ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ನೆರವು ನೀಡಿದ ಪ್ರಕರಣದಲ್ಲಿ ಅಪರಾಧಿಯಾಗಿರುವ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ (Yasin malik) ದೆಹಲಿಯ ಎನ್‌ಐಎ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಧೀಶ ಪ್ರವೀಣ್ ಸಿಂಹ ಬುಧವಾರ ಸಂಜೆ ಶಿಕ್ಷೆ ಪ್ರಮಾಣ ಘೋಷಿಸಿದರು. ಹಲವು ಪ್ರಕರಣಗಳಲ್ಲಿ ಬಂಧನದಲ್ಲಿರುವ ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ ಮುಖಂಡ ಯಾಸಿನ್ ದೋಷಿಯೆಂದು ಮೇ 19ರಂದು ದೆಹಲಿ ಕೋರ್ಟ್ ತೀರ್ಪು ನೀಡಿತ್ತು.
ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿಯಲ್ಲಿ ವಿವಿಧ ಪ್ರಕರಣಗಳನ್ನು ದಾಖಲಿಸಿ ವಿಚಾರಣೆ ನಡೆಸಲಾಗಿದೆ. ಯಾಸಿನ್‌ಗೆ ಮರಣದಂಡನೆ ವಿಧಿಸುವಂತೆ ನ್ಯಾಯಾಧೀಶರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೋರಿಕೆ ಸಲ್ಲಿಸಿತ್ತು.
ತೀರ್ಪು ಹಿನ್ನೆಲೆಯಲ್ಲಿ ಪಟಿಯಾಲ ಕೋರ್ಟ್‌ನ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಅಲ್ಲದೆ ಯಾಸಿನ್ ಮಲಿಕ್ ನನ್ನು ಬಿಗಿ ಭದ್ರತೆಯಲ್ಲಿ ಲಾಕಪ್‌ಗೆ ಸ್ಥಳಾಂತರಿಸಲಾಗಿದೆ. ಇನ್ನೊಂದೆಡೆ ಬುಧವಾರ (ಇಂದು) ತೀರ್ಪು ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ಶ್ರೀನಗರದ ಹಲವೆಡೆ ಬಂದ್ ವಾತಾವರಣ ಸೃಷ್ಟಿಯಾಗಿತ್ತು. ಹಾಗಿದ್ದರೂ ಭದ್ರತಾ ಪಡೆಗಳ ಮೇಲೆ ಪ್ರತಿಭಟನಾಕಾರರು ಕಲ್ಲುಗಳನ್ನು ತೂರಿದ್ದು, ಪರಿಸ್ಥಿತಿ ನಿಭಾಯಿಸಲು ಭದ್ರತಾ ಸಿಬ್ಬಂದಿ ಟಿಯರ್ ಗ್ಯಾಸ್‌ಗಳನ್ನು ಪ್ರಯೋಗಿಸಿದರು.
ಜೀವಂತ ಇರುವವರೆಗೂ ಜೈಲು
ಯಾಸಿನ್ ಮಲಿಕ್‌ಗೆ ಯುಎಪಿಎ ಮತ್ತು ಐಪಿಸಿ ಕಾಯಿದೆಯ ನಾನಾ ಸೆಕ್ಷನ್‌ಗಳ ಅಡಿ ಎರಡು ಜೀವಾವಧಿ, ಮೂರು ಪ್ರಕರಣಗಳಲ್ಲಿ ತಲಾ ಹತ್ತು ವರ್ಷಗಳು ಹಾಗೂ ಒಂದು ಪ್ರಕರಣದಲ್ಲಿ ಐದು ವರ್ಷ ಶಿಕ್ಷೆ ವಿಧಿಸಲಾಗಿದೆ. ಜತೆಗೆ 10 ಲಕ್ಷದ 45 ಸಾವಿರ ರೂ. ದಂಡ ವಿಧಿಸಲಾಗಿದೆ. ಇಷ್ಟೆಲ್ಲ ಶಿಕ್ಷೆ ಇದ್ದರೂ ಎಲ್ಲವೂ ಜತೆಜತೆಯಾಗಿ ಅನುಭವಿಸಲು ಅವಕಾಶ ನೀಡಲಾಗಿದೆ. ಆದರೆ, ಯಾಸಿನ್ ಮಲಿಕ್ ಜೀವಂತ ಇರುವವರೆಗೆ ಜೈಲಿಂದ ಹೊರಬರುವಂತಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್; ಪಾಕಿಸ್ತಾನದ ಮೂವರು ಉಗ್ರರ ಹತ್ಯೆ