Site icon Vistara News

Self Harming: ಹಾಲ್‌ ಟಿಕೆಟ್‌ ಕುರಿ ತಿಂದಿದ್ದರಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

student tried self harming

ಬಸವಕಲ್ಯಾಣ: ಪರೀಕ್ಷೆ ಬರೆಯಲು ಶಾಲೆಯಿಂದ ನೀಡಲಾದ ಪ್ರವೇಶ ಪತ್ರ (ಹಾಲ್ ಟಿಕೆಟ್) ಕುರಿ ತಿಂದ ಕಾರಣ ಮನನೊಂದ ವಿದ್ಯಾರ್ಥಿನಿಯೊಬ್ಬಳು ಬಾವಿಗೆ ಬಿದ್ದು ಆತ್ಮಹತ್ಯೆ (Self Harming) ಮಾಡಿಕೊಳ್ಳಲು ಯತ್ನಿಸಿದ ಘಟನೆ ಬೀದರ್‌ (Bidar news) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋಕುಳ ಗ್ರಾಮದಲ್ಲಿ ಸೋಮವಾರ ಸಂಜೆ ಜರುಗಿದೆ.

ಗೋಕುಳ ಗ್ರಾಮದ ನಿವಾಸಿ ಪೂಜಾ ಮಾರುತಿ ಮೇತ್ರೆ (14) ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ. ಗ್ರಾಮದ ಖಾಸಗಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿನಿಯ ಪ್ರವೇಶ ಪತ್ರವನ್ನು ಸೋಮವಾರ ಕುರಿ ತಿಂದು ಹಾಕಿತು. ಇದರಿಂದ ಆತಂಕಗೊಂಡು, ಮನನೊಂದ ಈಕೆ ಶಾಲೆಯ ಮುಖ್ಯ ಗುರುಗಳ ಹೆಸರಿನಲ್ಲಿ ಒಂದು ಪತ್ರ ಬರೆದಿದ್ದು, ʼನನ್ನ ಪರೀಕ್ಷೆ ಪ್ರವೇಶ ಪತ್ರ ಕಳೆದ ಕಾರಣ ನನಗೆ ಶಾಲೆಗೆ ಬರಲು ಆಗಲ್ಲ. ನಾನು ಸತ್ತು ಹೋಗುತ್ತಿದ್ದೆನೆ. ನನ್ನನ್ನು ಕ್ಷಮಿಸಿ ಬಿಡಿʼ ಎಂದು ವಿವರಿಸಿದ್ದಾಳೆ.

ಶಿಕ್ಷಕರ ಹೆಸರಿಗೆ ಈಕೆ ಬರೆದ ಪತ್ರವನ್ನು ತನ್ನ ಅಣ್ಣನ ಕೈಗೆ ನೀಡಿದ ಇವಳು ಸಂಜೆ 7 ಗಂಟೆ ಸುಮಾರಿಗೆ ಮನೆಯಿಂದ ನಾಪತ್ತೆಯಾಗಿದ್ದಾಳೆ. ಈಕೆ ನಾಪತ್ತೆಯಾಗಿರುವುದನ್ನು ಗಮನಿಸಿದ ಸ್ಥಳೀಯರು ಗ್ರಾಮದ ವ್ಯಾಪ್ತಿಯಲ್ಲಿ ಹುಡುಕಾಟ ಆರಂಭಿಸಿದ್ದಾರೆ. ರಾತ್ರಿ 11.30ರ ಸುಮಾರಿಗೆ ಈಕೆ ತನ್ನ ಸಂಬಂಧಿಕರ ಜಮೀನಿನಲ್ಲಿಯ ಬಾವಿಯಲ್ಲಿ ಅಳುತ್ತ ಕುಳಿತಿರುವುದು ಗಮನಿಸಿ ತಕ್ಷಣ ಬಾವಿಯಿಂದ ಮೇಲೆ ತಗೆದು ರಕ್ಷಣೆ ಮಾಡಿದ್ದಾರೆ.

ಸುಮಾರು 30 ಅಡಿಗಳಷ್ಟು ಆಳವಾಗಿರುವ ಬಾವಿಯಲ್ಲಿ ನೀರು ಕಡಿಮೆ ಇರುವ ಕಾರಣ ಜೀವಕ್ಕೆ ತೊಂದರೆಯಾಗಿಲ್ಲ. ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.

ಪಟಾಕಿ ಸ್ಫೋಟದಿಂದ ಕಾರ್ಮಿಕ ಸಾವು

ಮಂಡ್ಯ : ಮಂಡ್ಯದಲ್ಲಿ ಪಟಾಕಿ (Firecrackers) ಸ್ಫೋಟಗೊಂಡು (Fire Accident) ಒಬ್ಬ ಕಾರ್ಮಿಕ ಮೃತಪಟ್ಟಿದ್ದಾರೆ. ಮತ್ತಿಬ್ಬರಿಗೆ ಗಂಭೀರ ಗಾಯವಾಗಿದೆ. ಮಂಡ್ಯ ತಾಲೂಕಿನ ಜಿ.ಕೆಬ್ಬಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ತಮಿಳುನಾಡು ಮೂಲದ ರಮೇಶ್ (67) ಮೃತ ದುರ್ದೈವಿ.

ನಾಗಲಿಂಗ ಎಂಬಾತ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಬ್ಬಳ್ಳಿ ಗ್ರಾಮದಲ್ಲಿ ಕಾಲಭೈರವೇಶ್ವರ ಹಬ್ಬಕ್ಕೆಂದು ಪಟಾಕಿ ಸಿಡಿಸಲು ತಮಿಳುನಾಡಿನಿಂದ ನಾಲ್ವರು ಆಗಮಿಸಿದ್ದರು. ನಿನ್ನೆ ಭಾನುವಾರ ರಾತ್ರಿ ಗ್ರಾಮದಲ್ಲಿ ಅದ್ಧೂರಿಯಾಗಿ ಹಬ್ಬ ನೆರವೇರಿತ್ತು. ಬಳಿಕ ಗ್ರಾಮದ ಆಲೆಮನೆಯೊಂದರಲ್ಲಿ ನಾಲ್ವರು ತಂಗಿದ್ದರು.

ಇಂದು ಸೋಮವಾರ ಬೇರೊಂದು ಗ್ರಾಮಕ್ಕೆ ಹೋಗಲು ಪಟಾಕಿಗಳನ್ನು ತುಂಬುವಾಗ ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಹೆಂಚುಗಳು ಹಾರಿಹೋಗಿ ಜತೆಗೆ ಆಲೆಮನೆಯು ಹೊತ್ತಿಉರಿದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದಾರೆ.

ಸ್ಥಳಕ್ಕೆ ಡಿಸಿ ಡಾ ಕುಮಾರ್, ಎಸ್ ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರ್ಮಿಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆರೆಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Blast in Bengaluru: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಸ್ಲೀಪರ್‌ ಸೆಲ್‌ ಆಗಿದ್ದ ಇಬ್ಬರು ವಶಕ್ಕೆ, ಏನ್‌ ಮಾಡಿದ್ರು?

Exit mobile version