ಉತ್ತರ ಹುಡುಕುತ್ತಿದ್ದಾರೆ.
ಇದನ್ನೂ ಓದಿ: ಪಾರ್ಕ್ ಹೋಟೆಲ್‌ನಲ್ಲಿ ಡ್ರಗ್ಸ್ ಪಾರ್ಟಿ, ಬಾಲಿವುಡ್ ನಟನ ಪುತ್ರ ವಶಕ್ಕೆ