Site icon Vistara News

Theft Case : ರಾತ್ರೋ ರಾತ್ರಿ ಬಸ್‌ ನಿಲ್ದಾಣವೇ ಕಳ್ಳತನ! 10 ಲಕ್ಷ ರೂ. ಮೌಲ್ಯದ ವಸ್ತುಗಳು ಮಿಸ್

bus stop stolen

ಬೆಂಗಳೂರು: ದಿನ ಕಳೆದಂತೆ ಚಿತ್ರವಿಚಿತ್ರ ಕಳ್ಳತನ ಪ್ರಕರಣಗಳು (Theft Case) ವರದಿಯಾಗುತ್ತಲಿವೆ. ಮನೆ, ಎಟಿಎಂ ಸೇರಿದಂತೆ ಇನ್ನಿತರ ಕಡೆ ಕಳ್ಳತನಕ್ಕೆ ಇಳಿಯುತ್ತಿದ್ದ ಖದೀಮರು ಈಗ ರಸ್ತೆ ಪಕ್ಕದಲ್ಲಿರುವ ಬಸ್‌ ನಿಲ್ದಾಣವನ್ನೇ (Bus Station) ಬಿಟ್ಟಿಲ್ಲ. ರಾತ್ರೋ ರಾತ್ರಿ ಈಗ ಬಸ್‌ ನಿಲ್ದಾಣವೇ (Bus Stop) ಕಳ್ಳತನವಾಗಿದೆ! ಇನ್ನೂ ನಿರ್ಮಾಣ ಮಾಡಿ 10 ದಿನ ಕಳೆಯುವಷ್ಟರಲ್ಲಿ 10 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಕಳ್ಳರ ಪಾಲಾಗಿದೆ. ಈಗ ಪೊಲೀಸರು ತನಿಖೆ (Police investigation) ಆರಂಭಿಸಿದ್ದಾರೆ.

ಪ್ರತಿ ದಿನ ಸಂಚಾರ ಮಾಡುವ ಪ್ರಯಾಣಿಕರು ಮರು ದಿನ ಬಂದು ನೋಡಿದಾಗ ಅಲ್ಲಿ ಬಸ್‌ ನಿಲ್ದಾಣವೇ ಇರಲಿಲ್ಲ. ಇದನ್ನು ಕಂಡು ಒಮ್ಮೆ ಹಲವರು ಕಕ್ಕಾಬಿಕ್ಕಿಯಾಗಿದ್ದೂ ಉಂಟು. ಅರ‍್ರೆ, ಒಂದು ವೇಳೆ ಬಸ್‌ ನಿಲ್ದಾಣ ಬದಲಾಗಿದೆಯೇ? ಇಲ್ಲಿ ಬಸ್‌ ನಿಲ್ಲಿಸುವುದಿಲ್ಲವೇ? ಸಮೀಪದಲ್ಲಿ ಬೇರೆ ಕಡೆ ಏನಾದರೂ ನಿಲ್ದಾಣ ಮಾಡಿದ್ದಾರಾ? ಎಂದು ಅತ್ತಿಂದಿತ್ತ ಹೋಗಿ ನೋಡಿದ್ದಾರೆ. ಎಲ್ಲಿಯೂ ಬಸ್‌ ಕಾಣಿಸಲಿಲ್ಲ. ಇನ್ನು ಅಲ್ಲಿಗೆ ಬಸ್‌ ಬಂದಾಗ ಚಾಲಕರು ಸಹ ಒಂದು ಕ್ಷಣ ಅವಾಕ್‌ ಆಗಿದ್ದು, ಹೌದೋ ಅಲ್ಲವೋ ಎಂಬ ಅನುಮಾನದಲ್ಲಿಯೇ ಬಸ್‌ ನಿಲ್ಲಿಸಿದ್ದಾರೆ. ಇದರಿಂದಾಗಿ ಈಗ ಪ್ರಯಾಣಿಕರು ಫುಟ್‌ಪಾತ್‌ನಲ್ಲಿಯೇ ಬಸ್‌ಗಾಗಿ ಕಾಯುವಂತಾಗಿದೆ.

ನಗರದ ಕನ್ನಿಂಗ್ಹ್ಯಾಮ್ ರಸ್ತೆಯ (Cunningham Road) ಬಸ್ ನಿಲ್ದಾಣವೇ ಈಗ ಕಳ್ಳತನವಾಗಿರುವುದು. ಉಕ್ಕು ಸಹಿತ ನಿರ್ಮಾಣವಾಗಿದ್ದ ಅತ್ಯಾಧುನಿಕ ಓವರ್‌ಹೆಡ್‌ ಶೆಲ್ಟರ್ (Overhead Shelter) ಅನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ. ಸುಮಾರು 10 ಲಕ್ಷ ರೂ.ಗಳ ವೆಚ್ಚದಲ್ಲಿ ಈ ಬಸ್‌ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿತ್ತು ಎಂದು ಹೇಳಲಾಗಿದೆ.

ಪೊಲೀಸ್‌ ತನಿಖೆ ಆರಂಭ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ತಂಗುದಾಣಗಳನ್ನು ನಿರ್ಮಿಸುವ ಜವಾಬ್ದಾರಿ ಹೊತ್ತಿರುವ ಕಂಪನಿಯ ಸಹಾಯಕ ಉಪಾಧ್ಯಕ್ಷ ಎನ್. ರವಿ ರೆಡ್ಡಿ ನೀಡಿದ ದೂರಿನ ಮೇರೆಗೆ ಪೊಲೀಸರು ಕಳ್ಳತನದ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೆ, ಆರೋಪಿಗಳ ಪತ್ತೆಗೆ ತನಿಖೆ ಪ್ರಾರಂಭಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸುತ್ತಿದ್ದಾರೆ.

ಒಂದು ತಿಂಗಳ ಬಳಿಕ ಪ್ರಕರಣ ಬೆಳಕಿಗೆ

ಈ ಸಂಬಂಧ ಎನ್. ರವಿ ರೆಡ್ಡಿ ಅವರು ಸೆಪ್ಟೆಂಬರ್ 30ರಂದು ದೂರು ದಾಖಲಿಸಿದ್ದಾರೆ. ಆದರೆ, ಅವರಿಗೂ ಕಳ್ಳತನವಾಗಿ ಒಂದು ತಿಂಗಳ ನಂತರ ವಿಷಯ ಗೊತ್ತಾಗಿದೆ. ಆದರೆ, ನಿರ್ಮಾಣ ಮಾಡಿದ ಒಂದು ವಾರದಲ್ಲಿಯೇ ಕಳ್ಳತನವಾಗಿದೆ ಎಂಬುದು ತಡವಾಗಿ ಗೊತ್ತಾಗಿದ್ದಾಗಿ ವರದಿಯಲ್ಲಿ ಹೇಳಲಾಗಿದೆ. ಈಗ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: Lingayat CM : ಲಿಂಗಾಯತರಿಗೆ 7 ಸಚಿವ ಸ್ಥಾನ ಕೊಟ್ಟಿದ್ದಕ್ಕೆ ಹಲವು ಸಮುದಾಯಕ್ಕೆ ಸಿಗದ ಮಂತ್ರಿಗಿರಿ: ಗುಡುಗಿದ ಸಿಎಂ ಆಪ್ತ

ಇನ್ನೂ ಹಲವು ಕಡೆ ಕಳ್ಳತನ

ಕನ್ನಿಂಗ್‌ಹ್ಯಾಮ್‌ ರಸ್ತೆಯ ಬಸ್‌ ನಿಲ್ದಾಣ ಮಾತ್ರವಲ್ಲ. ಬೆಂಗಳೂರಿನ ಹಲವು ಬಸ್ ನಿಲ್ದಾಣಗಳನ್ನು ಸಹ ಈ ಹಿಂದೆ ಇದೇ ಮಾದರಿಯಲ್ಲಿ ಕಳ್ಳತನ ಮಾಡಲಾಗಿದೆ. ಎಚ್ಆರ್‌ಬಿಆರ್‌ ಲೇಔಟ್, ಕಲ್ಯಾಣ್ ನಗರ, ದೂಪನಹಳ್ಳಿ, ಬಿಇಎಂಎಲ್ ಲೇಔಟ್ 3ನೇ ಹಂತ, ರಾಜರಾಜೇಶ್ವರಿ ನಗರ ಸೇರಿದಂತೆ ಇತರ ಬಸ್ ನಿಲ್ದಾಣಗಳು ಕಾಣೆಯಾಗಿರುವ ಬಗ್ಗೆ ವರದಿಗಳಾಗಿವೆ.

Exit mobile version