ಲಖನೌ: ರಾಜಸ್ಥಾನದ ಉದಯಪುರದಲ್ಲಿ ಹಾಡಹಗಲೇ ಕನ್ಹಯ್ಯ ಲಾಲ್ ಅವರನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡುವೆಯೇ ಇದೀಗ ಲಖನೌನ ಮಹಿಳೆಯೊಬ್ಬರಿಗೆ ಇದೇ ರೀತಿ ಅನಾಮಧೇಯ ಕೊಲೆ ಬೆದರಿಕೆ ಪತ್ರ ಬಂದಿದೆ. ೨೦೧೮ರಲ್ಲಿ ಕೊಲೆಯಾದ ಹಿಂದೂ ಸಮಾಜ ಪಾರ್ಟಿಯ ಮುಖ್ಯಸ್ಥ ಕಮಲೇಶ್ ತಿವಾರಿ ಅವರ ಪತ್ನಿ ಕಿರಣ್ ತಿವಾರಿ ಅವರಿಗೆ ಈ ಪತ್ರ ಬರೆಯಲಾಗಿದ್ದು, ಅದರಲ್ಲಿ ಕೊಲೆ ಮಾಡುವ ಬೆದರಿಕೆ ಹಾಕಲಾಗಿದೆ.
ಲಖನೌನಲ್ಲಿರುವ ಅವರ ಮನೆಗೆ ಜೂನ್ ೨೨ರಂದು ಉರ್ದುವಿನಲ್ಲಿ ಬರೆದ ಈ ಪತ್ರ ತಲುಪಿದೆ. ಬಿಳಿ ಎನ್ವಲಪ್‌ನಲ್ಲಿರುವ ಈ ಪತ್ರದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಯಾರಿದು ಕಮಲೇಶ್ ತಿವಾರಿ?
೨೦೧೮ರ ಅಕ್ಟೋಬರ್ ೧೮ರಂದು ಲಖನೌನಲ್ಲಿ ಹಿಂದೂ ಸಮಾಜ ಪಾರ್ಟಿ ಎಂಬ ಸಣ್ಣ ಸಂಘಟನೆಯೊಂದರ ಅಧ್ಯಕ್ಷರಾಗಿದ್ದ ಕಮಲೇಶ್ ತಿವಾರಿ ಅವರನ್ನು ಕತ್ತು ಸೀಳಿ, ಗುಂಡಿಟ್ಟು ಸಾಯಿಸಲಾಗಿತ್ತು. ದುಷ್ಕರ್ಮಿಗಳು ತಾವು ಪಕ್ಷ ಸೇರುವ ಬಯಕೆ ಹೊಂದಿದ್ದೇವೆ, ಮಾತನಾಡಬೇಕು ಎಂದು ಹೇಳಿ ಕಚೇರಿಗೆ ಬಂದಿದ್ದರು.
ಈ ಕೊಲೆ ಯಾಕೆ ನಡೆಯಿತು ಎನ್ನುವ ಬಗ್ಗೆ ಪೊಲೀಸರು ಬಹಳ ತಲೆ ಕೆಡಿಸಿಕೊಂಡಿದ್ದರು. ಕೊನೆಗೆ ಗೊತ್ತಾಗಿದ್ದೇನೆಂದರೆ, ತಿವಾರಿ ಅವರು ೨೦೧೫ರಲ್ಲಿ ನೀಡಿದ ಒಂದು ಹೇಳಿಕೆಯೇ ಈ ಕೊಲೆಗೆ ಕಾರಣ ಎಂದು.
ಕಮಲೇಶ್ ತಿವಾರಿ ಅವರು ಆಗ ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯೊಂದನ್ನು ನೀಡಿದ್ದರು. ಆಗ ಅದು ದೊಡ್ಡ ಸುದ್ದಿಯಾಗಿ ರಾಜ್ಯದ ಹಲವು ಭಾಗಗಳಲ್ಲಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಕೆಲವು ಸಂಘಟನೆಗಳು ಕಮಲೇಶ್ ತಿವಾರಿ ಅವರ ತಲೆ ತೆಗೆದವರಿಗೆ ಬಹುಮಾನ ನೀಡಲಾಗುವುದು ಎಂದು ಕೂಡಾ ಪ್ರಕಟಿಸಿದ್ದವು. ಉತ್ತರ ಪ್ರದೇಶದ ಮುಜಫ್ಫರ್ ನಗರದಲ್ಲಿ ಮತ್ತು ರಾಜಸ್ಥಾನದ ಟೋಂಕ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಕಮಲೇಶ್ ತಿವಾರಿ ಅವರ ತಲೆಯನ್ನು ಕಡಿಯಬೇಕು ಎಂಬ ಬೇಡಿಕೆ ಇಡಲಾಗಿತ್ತು. ಇದರಂತೆ ದುಷ್ಕರ್ಮಿಗಳು ಕತ್ತು ಸೀಳಿ, ಗುಂಡಿಟ್ಟು ಸಾಯಿಸಿದ್ದರು.
ಈಗ ಪತ್ನಿಗೆ ಕಿರಣ್ ತಿವಾರಿಗೆ ಬೆದರಿಕೆ
೨೦೧೫ರ ಘಟನೆಗೆ ೨೦೧೮ರಲ್ಲಿ ಪ್ರತೀಕಾರ ತೀರಿಸಿಕೊಂಡ ದುಷ್ಟರು ಈಗ ನಾಲ್ಕು ವರ್ಷ ಕಳೆದರೂ ಆ ಘಟನೆಯನ್ನು ಮರೆತಿಲ್ಲ. ಇದೀಗ ಅವರ ಪತ್ನಿಯನ್ನು ಟಾರ್ಗೆಟ್ ಮಾಡಿರುವುದು ಆತಂಕ ತಂದಿದೆ. ಪೊಲೀಸರು ಈಗ ಕಿರಣ್ ತಿವಾರಿ ಅವರಿಗೆ ಬಿಗಿ ಭದ್ರತೆ ನೀಡಬೇಕು ಎಂಬ ಬೇಡಿಕೆ ಕೇಳಿಬಂದಿದೆ.
ಸಾಲು ಸಾಲು ಹತ್ಯೆಗಳು
ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ನೀಡಿದ ಹೇಳಿಕೆಗೆ ಪ್ರತಿಯಾಗಿ ದೇಶದಲ್ಲಿ ಹಲವೆಡೆ ಹಿಂದೂಗಳ ಕೊಲೆ ಆಗಿರುವುದು ಈಗ ನಿಧಾನಕ್ಕೆ ಬೆಳಕಿಗೆ ಬರಲಾರಂಭಿಸಿದೆ. ಉದಯಪುರ ಹತ್ಯೆಯ ಬಳಿಕ ಅದೇ ಮಾದರಿಯಲ್ಲಿ ನಡೆದ ಇನ್ನೆರಡು ಹತ್ಯೆಗಳಾದ ಮಹಾರಾಷ್ಟ್ರದ ಅಮರಾವತಿ ಮತ್ತು ಗುಜರಾತ್‌ನ ಇನ್ನೊಂದು ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ.
ಇದನ್ನೂ ಓದಿ| ಅಮರಾವತಿಯ ಕೆಮಿಸ್ಟ್ ಮರ್ಡರ್ ಹಿಂದೆಯೂ ನೂಪುರ್ ಹೇಳಿಕೆ ದ್ವೇಷ? ಎನ್‌ಐಎ ತನಿಖೆಗೆ ಗ್ರೀನ್ ಸಿಗ್ನಲ್