Site icon Vistara News

Techie Missing: ಕಾಣೆಯಾದ ಟೆಕ್ಕಿ ಪತ್ತೆ, ಪ್ರಕರಣಕ್ಕೆ ಟ್ವಿಸ್ಟ್‌; ಜೈಲಿಗಾದ್ರೂ ಹಾಕಿ, ಆದ್ರೆ ಹೆಂಡತಿ ಹತ್ರ ಹೋಗಲ್ಲ ಎಂದು ರೋದನ!

techie missing

ಬೆಂಗಳೂರು: ಬೆಂಗಳೂರಲ್ಲಿ ಕಂಪ್ಯೂಟರ್‌ ಇಂಜಿನಿಯರ್‌ (Computer Engineer) ಒಬ್ಬಾತ ಕಾಣೆಯಾದ (Techie Missing) ಪ್ರಕರಣಕ್ಕೆ‌ ಟ್ವಿಸ್ಟ್ ದೊರೆತಿದೆ. ಕಾಣೆಯಾದ ವಿಪಿನ್‌ ಎಂಬ ಟೆಕ್ಕಿಯನ್ನು ನೋಯ್ಡಾದಲ್ಲಿ (Noida) ಪೊಲೀಸರು (Bangalore police) ಪತ್ತೆ ಹಚ್ಚಿದ್ದಾರೆ. ಆದರೆ ಆತ ಮಾತ್ರ ʼನನ್ನನ್ನು ಜೈಲಿಗಾದರೂ ಹಾಕಿ ಸಾರ್‌, ಆದರೆ ಹೆಂಡತಿ ಹತ್ರ ಮತ್ತೆ ಕಳಿಸಬೇಡಿʼ ಎಂದು ಅಲವತ್ತುಕೊಂಡಿದ್ದಾನೆ.

ಒಂದು ವಾರದಿಂದ ಕಾಣೆಯಾಗಿದ್ದ ಟೆಕ್ಕಿ ವಿಪಿನ್ ಬೆನ್ನು ಬಿದ್ದ ಬೆಂಗಳೂರು ಪೊಲೀಸರು, ಆತನನ್ನು ನೋಯ್ಡಾದಲ್ಲಿ ಪತ್ತೆ ಹಚ್ಚಿದ್ದಾರೆ. ನೊಯ್ಡಾದಿಂದ ಬೆಂಗಳೂರಿಗೆ ಕೊಡಿಗೆಹಳ್ಳಿ ಪೊಲೀಸರು ಕರೆತಂದಿದ್ದಾರೆ. ವಿಚಾರಣೆ ವೇಳೆ, ತಾನೇ ಸ್ವಇಚ್ಛೆಯಿಂದ ಮನೆ ಬಿಟ್ಟು ಹೋಗಿರುವುದಾಗಿ ಹೇಳಿಕೆ ನೀಡಿದ್ದಾನೆ.

ಪತಿ ಹಾಗೂ ಪತ್ನಿ ನಡುವೆ ವಯಸ್ಸಿನ ಅಂತರವಿತ್ತು. ಟೆಕ್ಕಿ ವಿಪಿನ್‌ ತನಗಿಂತ ಎಂಟು ವರ್ಷ ದೊಡ್ಡವಳನ್ನು ಮದುವೆಯಾಗಿದ್ದ. ಪತ್ನಿಗೆ 42 ವರ್ಷ, ವಿಪಿನ್‌ಗೆ 34 ವರ್ಷ. ವಿಪಿನ್‌ನೊಂದಿಗೆ ಎರಡನೇ ಮದುವೆಯಾಗಿದ್ದ ಪತ್ನಿ, ವಿಪಿನ್‌ಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಳೆನ್ನಲಾಗಿದೆ. ವಿಪಿನ್‌ನನ್ನು ತುಂಬಾ ಕಂಟ್ರೋಲ್ ಮಾಡುತ್ತಿದ್ದ ಈಕೆ, ಮನೆಯಲ್ಲೆಲ್ಲ ಸಿಸಿಟಿವಿ ಹಾಕಿಸಿ ಗಂಡನ ಮೇಲೆ ನಿಗಾ ಇಟ್ಟಿದ್ದಳು.

ಇದರಿಂದಾಗಿ ಸಾಕಷ್ಟು ನೊಂದಿದ್ದ ವಿಪಿನ್, ಆಕೆಯ ಸಹವಾಸವೇ ಬೇಡ ಎಂದು ಮನೆ ಬಿಟ್ಟು ಹೋಗಿದ್ದ. ಪತಿ ಕಾಣೆಯಾದ ಬಗ್ಗೆ ಎಕ್ಸ್‌ ಪೋಸ್ಟ್‌ನಲ್ಲಿ ಗೋಳು ತೋಡಿಕೊಂಡಿದ್ದ ಮಹಿಳೆ, ಪ್ರಧಾನ ಮಂತ್ರಿಗೂ ಎಕ್ಸ್‌ನಲ್ಲಿ ಈ ಪೋಸ್ಟನ್ನು ಟ್ಯಾಗ್ ಮಾಡಿದ್ದಳು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಇದೀಗ, ನಾನು ಮನೆಗೆ ಹೋಗುವುದಿಲ್ಲ ಎಂದು ಟೆಕ್ಕಿ ಪಟ್ಟು ಹಿಡಿದಿದ್ದಾನೆ.

ನನ್ನನ್ನ ಜೈಲಿಗೆ ಬೇಕಿದ್ದರೂ ಹಾಕಿ; ಆದರೆ ನಾನು ಮತ್ತೆ ಮನೆಗೆ ಹೋಗಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ. ಈ ಗಂಡ- ಹೆಂಡತಿ ಬಿಕ್ಕಟ್ಟನ್ನು ಹೇಗೆ ಪರಿಹರಿಸುವುದು ಎಂದು ಅರ್ಥವಾಗದೆ ಕೊಡಿಗೇಹಳ್ಳಿ ಪೊಲೀಸರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

ಗೋವಾಗೆ ಕಳ್ಳಸಾಗಣೆ ಮಾಡುತ್ತಿದ್ದ ಹೆಣ್ಣು ಶಿಶು ರಕ್ಷಣೆ ವೇಳೆ ಅಧಿಕಾರಿಗಳ ಮೇಲೆ‌ ಹಲ್ಲೆ

ಗದಗ: ಗೋವಾ ರಾಜ್ಯಕ್ಕೆ ಕಳ್ಳಸಾಗಣೆ ಮಾಡಿ ಮಾರಾಟ ಮಾಡಲು ಮುಂದಾದ ಹೆಣ್ಣು ಶಿಶುವನ್ನು ರಕ್ಷಿಸಲು ಹೋದ ಅಧಿಕಾರಿಗಳ ಮೇಲೆ‌ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಶಿಂಗಟರಾಯನಕೇರಿ ತಾಂಡಾದಲ್ಲಿ ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಕ್ರಮ ಸಂಬಂಧದಿಂದ ಶಿಶು ಜನಿಸಿದ್ದರಿಂದ ಇವರನ್ನು ಗ್ರಾಮದಿಂದ ಹೊರಗೆ ಹಾಕಲಾಗಿತ್ತು. ಹೆಣ್ಣು ಶಿಶುವಿನೊಂದಿಗೆ ಗ್ರಾಮದ ನಿರ್ಜನ‌ ಪ್ರದೇಶದಲ್ಲಿ ಶಿಶುವಿನ ತಾಯಿ ಹಾಗೂ ಕುಟುಂಬ ವಾಸವಿದ್ದರು. ವಿಷಯ ತಿಳಿದ ಶಿಶು ಅಭಿವೃದ್ಧಿ ಇಲಾಖೆ ಮಹಿಳಾ ಮೇಲ್ವಿಚಾರಕಿ ರುದ್ರಮ್ಮ, ಸಮಾಜ ಕಾರ್ಯಕರ್ತೆ ಲಲಿತಾ ಕುಂಬಾರ ಹಾಗೂ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪ್ರವೀಣಕುಮಾರ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಶಿಶು ರಕ್ಷಣೆ ಮಾಡಿ ಕಾರ್‌ನಲ್ಲಿ ಕರೆದುಕೊಂಡು ಬರುವಾಗ ಹಲ್ಲೆ ನಡೆಸಲಾಗಿದೆ.

40ಕ್ಕೂ ‌ಹೆಚ್ಚು ಜನರ ಗುಂಪು ಅಧಿಕಾರಿಗಳಿದ್ದ ಕಾರು ಅಡ್ಡಗಟ್ಟಿ ಗಲಾಟೆ ದಾಂಧಲೆ ನಡೆಸಿದೆ. ಮಗುವನ್ನು ಹೇಗೆ ಒಯ್ಯುತ್ತೀರಿ‌ ಎಂದು ಅಧಿಕಾರಿಗಳಿಂದ ಶಿಶುವನ್ನು ಕಸಿದುಕೊಂಡು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಸಿಬ್ಬಂದಿ ಪ್ರವೀಣಕುಮಾರ ಮೇಲೆ ಹಲ್ಲೆ ನಡೆಸಿ, ಮೊಬೈಲ್ ಕಸಿದು ನೂಕಿದ್ದಾರೆ. ಈ ವೇಳೆ ಪ್ರವೀಣ ಕೊರಳಲ್ಲಿದ್ದ 11 ಗ್ರಾಂ ಬಂಗಾರದ ಚೈನ್ ಹರಿದು ಬಿಸಾಡಿದ್ದಾರೆ.

ಅಧಿಕಾರಿಗಳ ಜೊತೆಗೆ ಬಂದಿದ್ದ ಇತರೆ ಕಾರ್ಯಕರ್ತರ ಕಾರ್‌ನ ಚಕ್ರದ ಗಾಳಿ ತೆಗೆದು ಅಟ್ಟಹಾಸ ಮಾಡಿದ್ದಾರೆ. ಅಧಿಕಾರಿಗಳ ಭದ್ರತೆಗೆ ಆಗಮಿಸಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಕೂಡ ಹಲ್ಲೆಕೋರರ ಅಟ್ಟಹಾಸಕ್ಕೆ ಅಸಹಾಯಕರಾಗಿದ್ದಾರೆ. ಸ್ಥಳದಿಂದ ಬಚಾವ್ ಆಗಿ ತಪ್ಪಿಸಿಕೊಂಡು‌ ಬಂದ ಅಧಿಕಾರಿಗಳು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಿಸಿದ್ದಾರೆ.

ಇದನ್ನೂ ಓದಿ: Shocking Incident : ಮಹಿಳೆಯನ್ನು ನಗ್ನಗೊಳಿಸಿ ಶಸ್ತ್ರ ಚಿಕಿತ್ಸೆ ನಡೆಸಿದ ವಾರ್ಡ್​ ಬಾಯ್​! ವಿಡಿಯೊ ವೈರಲ್​

Exit mobile version