ಶ್ರೀನಗರ: ಜೂನ್ ೩೦ರಂದು ಆರಂಭಗೊಂಡಿರುವ ಪ್ರಸಿದ್ಧ ಅಮರನಾಥ ಯಾತ್ರೆಯ ಮೇಲೆ ದಾಳಿಗೆ ಸ್ಕೆಚ್ ಹಾಕಿದ್ದ ಇಬ್ಬರು ಮೋಸ್ಟ್ ವಾಂಟೆಡ್ ಉಗ್ರರನ್ನು ಭದ್ರತಾ ಪಡೆಗಳ ಸಿಬ್ಬಂದಿ ಸಾಹಸಿಕ ಕಾರ್ಯಾಚರಣೆಯಲ್ಲಿ ಭಾನುವಾರ ಬಂಧಿಸಿದ್ದಾರೆ. ಜಮ್ಮು ವಲಯದ ರಿಯಾಸಿ ಜಿಲ್ಲೆಯಲ್ಲಿ ನಡೆದ ಈ ಕಾರ್ಯಾಚರಣೆಗೆ ನಾಗರಿಕರ ಬೆಂಬಲ ದೊಡ್ಡ ಮಟ್ಟದಲ್ಲಿತ್ತು. ಹೀಗಾಗಿ ಭದ್ರತಾ ಪಡೆಗಳು ಮಿಂಚಿನ ದಾಳಿ ನಡೆಸಿ ಅಮರ ಯಾತ್ರಿಕರ ಮೇಲೆ ನಡೆಯಬಹುದಾಗಿದ್ದ ಬಹುದೊಡ್ಡ ದಾಳಿಯನ್ನು ವಿಫಲಗೊಳಿಸಿದರು.
ರಜೌರಿ ಮೂಲದ ತಾಲಿಬ್ ಹುಸೇನ್ ಮತ್ತು ಪುಲ್ವಾಮಾದ ಫೈಸಲ್ ಮೊಹಮ್ಮದ್ ದಾರ್ ಬಂಧಿತರು. ಇವರಿಬ್ಬರೂ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರೆ ತಯ್ಬಾ ಸಂಘಟನೆಗೆ ಸೇರಿದವರಾಗಿದ್ದು, ರಜೌರಿ ಮತ್ತು ದಕ್ಷಿಣ ಕಾಶ್ಮೀರದಲ್ಲಿ ನಡೆದ ಹಲವು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆಂಬ ಮಾಹಿತಿಯನ್ನು ಕಲೆ ಹಾಕಲಾಗಿದೆ. ಬಂಧಿತರಿಂದ ಎರಡು ಎಎಲ್ ರೈಫಲ್‌ಗಳು, ಏಳು ಗ್ರೆನೇಡುಗಳು, ಒಂದು ಪಿಸ್ತೂಲು ಮತ್ತು ದೊಡ್ಡ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಗ್ರರು ಯಾವುದೋ ದುಷ್ಕೃತ್ಯಕ್ಕೆ ಸಂಚು ನಡೆಸುತ್ತಿರುವ ವಿಷಯ ಭದ್ರತಾ ಪಡೆಗಳಿಗೆ ಕೆಲವು ದಿನಗಳ ಹಿಂದೆಯೇ ಗೊತ್ತಿತ್ತು. ಹೀಗಾಗಿ ಅವರು ತೀವ್ರ ಬೇಟೆ ಶುರು ಮಾಡಿದ್ದರು. ಭದ್ರತಾ ಪಡೆಗಳು ಬೆನ್ನು ಬಿದ್ದಿರುವುದನ್ನು ಕಂಡ ದುಷ್ಟರು ಅಲ್ಲಿಲ್ಲಿ ತಪ್ಪಿಸಿಕೊಂಡು ಕೊನೆಗೆ ರಿಯಾಸಿ ಜಿಲ್ಲೆಯ ಟಕ್ಸನ್ ಧಾಕ್ ಪ್ರದೇಶದಲ್ಲಿ ಆಶ್ರಯ ಪಡೆದಿದ್ದರು. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು ಪೊಲೀಸರಿಗೆ ನೆರವಾಯಿತು.
ಊರಿನ ನಾಗರಿಕರೇ ಈ ಇಬ್ಬರನ್ನು ಹಿಡಿದು ಹಾಕಿ ಪೊಲೀಸ್ ಮತ್ತು ಸೇನೆಗೆ ಕರೆ ಮಾಡಿದರು. ಕೂಡಲೇ ಧಾವಿಸಿ ಅವರನ್ನು ಬಂಧಿಸಲಾಯಿತು ಎಂದು ಜಮ್ಮು ಮತ್ತು ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಕೇಶ್ ಸಿಂಗ್ ತಿಳಿಸಿದ್ದಾರೆ.
ರಜೌರಿಯಲ್ಲಿ ಸ್ಫೋಟ ನಡೆಸಿದ್ದ
ಬಂಧಿತರಲ್ಲಿ ಒಬ್ಬನಾಗಿರುವ ತಾಲಿಬ್ ಹುಸೇನ್ ಈ ವರ್ಷದ ಆರಂಭದಲ್ಲಿ ರಜೌರಿಯಲ್ಲಿ ಅತ್ಯಾಧುನಿಕ ಸ್ಫೋಟಕ ಬಳಸಿ ಸ್ಫೋಟ ನಡೆಸಿದ್ದ. ಕೆಲವು ಕಡೆ ಗ್ರನೇಡ್ ಸ್ಪೋಟವನ್ನೂ ನಡೆಸಿದ್ದ ಈತನ ದಾಳಿಯಲ್ಲಿ ಕೆಲವು ನಾಗರಿಕರೂ ಪ್ರಾಣ ಕಳೆದುಕೊಂಡಿದ್ದರು. ಈತ ಅಮರನಾಥ ಯಾತ್ರೆ ಮೇಲೆ ದಾಳಿ ನಡೆಸುವ ಪ್ಲ್ಯಾನ್‌ನ ಮಾಸ್ಟರ್ ಮೈಂಡ್ ಎಂದು ತಿಳಿದುಬಂದಿದೆ. ಹುಸೇನ್ ಪಾಕಿಸ್ತಾನ ಮೂಲದ ಲಷ್ಕರೆ ತಯ್ಬಾದ ಕಮಾಂಡರ್ ಖಾಸಿಂನ ಜತೆ ಸಂಪರ್ಕ ಹೊಂದಿದ್ದಾನೆ. ಇಬ್ಬರೂ ಉಗ್ರರು ಇನ್ನೊಬ್ಬ ಲಷ್ಕರೆ ಹ್ಯಾಂಡ್ಲರ್ ಸಲ್ಮಾನ್‌ನ ಇಶಾರೆಯಂತೆ ಕೆಲಸ ಮಾಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐ ಲವ್ ನಮೋ ಎಂದಿದ್ದ ಉಗ್ರ!
ಈ ನಡುವೆ ಉಗ್ರ ತಾಲಿಬ್ ತಾನು ಮೋದಿ ಅಭಿಮಾನಿ ಎಂದ ಹೇಳಿಕೊಂಡು ತಿರುಗಾಡುತ್ತಿದ್ದ ಎಂದು ಹೇಳಲಾಗಿದೆ. ತಾಲಿಬ್ ಒಂದು ನ್ಯೂಸ್ ಪೋರ್ಟಲ್ ನಡೆಸುತ್ತಿದ್ದು, ಅದರಲ್ಲಿ ತಾನು ಬಿಜೆಪಿ ನಾಯಕರೊಂದಿಗೆ ಇರುವ ಫೋಟೋ ಮತ್ತು ವಿಡಿಯೊಗಳನ್ನು ಹಾಕಿದ್ದಾನೆ. ಅಷ್ಟೇ ಅಲ್ಲ, ಅವನ ಪ್ರೊಫೈಲ್‌ನಲ್ಲಿ ೨೦೧೮ರಿಂದಲೇ I LOVE NAMO ಎಂದು ಬರೆಯಲಾಗಿದೆ. ಇದು ಬಿಜೆಪಿಯೊಳಗೆ ನುಸುಳಿಕೊಂಡು ಬಿಜೆಪಿ ನಾಯಕರ ಮೇಲೆ ದಾಳಿ ನಡೆಸಲು ಮಾಡಿರುವ ಸಂಚು ಇರಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ರೈನಾ ಹೇಳಿದ್ದಾರೆ.
ಪಾಕ್‌ನಿಂದ ಡ್ರೋನಲ್ಲಿ ಬಂತು ಶಸ್ತ್ರಾಸ್ತ್ರ!
ತಾಲಿಬ್ ಹುಸೇನ್ ಗೆ ಇಷ್ಟು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಬಂದಿದ್ದು ಪಾಕಿಸ್ತಾನದಿಂದ ಎಂದು ನಂಬಲಾಗಿದೆ. ಅತ್ಯಾಧುನಿಕ ಸ್ಫೋಟಕಗಳು, ಶಸ್ತ್ರಾಸ್ತ್ರಗಳು, ಮ್ಯಾಗ್ನೆಟಿಕ್ ಬಾಂಬ್‌ಗಳು ಗಡಿ ನಿಯಂತ್ರಣ ರೇಖೆಯ ಆಚೆಯಿಂದ ಡ್ರೋನ್ ಮೂಲಕ ಬಂದಿದೆ ಎಂದು ನಂಬಲಾಗಿದೆ. ಅವರ ಕೈಯಲ್ಲಿರುವ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳ ಪ್ರಮಾಣ ಗಮನಿಸಿದರೆ ಉಗ್ರರು ದೊಡ್ಡ ದಾಳಿ ನಡೆಸಲು ಯೋಜನೆ ರೂಪಿಸಿರುವಂತೆ ಕಾಣುತ್ತಿದೆ ಎಂದು ಹೆಚ್ಚುವರಿ ಡಿಜಿಪಿ ಮುಕೇಶ್ ಸಿಂಗ್ ತಿಳಿಸಿದ್ದಾರೆ.
ಒಂದು ವಾರದ ಹಿಂದೆ ಹುಸೇನ್‌ನ ಇಬ್ಬರು ಸಹಚರರನ್ನು ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಬಂಧಿಸಲಾಗಿತ್ತು. ಅವರಿಬ್ಬರು ನೀಡಿದ ಮಾಹಿತಿಯ ಆಧಾರದಲ್ಲಿ ಹೆಚ್ಚುವರಿ ತನಿಖೆ ನಡೆಸಿದ ಪೊಲೀಸರಿಗೆ ತಾಲಿಬ್‌ನ ಸುಳಿವು ಸಿಕ್ಕಿತ್ತು.
ರಾಜ್ಯಪಾಲರ ಶ್ಲಾಘನೆ
ಉಗ್ರರನ್ನು ಬಂಧಿಸುವಲ್ಲಿ ಗ್ರಾಮಸ್ಥರು ತೋರಿದ ಸಾಹಸ ದೊಡ್ಡ ಮಟ್ಟದ್ದು. ಹೀಗಾಗಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಗ್ರಾಮಸ್ಥರ ಶೌರ್ಯವನ್ನು ಕೊಂಡಾಡಿ ೫ ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.