ನವ ದೆಹಲಿ: ನವ ದೆಹಲಿಯ ಹೈದರ್‌ಪುರದಲ್ಲಿರುವ ಜಲ ಶುದ್ಧೀಕರಣದಲ್ಲಿ ಸಿಕ್ಕಿಂ ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬ ತನ್ನ ಪತ್ನಿಯ ಬಗ್ಗೆ ಕೆಟ್ಟದಾಗಿ ನಿಂದಿಸಿದರು ಎಂಬ ಕಾರಣಕ್ಕೆ ಮೂವರು ಸಹೋದ್ಯೋಗಿಗಳ ಮೇಲೆ ಸೋಮವಾರ ಗುಂಡಿನ ದಾಳಿ ನಡೆಸಿದ್ದಾನೆ. ಈ ಘಟನೆಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಮತ್ತೊಬ್ಬ ಪೊಲೀಸ್ ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಇವರೆಲ್ಲರೂ ಇಂಡಿಯನ್ ರಿಸರ್ವ್ ಬೆಟಾಲಿಯನ್ ( ಐಆರ್‌ಬಿಎನ್) ಪಡೆಯ ಭದ್ರತಾ ಸೇವೆ ವಿಭಾಗದಲ್ಲಿದ್ದರು. ಘಟಕದ ಭದ್ರತೆಯನ್ನು ನೋಡಿಕೊಳ್ಳುತ್ತಿದ್ದರು.
ಜಮ್ಮು ಕಾಶ್ಮೀರದ ಉಧಾಮ್ ಪುರದಲ್ಲಿ ಇಂಡೊ-ಟಿಬೆಟಿಯನ್ ಗಡಿ ಭದ್ರತೆಯ ಪೊಲೀಸ್ ಪೊಲೀಸ್ ಸಿಬ್ಬಂದಿಯೊಬ್ಬ ಕಳೆದ ವಾರ ಮೂವರು ಸಹೋದ್ಯೋಗಿಗಳಿಗೆ ಗುಂಡಿಕ್ಕಿ ತಾನೂ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಈ ಘಟನೆ ನಡೆದಿದೆ. ಈ ದಾಳಿಯಲ್ಲಿ ಇಬ್ಬರು ಸಾವಿಗೀಡಾಗಿದ್ದರು. ಇಲ್ಲೂ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿ ಕಲಹ ಏರ್ಪಟ್ಟಿತ್ತು.
ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಬೀನ್ ರಾಯ್‌ನನ್ನು (೩೨) ದಿಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವರದಿಗಳ ಪ್ರಕಾರ ಆರೋಪಿ ಪ್ರಬೀನ್ ರಾಯ್, ತನ್ನ ಪತ್ನಿ ಬಗ್ಗೆ ಕೆಟ್ಟದಾಗಿ ನಿಂದಿಸಿದರು ಎಂಬ ಕಾರಣಕ್ಕೆ ಗುಂಡಿನ ದಾಳಿ ನಡೆಸಿದ್ದಾನೆ.
ಗುಂಡಿನ ದಾಳಿಗೆ ಹತರಾದವರನ್ನು ಕಮಾಂಡರ್ ಪಿಂಟೊ ನಮುಗ್ಯಲ್ ಭುಟಿಯಾ, ಇಂದ್ರ ಲಾಲ್ ಛೆಟ್ರಿ ಎಂದು ಗುರುತಿಸಲಾಗಿದೆ. ಇಬ್ಬರೂ ೨೦೧೩ ಬ್ಯಾಚ್‌ನ ಸಿಬ್ಬಂದಿ. ಇಬ್ಬರೂ ಗುಂಡಿನ ದಾಲಿಗೆ ಸ್ಥಳದಲ್ಲೇ ಮೃತಪಟ್ಟರು. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡರು.