ನವದೆಹಲಿ: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಚಿನ್ನಾಭರಣ ವ್ಯಾಪಾರಿಗಳ ಮನೆಯಲ್ಲಿ ದರೋಡೆ ಮಾಡುವ, ಅಕ್ಷಯ್ ಕುಮಾರ್, ಅನುಪಮ್ ಖೇರ್ ಸೇರಿ ಹಲವರು ನಟಿಸಿರುವ ಸ್ಪೆಷಲ್ 26 (Special 26) ಸಿನಿಮಾವನ್ನು ನೋಡಿರುತ್ತೀರಿ. ಆದರೆ, ದೆಹಲಿಯಲ್ಲಿ (Delhi) ಕೆಲವು ದುಷ್ಕರ್ಮಿಗಳು ಈ ಸಿನಿಮಾ ಶೈಲಿಯಲ್ಲಿಯೇ ವ್ಯಕ್ತಿಯೊಬ್ಬರ ಮನೆಯಲ್ಲಿ 3.2 ಕೋಟಿ ರೂಪಾಯಿ ದೋಚಿಸಿದ್ದಾರೆ.
ಹೌದು, ದೆಹಲಿಯ ಬಾಬಾ ಹರಿದಾಸ್ ನಗರದಲ್ಲಿ ಕೆಲವು ದುಷ್ಕರ್ಮಿಗಳು ಮನೆಯೊಂದಕ್ಕೆ ನುಗ್ಗಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಂದು ನಂಬಿಸಿ, ಮನೆಯಲ್ಲಿ ಶೋಧ ಮಾಡಬೇಕು ಎಂದು ನಟಿಸಿ, ಸುಮಾರು 3.2 ಕೋಟಿ ರೂಪಾಯಿಯನ್ನು ಲಪಟಾಯಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬನನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ. ಬಂಧಿತನಿಂದ ಒಂದು ಬಂದೂಕು ವಶಪಡಿಸಿಕೊಂಡಿದ್ದಾರೆ.
दिल्ली पुलिस के @DCPPCRDELHI के कर्मियों ने 70 लाख की चोरी कर, कार से भाग रहे एक आरोपी का पीछा कर पकड़ा।
— Delhi Police (@DelhiPolice) October 14, 2023
आरोपी के पास एक पिस्तौल और 4 ज़िंदा कारतूस बरामद।#DPUpdates pic.twitter.com/J2BrXBLL2r
ಅಷ್ಟಕ್ಕೂ ಆಗಿದ್ದೇನು?
ಸ್ಪೆಷಲ್ 26 ಸಿನಿಮಾ ರೀತಿಯಲ್ಲಿಯೇ ಒಂದಷ್ಟು ಜನ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿದ್ದವರಿಗೆ ನಾವು ಇ.ಡಿ ಅಧಿಕಾರಿಗಳು ಎಂದು, ಹವಾಲ ದಂಧೆ ಸುಳಿವಿದೆ ಎಂದು ನಂಬಿಸಿ ಮನೆಯಲ್ಲಿ ಶೋಧ ನಡೆಸಿದ್ದಾರೆ. ಆದರೆ, ಇ.ಡಿ ಅಧಿಕಾರಿಗಳ ರೀತಿ ವರ್ತಿಸದೆ, ಬಂದೂಕು ಹಿಡಿದು ಮನೆಯಲ್ಲಿ ಶೋಧ ನಡೆಸಿದ್ದು ಮನೆಯಲ್ಲಿದ್ದವರಿಗೆ ಅನುಮಾನ ಬಂದಿದೆ. ಮನೆಯಲ್ಲಿದ್ದ ಹಣ ತೆಗೆದುಕೊಂಡು ಹೋದ ಬಳಿಕ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: Robbery Case : ಬೆಂಗಳೂರಲ್ಲಿ ಚಿನ್ನದ ಅಂಗಡಿಗೆ ನುಗ್ಗಿ ಗುಂಡು ಹಾರಿಸಿ ದರೋಡೆ!
“ದೆಹಲಿ ಪೊಲೀಸ್ ಕಂಟ್ರೋಲ್ ರೂಮ್‌ಗೆ ದರೋಡೆ ಕುರಿತು ಮಾಹಿತಿ ಲಭ್ಯವಾಗಿದೆ. ಕೂಡಲೇ ದೆಹಲಿ ಪೊಲೀಸರು ದುಷ್ಕರ್ಮಿಗಳನ್ನು ಬೆನ್ನತ್ತಿ ಒಬ್ಬನನ್ನು ಬಂಧಿಸಿದ್ದಾರೆ. ಬಂಧಿತನ ಬಳಿ 70 ಲಕ್ಷ ರೂ. ಪತ್ತೆಯಾಗಿದೆ. ಒಂದು ಬಂದೂಕು ಕೂಡ ಸಿಕ್ಕಿದೆ” ಎಂದು ದೆಹಲಿ ಪೊಲೀಸರು ವಿಡಿಯೊ ಸಮೇತ ಪೋಸ್ಟ್ ಮಾಡಿದ್ದಾರೆ. ಬಂಧಿತನನ್ನು ಅಮಿತ್ ಎಂದು ಗುರುತಿಸಲಾಗಿದ್ದು, ಈತ ಸೋನಿಪತ್‌ನವನು ಎಂದು ತಿಳಿದುಬಂದಿದೆ.
ವ್ಯಕ್ತಿ ಬಳಿ ಇಷ್ಟೊಂದು ದುಡ್ಡು ಬಂದಿದ್ದು ಹೇಗೆ?
ದೆಹಲಿಯಲ್ಲಿ ವಾಸವಿದ್ದ ವ್ಯಕ್ತಿಯ ಬಳಿ ಅಷ್ಟೊಂದು ದುಡ್ಡು ಎಲ್ಲಿಂದ ಬಂದಿದೆ ಎಂಬ ಕುರಿತು ಕೂಡ ಪೊಲೀಸರು ತನಿಖೆ ನಡೆಸಿದ್ದಾರೆ ಎನ್ನಲಾಗಿದೆ. ಗುರುಗ್ರಾಮದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯು ಇತ್ತೀಚೆಗೆ ತಮ್ಮ ಎರಡೂವರೆ ಎಕರೆ ಜಮೀನು ಮಾರಾಟ ಮಾಡಿದ್ದಾರೆ. ಅದರಿಂದ ಅವರಿಗೆ 4.7 ಕೋಟಿ ರೂ. ಬಂದಿದೆ. ಕಳೆದ ವಾರ ಅವರಿಗೆ 3.2 ಕೋಟಿ ರೂ. ನೀಡಲಾಗಿದೆ. ಇದನ್ನು ಅವರು ಮನೆಯಲ್ಲಿ ಇಟ್ಟಿದ್ದರು. ಆದರೆ, ಈ ಮಾಹಿತಿಯು ದುಷ್ಕರ್ಮಿಗಳಿಗೆ ಹೇಗೆ ಗೊತ್ತಾಯಿತು ಎಂಬುದೇ ನಿಗೂಢವಾಗಿದೆ.