ಚೆನ್ನೈ: ವಿಜ್ಞಾನ ಹಾಗೂ ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಮನುಷ್ಯ ಮಂಗಳನ ಅಂಗಳಕ್ಕೆ ಕಾಲಿಟ್ಟರೂ, ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಮುನ್ನುಡಿ ಬರೆಯುತ್ತಿದ್ದರೂ, ಮನಸ್ಸಿನಿಂದ ಮಾತ್ರ ಜಾತಿಯ ವಿಷಬೀಜ ತೊಲಗುತ್ತಿಲ್ಲ. ಮೇಲ್ಜಾತಿ, ಕೀಳುಜಾತಿ ಎಂಬ ತುಚ್ಚ ವಿಚಾರ ನಿರ್ಮೂಲನೆ ಆಗುತ್ತಿಲ್ಲ. ಅಕ್ಷರ ಕಲಿತರೂ ಮೇಲ್ಜಾತಿ ಎಂಬ ಕುತ್ಸಿತ ಮನಸ್ಸು ಎಚ್ಚೆತ್ತುಕೊಳ್ಳುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂದರೆ, ಮಗ ದಲಿತ ಯುವತಿಯನ್ನು ಮದುವೆಯಾದ ಎಂದು ತಮಿಳುನಾಡಿನಲ್ಲಿ 55 ವರ್ಷದ ವ್ಯಕ್ತಿಯೊಬ್ಬ ಮಗ ಹಾಗೂ ಜಗಳ ಬಿಡಿಸಲು ಬಂದ ತನ್ನ ತಾಯಿಯನ್ನೇ ಹತ್ಯೆ ಮಾಡಿದ್ದಾನೆ.
ಕೃಷ್ಣಗಿರಿ ಜಿಲ್ಲೆಯ ಉಥನಗಿರಿಯ ಬಳಿ ಮನೆಯ ಯಜಮಾನನು ಹೀನ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ಪಿ.ದಂಡಪಾಣಿ ಎಂದು ಗುರುತಿಸಲಾಗಿದೆ. 25 ವರ್ಷದ ಸುಭಾಷ್, 24 ವರ್ಷದ ದಲಿತ ಯುವತಿ ಅನುಷಾ ಎಂಬುವರನ್ನು ಪ್ರೀತಿಸುತ್ತಿದ್ದ. ಪ್ರೀತಿಗೆ ತಂದೆಯ ವಿರೋಧ ವ್ಯಕ್ತವಾದರೂ ಕಳೆದ ಮಾರ್ಚ್‌ನಲ್ಲಿ ಇಬ್ಬರೂ ಮದುವೆಯಾಗಿ, ತಿರುಪತ್ತೂರ್‌ನಲ್ಲಿ ಮನೆ ಮಾಡಿಕೊಂಡು ವಾಸವಿದ್ದರು.
ಮದುವೆಯಾಗಿ ಹೆಂಡತಿ ಜತೆ ಚೆನ್ನಾಗಿದ್ದರೂ ತಂದೆ-ತಾಯಿಯಿಂದ ದೂರವಾದ ಬೇಸರ ಸುಭಾಷ್‌ಗೆ ಕಾಡುತ್ತಿತ್ತು. ಅದಕ್ಕಾಗಿ, ತನ್ನ ಊರಾದ ಅರುಣಪತಿಗೆ ಕಳೆದ ವಾರ ಸುಭಾಷ್ ಹೆಂಡತಿಯನ್ನು ಕರೆದುಕೊಂಡು ಬಂದಿದ್ದಾನೆ. ಮನೆಗೆ ತೆರಳಿ, ತಾಯಿ ಹಾಗೂ ಅಜ್ಜಿಯ ಮನವೊಲಿಸಿದ್ದಾನೆ. ಇದೇ ವೇಳೆ ದಂಡಪಾಣಿಯು ಮನೆಗೆ ಆಗಮಿಸಿದ್ದಾನೆ. ಮನೆಗೆ ಮಗ ಆಗಮಿಸಿದ್ದನ್ನು ಕಂಡು ಕುಪಿತಗೊಂಡಿದ್ದಾನೆ.
ದಲಿತ ಯುವತಿಯನ್ನು ಮದುವೆಯಾಗಿ, ಮನೆಗೆ ಆಕೆಯನ್ನು ಕರೆದುಕೊಂಡು ಬಂದಿದ್ದನ್ನು ಸಹಿಸದ ದಂಡಪಾಣಿಯು ಕುಡುಗೋಲು ಹಿಡಿದು ಮಗನ ಮೇಲೆಯೇ ಎರಗಿದ್ದಾನೆ. ಇದೇ ವೇಳೆ, ಸುಭಾಷನ ಅಜ್ಜಿಯು ಜೋರಾಗಿ ಕೂಗಿ, ಮೊಮ್ಮಗನನ್ನು ರಕ್ಷಿಸಲು ಮುಂದಾಗಿದ್ದಾರೆ. ತನ್ನ ತಾಯಿ ಎಂಬುದನ್ನೂ ನೋಡದ ದಂಡಪಾಣಿಯು ಮಗ ಹಾಗೂ ತಾಯಿಯನ್ನು ಹತ್ಯೆ ಮಾಡಿದ್ದಾನೆ. ಇನ್ನೇನು ಸೊಸೆ ಅನುಷಾ ಮೇಲೆಯೂ ದಾಳಿ ನಡೆಸಬೇಕು ಎನ್ನುವಷ್ಟರಲ್ಲಿ ಆಕೆ ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಘಟನೆ ನಡೆದ ಕೂಡಲೇ ಮನೆಗೆ ಆಗಮಿಸಿದ ಗ್ರಾಮಸ್ಥರು, ಗಂಭೀರವಾಗಿ ಗಾಯಗೊಂಡಿದ್ದ ಸುಭಾಷ್ ಹಾಗೂ ಆತನ ಅಜ್ಜಿಯನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ, ಅಷ್ಟೊತ್ತಿಗಾಗಲೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದರು ಎಂದು ತಿಳಿದುಬಂದಿದೆ. ಹೀನ ಕೃತ್ಯ ಎಸಗಿದ ದಂಡಪಾಣಿ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ.