ದೆಹಲಿ ಶ್ರದ್ಧಾ ವಾಳ್ಕರ್ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ವಿಷಯ ಬಹಿರಂಗಗೊಳ್ಳುತ್ತಿದೆ. ಅಫ್ತಾಬ್ ಎಂಬ ವಿಕೃತ ಹಂತಕ ಶ್ರದ್ಧಾಳನ್ನು 35 ತುಂಡುಗಳನ್ನಾಗಿ ಕತ್ತರಿಸಿ, ದೆಹಲಿಯ ವಿವಿಧ ಕಡೆ ಎಸೆದಿದ್ದಾನೆ. ಆ ದೇಹದ ಭಾಗಗಳನ್ನು ಪತ್ತೆ ಮಾಡುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ ಶ್ರದ್ಧಾ ಕೇಸ್ನಲ್ಲಿ ಮತ್ತೊಂದು ಬೆಳವಣಿಗೆಯಾಗಿದ್ದು, ಮೆಹ್ರೌಲಿ ಅರಣ್ಯದಲ್ಲಿ ಶ್ರದ್ಧಾಳ ಮೂರು ಮೂಳೆಗಳು ಪತ್ತೆಯಾಗಿವೆ. ಅವು ಶ್ರದ್ಧಾಳದ್ದೇ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಮೆಹ್ರೌಲಿ ಬಳಿಯೇ ಅಪಾರ್ಟ್ಮೆಂಟ್ನಲ್ಲಿ ಶ್ರದ್ಧಾ ಮತ್ತು ಅಫ್ತಾಬ್ ಲಿವ್ ಇನ್ ರಿಲೇಶನ್ಶಿಪ್ನಲ್ಲಿ ಇದ್ದರು. ಇವರಿಬ್ಬರ ಮಧ್ಯೆಯ ಜಗಳ ಆಕೆಯ ಹತ್ಯೆಯಲ್ಲಿ ಅಂತ್ಯವಾಗಿತ್ತು. ಶ್ರದ್ಧಾಳನ್ನು ಕೊಲೆ ಮಾಡಿದ್ದ ಪಾಪಿ ಅಫ್ತಾಬ್ ಅವಳನ್ನು 35 ತುಂಡುಗಳನ್ನಾಗಿ ಕತ್ತರಿಸಿ, ಶವದ ತುಂಡುಗಳನ್ನು ಫ್ರಿಜ್ನಲ್ಲಿ ಇಟ್ಟುಕೊಂಡು ಅದನ್ನು ಒಂದೊಂದಾಗಿ ಎಸೆದಿದ್ದ. ಆತ ಬಹುತೇಕ ಭಾಗಗಳನ್ನು ಎಸೆದಿದ್ದು ಮೆಹ್ರೌಲಿ ಅರಣ್ಯದಲ್ಲೇ ಆಗಿದೆ. ಈಗಾಗಲೇ ಪೊಲೀಸರು ಅಲ್ಲಿಗೆ ಅಫ್ತಾಬ್ನನ್ನೂ ಕರೆದುಕೊಂಡು ಹೋಗಿ, ಶ್ರದ್ಧಾ ಮೃತದೇಹದ ತುಂಡುಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ನವೆಂಬರ್ 16ರಿಂದ ಇಲ್ಲಿಯವರೆಗೆ ಮೂರು ಬಾರಿ ಅರಣ್ಯದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಇಂದು ಮುಂಜಾನೆ 6ಗಂಟೆಗೆ ಒಂದು ಸುತ್ತು ಮತ್ತು 9 ಗಂಟೆಗೆ ಇನ್ನೊಂದು ಸುತ್ತು ಶೋಧ ಕಾರ್ಯಕ್ಕಾಗ ಹೋಗಿದ್ದ ಅವರಿಗೆ ಮೂರು ಎಲುಬುಗಳು ಪತ್ತೆಯಾಗಿವೆ.
ಇನ್ನು ಈಗ ಸಿಕ್ಕ ಮೂಳೆಗಳೆಲ್ಲ ಕತ್ತರಿಸದಂತೆ ಇವೆ. ಯಾವುದೇ ದೊಡ್ಡದಾದ ಮಾರಕ ಅಸ್ತ್ರದಲ್ಲೇ ಅವುಗಳನ್ನು ಕತ್ತರಿಸಿದ್ದು ಗೊತ್ತಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದು ಶ್ರದ್ಧಾಳ ಎಲುಬುಗಳೇ ಎಂಬುದು ಗೊತ್ತಾಗುತ್ತಿದ್ದರೂ, ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಯ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Shraddha Murder Case | 2 ವರ್ಷದಿಂದಲೂ ಶ್ರದ್ಧಾ ಮೇಲೆ ಅಫ್ತಾಬ್ ಸತತ ಹಲ್ಲೆ, ಆಕೆಯ ಗೆಳೆಯ ಹೇಳಿದ್ದೇನು?