Site icon Vistara News

Students end life : ಚೆನ್ನಾಗಿ ಓದಿ ಎಂದು ಹೆತ್ತವರು ಬುದ್ಧಿ ಹೇಳಿದ್ದಕ್ಕೆ ಪ್ರಾಣವನ್ನೇ ಕಳೆದುಕೊಂಡ ಇಬ್ಬರು ವಿದ್ಯಾರ್ಥಿನಿಯರು

two students suicide

ಕಲಬುರಗಿ/ರಾಯಚೂರು: ಚೆನ್ನಾಗಿ ಓದಿ ಎಂದು ಮನೆಯಲ್ಲಿ ಬುದ್ಧಿವಾದ ಹೇಳಿದ್ದನ್ನೇ ದೊಡ್ಡ ಸಂಗತಿ ಮಾಡಿಕೊಂಡು, ಮನಸ್ಸಿಗೆ ಹಚ್ಚಿಕೊಂಡು ಇಬ್ಬರು ವಿದ್ಯಾರ್ಥಿನಿಯರು ಪ್ರಾಣ (Two girls students end life) ಕಳೆದುಕೊಂಡಿದ್ದಾರೆ. ಒಂದು ಘಟನೆ ಕಲಬುರಗಿಯ ಸೇಡಂನ ಕೋಡ್ಲಾ ಗ್ರಾಮದಲ್ಲಿ ನಡೆದಿದ್ದರೆ, ಇನ್ನೊಂದು ಘಟನೆ ರಾಯಚೂರಿನ ದೇವದುರ್ಗದ ವಸತಿ ಶಾಲೆಯಲ್ಲಿ (Students End life) ನಡೆದಿದೆ.

ಕೆರೆಗೆ ಹಾರಿ ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ಘಟನೆ ಕಾವೇರಿ (17) ಎಂಬ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ. ಸರಿಯಾಗಿ ಓದು ಎಂದು ಪೋಷಕರು ಬೈಯ್ದಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.

ಸೇಡಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿಯು ಪ್ರಥಮ ವರ್ಷದಲ್ಲಿ ಓದುತ್ತಿದ್ದ ಕಾವೇರಿ ಕಲಿಕೆ ಕಡೆಗೆ ಅಷ್ಟಾಗಿ ಗಮನ ಕೊಡದೆ ಇದ್ದಾಗ ಮನೆಯವರು ಬುದ್ಧಿವಾದ ಹೇಳಿದ್ದರು. ದಿನಾಲೂ ಕಾಲೇಜಿಗೆ ಹೋಗಿ ಚೆನ್ನಾಗಿ ಓದು ಎಂದು ಪೋಷಕರು ಹೇಳಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡ ಆಕೆ ಈಗ ಸಾವಿಗೆ ಶರಣಾಗಿದ್ದಾಳೆ. ಗುರುವಾರ ರಾತ್ರಿ ಆಕೆ ಮನೆಯಿಂದ ಹೊರಗೆ ಹೋಗಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬೆಳಗ್ಗೆ ಆಕೆ ಕಾಣದೆ ಇದ್ದಾಗ ಹುಡುಕಾಡಿದಾಗ ಆಕೆ ಕೆರೆಗೆ ಹಾರಿದ್ದು ಕಂಡುಬಂದಿದೆ. ಯಾಕಾದರೂ ಮಗಳಿಗೆ ಹೇಳಲು ಹೋದವೋ ಎಂದು ಮನೆಯವರು ಈಗ ಕಣ್ಣೀರು ಹಾಕುತ್ತಿದ್ದಾರೆ. ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಆತ್ಮಹತ್ಯೆ

ರಾಯಚೂರಿನ ದೇವದುರ್ಗದ ವಸತಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಿ.ಆರ್.ಗುಂಡಾ ಗ್ರಾಮದ ವಿದ್ಯಾರ್ಥಿನಿ ಪವಿತ್ರ(15) ಆತ್ಮಹತ್ಯೆ ಮಾಡಿಕೊಂಡವಳು.

ಆಕೆಗೂ ಓದುವುದು ಇಷ್ಟವಿರಲಿಲ್ಲ ಎನ್ನಲಾಗಿದೆ. ಶಾಲೆಗೆಂದು ಹೋದವಳು ಶಾಲೆ ತಪ್ಪಿಸಿ ಮನೆಗೆ ಬರುತ್ತಿದ್ದಳು. ಇದರಿಂದ ಬೇಸರಗೊಂಡ ಮನೆಯವರು ಆಕೆಗೆ ಬುದ್ಧಿ ಹೇಳಿದ್ದರು. ಜತೆಗೆ ಗುರುವಾರ ಆಕೆಯನ್ನು ವಸತಿ ಶಾಲೆಗೆ ಬಿಟ್ಟು ಹೋಗಿದ್ದರು.

ಈ ನಡುವೆ ಆಕೆ ತರಗತಿ ಸಮಯದಲ್ಲೇ ಕೋಣೆಗೆ ಬಂದು ಫ್ಯಾನ್‌ಗೆ ವೇಲ್ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆಗೆ ಬೇರೆ ಏನಾದರೂ ಕಾರಣವಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಪೊಲೀಸರು ಆಕೆಯ ಪೂರ್ವಾಪರಗಳನ್ನು ವಿಚಾರಿಸುತ್ತಿದ್ದಾರೆ.

ಸ್ಥಳಕ್ಕೆ ಪೊಲೀಸರು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಣ್ಣ ಸಣ್ಣ ವಿಷಯಕ್ಕೆ ಮನಸ್ಸನ್ನು ನೋಯಿಸಿಕೊಂಡು ಹತಾಶ ಕೃತ್ಯಕ್ಕೆ ಇಳಿಯುವುದು ಮತ್ತು ಪೋಷಕರ ಮನಸ್ಸನ್ನು ನೋಯಿಸುವುದು ನಡೆಯುತ್ತಿದೆ. ಮಕ್ಕಳಲ್ಲಿ ಸಹನಾಶಕ್ತಿ, ಸಾಮಾಜಿಕ ನಡವಳಿಕೆಗಳ ಅರಿವಿನ ಕೊರತೆಯೇ ಈ ಘಟನೆಗಳಿಗೆ ಕಾರಣ ಎನ್ನಲಾಗಿದೆ.

Exit mobile version