Site icon Vistara News

Students Death: ಇಬ್ಬರು ಮಕ್ಕಳ ಜೀವ ಕಸಿದ ಮೊಬೈಲ್;‌ ತಂದೆ- ತಾಯಿ ಫೋನ್ ಕೊಡದಿದ್ದುದಕ್ಕೆ ಆತ್ಮಹತ್ಯೆ

students death

ಮಂಗಳೂರು: ಮೊಬೈಲ್‌ ಬಳಕೆ ಸಾಕು ಮಾಡಿ (Smartphone Use) ಎಂದು ಪೋಷಕರು ಬುದ್ಧಿ ಹೇಳಿ ಫೋನ್‌ ಎತ್ತಿಟ್ಟದ್ದರಿಂದ ಕೋಪಗೊಂಡ ಇಬ್ಬರು ಮಕ್ಕಳು ಆತ್ಮಹತ್ಯೆ (Students Death) ಮಾಡಿಕೊಂಡಿದ್ದಾರೆ. ಈ ಎರಡು ಪ್ರತ್ಯೇಕ ಆತ್ಮಹತ್ಯೆ (Self Harming) ಪ್ರಕರಣಗಳು ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ (Udupi) ಜಿಲ್ಲೆಗಳಲ್ಲಿ ನಡೆದಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪ ಕರಾಯದಲ್ಲಿ ನೀಲಮ್ ಎಂಬ ಬಾಲಕಿ ನೇಣು ಬಿಗಿದು ಸಾವನ್ನಪ್ಪಿದ್ದರೆ, ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ವಿದ್ಯಾರ್ಥಿ ಪ್ರಥಮೇಶ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎರಡೂ ಪ್ರಕರಣಗಳು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ.

ಪರೀಕ್ಷೆಗಳು ಹತ್ತಿರವಾಗುತ್ತಿವೆ, ಮೊಬೈಲ್ ಅನ್ನು ಪದೇ ಪದೇ ನೋಡಿ ಮಾರ್ಕ್ ಕಡಿಮೆ ಪಡೆಯಬೇಡ, ಓದುವುದರ ಕಡೆ ಗಮನ ಕೊಡು ಎಂದು ಹೆತ್ತವರು ಹಿರಿಯಡ್ಕ ಸರಕಾರಿ ಪದವಿಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿ ಹಾಗು ಅಂಜಾರು ಪೊಲೀಸ್ ಕ್ವಾರ್ಟರ್ಸ್ ಬಳಿ ನಿವಾಸಿ ಪ್ರಥಮೇಶ್ (17)ಗೆ ಆಗಾಗ್ಗೆ ಹೇಳುತ್ತಿದ್ದರು. ಇದಕ್ಕೆ ಪೂರಕವಾಗಿ ಆತನಿಗೆ ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳು ಬರುತ್ತಿದ್ದವು. ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಆತನ ಚಾಳಿ ಕಡಿಮೆ ಮಾಡಲು ಮನೆಯವರು ಬುದ್ಧಿ ಮಾತು ಹೇಳಿ ಮೊಬೈಲ್ ತೆಗೆದಿಟ್ಟಿದ್ದರು.

ಆದರೆ ಕಾಲೇಜಿಗೆಂದು ಹೋದ ವಿದ್ಯಾರ್ಥಿ, ಅತ್ತ ಕಾಲೇಜಿಗೂ ಹೋಗದೆ, ಮನೆಗೂ ಬಾರದೆ ನಾಪತ್ತೆಯಾಗಿದ್ದ. ಸೋಮವಾರ ಎಷ್ಟು ಹುಡುಕಿದರೂ ಪ್ರಥಮೇಶ್ ಸಿಕ್ಕಿರಲಿಲ್ಲ. ಮಂಗಳವಾರ ಬೆಳಗ್ಗೆ ಹಿರಿಯಡ್ಕ ಪ್ರಥಮ ದರ್ಜೆ ಕಾಲೇಜಿನ ಸಮೀಪ ಜನವಸತಿರಹಿತ ಬಾವಿಯಲ್ಲಿ ಶಾಲಾ ಬ್ಯಾಗ್ ತೇಲುತ್ತಿರುವುದನ್ನು ಯಾರೋ ಕಂಡು ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ವಿದ್ಯಾರ್ಥಿಯ ಮೃತದೇಹ ಹೊರಕ್ಕೆ ತೆಗೆದಿದ್ದಾರೆ.

ತಾಯಿ ಮೇಲಿನ ಮುನಿಸಿಗೆ ಆತ್ಮಹತ್ಯೆ

ಪದೇ ಪದೇ ಮೊಬೈಲ್‌ನಲ್ಲಿ ವಿಡಿಯೋ ಕರೆ ಮಾಡಿ ಮಾತನಾಡುವುದನ್ನು ಆಕ್ಷೇಪಿಸಿದ ತಾಯಿಯ ಮೇಲೆ ಮುನಿಸಿಕೊಂಡ ಬಾಲಕಿ ಆತ್ಮಹತ್ಯೆ ಮಾಡಿಕೊಂಡು ಸೇಡು ತೀರಿಸಿಕೊಂಡಿದ್ದಾಳೆ. 14 ವರ್ಷದ ಈ ಬಾಲಕಿ ನೇಣು ಬಿಗಿದು ಸಾವನ್ನಪ್ಪಿದ್ದಾಳೆ. ಉಪ್ಪಿನಂಗಡಿ ಸಮೀಪದ ಕರಾಯ ಗ್ರಾಮದ ಕೊಂಬೆಟ್ಟಿ ಮಾರು ಎಂಬಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ.

ಕೃಷಿ ಕೂಲಿ ಕಾರ್ಮಿಕರಾಗಿ ಆಗಮಿಸಿದ್ದ ಜಾರ್ಖಂಡ್ ರಾಜ್ಯದ ಕುಟುಂಬದ ಬಾಲಕಿ ನೀಲಮ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಾರ್ಖಂಡ್‌ನ ಲಾತೆಹಾರ್ ಜಿಲ್ಲೆಯ ಜಲ್ತಾ ಪರ್ಸಾರಿ ಲೆಡ್‌ನ ನಿವಾಸಿಯಾಗಿರುವ ಸರ್ಜು ಬುಯ್ಯಾನ್ ಎಂಬವರು ತನ್ನ ಪತ್ನಿ, ಮಗಳೊಂದಿಗೆ ವಾರದ ಹಿಂದೆ ಕರಾಯದ ಕೊಂಬೆಟ್ಟಿ ಮಾರು ಎಂಬಲ್ಲಿ ಜಗದೀಶ್ ಸರಳಾಯ ಎಂಬವರ ತೋಟದ ಕೆಲಸಕ್ಕೆ ಆಗಮಿಸಿದ್ದರು.

ಭಾನುವಾರ ರಾತ್ರಿ 7.30ರ ಸುಮಾರಿಗೆ ತೋಟದ ಮಾಲೀಕರು ಒದಗಿಸಿದ ವಾಸ್ತವ್ಯದ ಕೋಣೆಯಲ್ಲಿ ನೀಲಮ್ ಮೊಬೈಲ್‌ನಲ್ಲಿ ಸಂಬಂಧಿಕಳೊಂದಿಗೆ ವಿಡಿಯೋ ಕರೆ ಮಾಡಿ ಮಾತನಾಡುತ್ತಿದ್ದಳು. ಇದಕ್ಕೆ ತಾಯಿ ಆಕ್ಷೇಪಿಸಿ, ಮೊಬೈಲ್ ಕಿತ್ತುಕೊಂಡಿದ್ದರು. ಇದರಿಂದ ಸಿಟ್ಟಾದ ಬಾಲಕಿ ತೋಟದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ತಂದೆ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Murder Case: ಬೆಳ್ತಂಗಡಿ ಬಳಿ ಮನೆಯ ಅಂಗಳದಲ್ಲೇ ನಿವೃತ್ತ ಶಿಕ್ಷಕನ ಭೀಕರ ಕೊಲೆ

Exit mobile version