ಕೊಡಗು/ಮಂಡ್ಯ: ಮಂಡ್ಯದ ವೈದ್ಯರೊಬ್ಬರು ಕಾರೊಂದರಲ್ಲಿ ಶವವಾಗಿ (Suspicious Death) ಪತ್ತೆಯಾಗಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಆನೆಕಾಡು ಬಳಿ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಪಾಂಡವಪುರದ ಶಿವಳ್ಳಿ ಗ್ರಾಮದ ಡಾ. ಸತೀಶ್ (47) ಮೃತ ದುರ್ದೈವಿ.
ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕೆಂಪು ಕಾರೊಂದರಲ್ಲಿ ಸತೀಶ್ ಮೃತದೇಹವು ಪತ್ತೆಯಾಗಿದೆ. ಡಾ ಸತೀಶ್ ಅವರು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕೊಣಸೂರು ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ವೈದ್ಯ ಸತೀಶ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಡ್ರೈವರ್ ಸೀಟ್‌ನಲ್ಲಿರುವ ಸತೀಶ್ ಅವರಿಗೇನಾದರೂ ಹೃದಯಾಘಾತ ಆಗಿದ್ಯಾ? ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದರಾ? ಎಂಬ ಎಲ್ಲ ಆಯಾಮದಲ್ಲೂ ತನಿಖೆಯನ್ನು ನಡೆಸುತ್ತಿದ್ದಾರೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ತನಿಖೆಯ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ಏನು ಎಂಬುದು ತಿಳಿದು ಬರಲಿದೆ.
ತಂಗಿ ಮಗನನ್ನೇ ಕೊಂದು ಹೂತು ಹಾಕಿದ ದೊಡ್ಡಮ್ಮ!
ಚಿಕ್ಕಬಳ್ಳಾಪುರ: 6 ವರ್ಷದ ಗಂಡು ಮಗುವನ್ನು ಆಕೆಯ ದೊಡ್ಡಮ್ಮಳೇ ಕೊಂದು ಹೂತು ಹಾಕಿದ (Murder Case) ಘಟನೆ ಚಿಕ್ಕಬಳ್ಳಾಪುರದ ಮುತಕದಹಳ್ಳಿ ಗ್ರಾಮದ ಮಾವಿನ ತೋಪಿನಲ್ಲಿ ನಡೆದಿದೆ.
ಅಂಬಿಕಾ ಎಂಬಾಕೆ ಕೊಲೆ ಪಾತಕಿಯಾಗಿದ್ದಾಳೆ. ಅಂಬಿಕಾಳ ಸಿಟ್ಟಿಗೆ ಮುಗ್ದ ಮಗುವೊಂದು ಪ್ರಾಣ ಬಿಟ್ಟಿದೆ. ಅಂಬಿಕಾ ಹಾಗೂ ಅನಿತಾ ಇಬ್ಬರು ಅಕ್ಕ ತಂಗಿಯರು. ತಂಗಿ ಅನಿತಾ ಮೇಲಿನ ಕೋಪಕ್ಕೆ ಆಕೆಯ ಮಗನನ್ನು ಕೊಲೆ ಮಾಡಿ ಹೂತು ಹಾಕಿದ್ದಾಳೆ.
ಅಂಬಿಕಾಳ ಅನೈತಿಕ ಸಂಬಂಧಗಳಿಗೆ ತಂಗಿ ಅನಿತಾ ಅಡ್ಡಿಯಾಗುತ್ತಿದ್ದಳು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಅಂಬಿಕಾ, ತಂಗಿ ಮೇಲಿನ ಕೋಪಕ್ಕೆ ಆಕೆ ಮಗನನ್ನು ಕೊಲೆ ಮಾಡಿದ್ದಾಳೆ. ಸ್ಥಳಕ್ಕೆ ಪೆರೆಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಕೇರಳದಲ್ಲಿ ಇಸ್ರೇಲ್ ಮಹಿಳೆ ಸಾವು; ಮಲಯಾಳಿ ಗಂಡನಿಂದಲೇ ಹತ್ಯೆ?
ತಿರುವನಂತಪುರಂ: ಕೇರಳದಲ್ಲಿ ಇಸ್ರೇಲ್‌ನ 36 ವರ್ಷದ ಮಹಿಳೆಯೊಬ್ಬರ (Israeli Woman) ಶವ ಮನೆಯಲ್ಲಿ ಪತ್ತೆಯಾಗಿದ್ದು, ಅವರ ಜತೆ ವಾಸವಿದ್ದ ಕೇರಳದ ವ್ಯಕ್ತಿಯೇ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೊಲ್ಲಂ ಜಿಲ್ಲೆಯ ಮುಕ್ತಥಲ ಗ್ರಾಮದಲ್ಲಿರುವ ಮಹಿಳೆಯ ಶವ ಪತ್ತೆಯಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಸ್ರೇಲ್ ಮೂಲದ ಮಹಿಳೆಯನ್ನು ಸ್ವಾತಾ ಅಲಿಯಾಸ್ ರಾಧಾ ಎಂಬುದಾಗಿ ಗುರುತಿಸಲಾಗಿದೆ. ಇವರ ಜತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ 70 ವರ್ಷದ ಕೃಷ್ಣ ಚಂದ್ರನ್ ಎಂಬಾತನೇ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಇಸ್ರೇಲ್‌ನಿಂದ ಭಾರತಕ್ಕೆ ಬಂದಿರುವ ಸ್ವಾತಾ ಹಾಗೂ ಕೃಷ್ಣ ಚಂದ್ರನ್ ಒಟ್ಟಿಗೆ ಇದ್ದರು. ಇವರಿಬ್ಬರೂ ಮದುವೆಯಾಗಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದಿವೆ.
ಸ್ವಾತ ಅವರ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಹತ್ಯೆ ಮಾಡಿದ ಕೃಷ್ಣ ಚಂದ್ರನ್ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಅಸ್ವಸ್ಥನಾಗಿರುವ ಕೃಷ್ಣ ಚಂದ್ರನ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೃಷ್ಣ ಚಂದ್ರನ್ ಯೋಗ ಶಿಕ್ಷಕನಾಗಿದ್ದ ಎಂದು ತಿಳಿದುಬಂದಿದೆ. ಸ್ವಾತಾ ಅವರು ಇಸ್ರೇಲ್‌ನಿಂದ ಉತ್ತರಾಖಂಡಕ್ಕೆ ಆಗಮಿಸಿ, ಅಲ್ಲಿ 15 ವರ್ಷ ನೆಲೆಸಿದ್ದರು. ಕಳೆದ ಒಂದು ವರ್ಷದಿಂದ ಅವರು ಕೇರಳದಲ್ಲಿ ನೆಲೆಸಿದ್ದರು ಎಂದು ಮೂಲಗಳು ತಿಳಿಸಿವೆ.
ಇಬ್ಬರೂ ಆತ್ಮಹತ್ಯೆಗೆ ಯತ್ನ?
ಸ್ವಾತಾ ಹಾಗೂ ಕೃಷ್ಣ ಚಂದ್ರನ್ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು ಎಂದು ತಿಳಿದುಬಂದಿದೆ. ಇದೇ ಕಾರಣಕ್ಕಾಗಿ ಮೊದಲು ಕೃಷ್ಣ ಚಂದ್ರನ್ ಸ್ವಾತಾ ಅವರ ಕತ್ತು ಸೀಳಿದ್ದಾನೆ. ಇದಾದ ಬಳಿಕ ತಾನೂ ಚಾಕು ಚುಚ್ಚಿಕೊಂಡಿದ್ದಾನೆ. ಇದಾದ ಬಳಿಕ ಇಬ್ಬರೂ ಗಾಯಗೊಂಡು ನೆಲದ ಮೇಲೆ ಬಿದ್ದಿದ್ದಾರೆ. ಇದೇ ವೇಳೆ ಇಬ್ಬರೂ ಬಿದ್ದಿದ್ದನ್ನು ಕಂಡ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇಸ್ರೇಲ್ ಮಹಿಳೆಯು ಹಲವು ವರ್ಷಗಳಿಂದ ಮಾನಸಿಕ ಒತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರು. ಕೃಷ್ಣ ಚಂದ್ರನ್ ಯೋಗ ತರಗತಿಗೆ ಹಾಜರಾದರೂ ಅವರು ಗುಣಮುಖರಾಗಿರಲಿಲ್ಲ. ಖಿನ್ನತೆಯಿಂದ ಕೊನೆಗೆ ಆತ್ಮಹತ್ಯೆಯ ಹಾದಿ ಹಿಡಿದಿರಬಹುದು ಎನ್ನಲಾಗಿದೆ. ಆದರೆ, ಕೃಷ್ಣ ಚಂದ್ರನ್ ಆತ್ಮಹತ್ಯೆಗೆ ಯತ್ನಿಸಿದ್ದೇಕೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.