Site icon Vistara News

Shirur landslide: ಶಿರೂರು ಭೂಕುಸಿತ; ಇನ್ನೂ ಪತ್ತೆಯಾಗದವರ ಶೋಧ ಕಾರ್ಯಾಚರಣೆ ಕೈಬಿಟ್ಟ ಜಿಲ್ಲಾಡಳಿತ

Shirur landslide

ಕಾರವಾರ: ಅಂಕೋಲಾದ ಶಿರೂರು ಭೂಕುಸಿತ ಪ್ರಕರಣದಲ್ಲಿ (Shirur landslide) ನಾಪತ್ತೆಯಾದ 11 ಮಂದಿ ಪೈಕಿ 8 ಮಂದಿ ಮೃತದೇಹ ಸಿಕ್ಕಿದ್ದವು. ಆದರೆ, ಉಳಿದ ಮೂವರ ಶವಗಳು, 13ನೇ ದಿನದ ಕಾರ್ಯಾಚರಣೆಯಲ್ಲೂ ಸಿಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಮುಳುಗು ತಜ್ಞ ಈಶ್ವರ ಮಲ್ಪೆ ನೇತೃತ್ವದಲ್ಲಿ ಭಾನುವಾರ ಹುಡುಕಾಟ ನಡೆಸಲಾಗಿದೆ. ಆದರೂ ಮೂವರ ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿದೆ.

ಜುಲೈ 16 ರಂದು ಶಿರೂರು ಬಳಿ ನಡೆದ ಗುಡ್ಡಕುಸಿತ ದುರಂತದಲ್ಲಿ 11 ಮಂದಿ ನಾಪತ್ತೆಯಾಗಿದ್ದರು. ಅವರಲ್ಲಿ 8 ಮಂದಿ ಶವವಾಗಿ ಸಿಕ್ಕಿದ್ದರು. ನಾಪತ್ತೆಯಾಗಿದ್ದ ಜಗನ್ನಾಥ ನಾಯ್ಕ, ಲೋಕೇಶ, ಅರ್ಜುನ್‌‌ ಸೇರಿ ಮೂವರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಹಲವರು ಮಣ್ಣಿನಡಿ ಸಿಲುಕಿದ್ದರು, ಇನ್ನೂ ಕೆಲವರು ಗಂಗಾವಳಿ ನದಿಗೆ ಬಿದ್ದ ಹಿನ್ನೆಲೆಯಲ್ಲಿ ನದಿಯಲ್ಲೂ ಹುಡುಕಾಟ ನಡೆಸಲಾಗುತ್ತಿದೆ. ನೀರಿನ ವೇಗ ಹೆಚ್ಚಿರುವುದು ಹಾಗೂ ನದಿಯಲ್ಲಿರುವ ಮಣ್ಣು, ಕಲ್ಲು ಬಂಡೆ ಹಾಗೂ ಮರದ ದಿಮ್ಮಿಗಳಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಅಲ್ಲದೇ ಕಾರ್ಯಾಚರಣೆಯಲ್ಲಿ ಲಾರಿಯನ್ನು ಮೇಲಕ್ಕೆ ಎತ್ತಲೂ ಸಾಧ್ಯವಾಗಿಲ್ಲ.

ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ.ಕೆ ಪ್ರತಿಕ್ರಿಯಿಸಿ, ನಿನ್ನೆ ಮೂರು ಹಾಗೂ ಇವತ್ತು ಒಂದು ಪಾಯಿಂಟ್‌ನಲ್ಲಿ ಹುಡುಕಾಟ ಮಾಡಲಾಗಿದೆ. ಆದರೆ ಎಲ್ಲೂ ಲಾರಿ ಸಿಕ್ಕಿಲ್ಲ, ಕಣ್ಮರೆಯಾಗಿರುವರೂ ಪತ್ತೆಯಾಗಿಲ್ಲ. ಕಾರ್ಯಾಚರಣೆ ವೇಳೆ ಕಲ್ಲು, ಮರದ ತುಂಡುಗಳು ಅಡ್ಡಿಯಾಗಿದ್ದಾಗಿ ಮುಳುಗು ತಜ್ಞ ಈಶ್ವರ್ ಮಲ್ಪೆ ತಿಳಿಸಿದ್ದಾರೆ. ನೀರಿನ ಹರಿವು ಸಹ ಹೆಚ್ಚಾಗಿರುವುದರಿಂದ ಶೋಧ ಕಾರ್ಯ ನಡೆಸಲಾಗಿಲ್ಲ. ಮುಂದಿನ ಕಾರ್ಯಾಚರಣೆ ಬಗ್ಗೆ ಜಿಲ್ಲಾ‌ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಕಾಣೆಯಾದವರ ಪತ್ತೆಗೆ ಶತ ಪ್ರಯತ್ನ: ಶಾಸಕ ಸತೀಶ್ ಸೈಲ್

ಕಾರ್ಯಾಚರಣೆ ಸ್ಥಗಿತ ಕುರಿತು ಶಾಸಕ ಸತೀಶ್ ಸೈಲ್ ಪ್ರತಿಕ್ರಿಯಿಸಿ, ಈಶ್ವರ ಮಲ್ಪೆ ತಂಡ ನೆನ್ನೆಯಿಂದ ಶತ ಪ್ರಯತ್ನ ಮಾಡಿದೆ. ನದಿಯ ಪರಿಸ್ಥಿತಿ ನೋಡಿ ಕಾರ್ಯಾಚರಣೆ ಸಾಧ್ಯವಿಲ್ಲ ಎಂದು ಭಾವಿಸಲಾಗಿತ್ತು. ಆದರೂ ಅವರು ನಾಲ್ಕನೇ ಪಾಯಿಂಟ್‌ನಲ್ಲಿ ಹುಡುಕಾಡಿದ್ದಾರೆ. ಇವತ್ತು ಮಣ್ಣು ಮಿಶ್ರಿತ ನೀರು ಹೆಚ್ಚಾಗಿ ಹರಿಯುತ್ತಿದ್ದ ಹಿನ್ನೆಲೆ ಹುಡುಕಾಟ ಸಾಧ್ಯವಾಗಿಲ್ಲ. ಕಣ್ಮರೆಯಾದವರ ಶೋಧಕ್ಕೆ ತಿರುಚ್ಚಿಯಲ್ಲಿ ಕ್ರೇನ್ ಇರುವ ಬೋಟ್ ಇದೆ. ಆದರೆ ಅದನ್ನು ಅಲ್ಲಿಂದ ತರಿಸಲು ತಡವಾಗಬಹುದು. ಸರ್ಕಾರದೊಂದಿಗೆ ಮಾತನಾಡಿ ಸಾಧ್ಯವಾದ ಪ್ರಯತ್ನ ಮಾಡುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚಿಸಿ ಮುಂದಿನ ಕಾರ್ಯಾಚರಣೆ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದ ಜಿಲ್ಲಾ ಉಸ್ತುವಾರಿ ಸಚಿವ

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಒಂದು ಕಡೆ ಮಣ್ಣಿನಡಿ ಲಾರಿ ಇದೆ ಎಂದಿದ್ದರು, ಒಂದು ವಾರದಲ್ಲಿ ಕಾರ್ಯಾಚರಣೆ ನಡೆಸಿ ಮಣ್ಣು ತೆಗೆದೆವು. ಈಗ ನೀರಿನಲ್ಲಿ ಇದೆ ಎಂದಾಗ ನದಿಯಲ್ಲಿ ಕಾರ್ಯಾಚರಣೆ ಮಾಡಿದ್ದೇವೆ. ಎಲ್ಲಾ ಪ್ರಯತ್ನ ಮಾಡಿದರೂ ಮೂವರ ಮೃತ ದೇಹ ಸಿಗದಿರುವುದು ಬೇಸರ ತಂದಿದೆ. ದೇಹ ಸಿಗದೇ ಇದ್ದವರಿಗೂ ಅವರ ಅವಲಂಬಿತರ ಬಳಿ ಅಗ್ರಿಮೆಂಟ್ ಮಾಡಿಕೊಂಡು ಪರಿಹಾರ ನೀಡುತ್ತೇವೆ. ಮೃತರ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾದರೆ ಅವರ ಜೊತೆ ನಾವು ಇರುತ್ತೇವೆ. ಕಾರ್ಯಾಚರಣೆ ಸ್ಥಗಿತ ಆಗಿಲ್ಲ, ಆದರೆ ಮಾಡಲು ಸಾಧ್ಯವಾಗುತ್ತಿಲ್ಲ. ನೀರಿನ ಪ್ರಮಾಣ ಕಡಿಮೆಯಾದ ನಂತರ ಕಾರ್ಯಾಚರಣೆ ಮಾಡುತ್ತೇವೆ. ಮುಳುಗಿರುವ ಟ್ರಕ್ ಮೇಲಕ್ಕೆ ಎತ್ತುವ ಪ್ರಯತ್ನ ಮಾಡುತ್ತೇವೆ. ಗುಡ್ಡ ಕುಸಿತದ ಬಗ್ಗೆ ಮಾಹಿತಿ ಪಡೆದು ಸಂಚಾರಕ್ಕೆ ಅನುವು ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ.

Exit mobile version