ಉಡುಪಿ: ಚಿತ್ರ-ವಿಚಿತ್ರವಾಗಿ ವೇಷ ಧರಿಸಿ ಬರುವ ಕಳ್ಳರ ಹೆಜ್ಜೆ ಗುರುತು ಪತ್ತೆ ಮಾಡುವುದೇ ಪೊಲೀಸರಿಗೆ ತಲೆನೋವಾಗಿದೆ. ಒಂದು ಕಡೆ ಸೈಬರ್ ಕಳ್ಳರ ಹಾವಳಿಯಾದರೆ ಮತ್ತೊಂದೆಡೆ ಕೆಲ ನಟೋರಿಯಸ್ ಗ್ಯಾಂಗ್ ಸಕ್ರಿಯಗೊಂಡಿದೆ. ಸದ್ಯ ಉಡುಪಿಯಲ್ಲಿ ನಟೋರಿಯಸ್ ಬನಿಯನ್ ಗ್ಯಾಂಗ್ ಜನರ ಆತಂಕವನ್ನು ಹೆಚ್ಚು ಮಾಡಿದೆ.
ಬನಿಯನ್ ಹಾಗೂ ಚಡ್ಡಿ ಧರಿಸಿ ಬರುವ ಈ ಕಳ್ಳರು ಮೈಗೆ ಎಣ್ಣೆ ಹಚ್ಚಿಕೊಂಡು ಫೀಲ್ಡಿಗಿಳಿಯುತ್ತಾರೆ. ಎಲ್ಲರೂ ಗಾಢ ನಿದ್ರೆ ಜಾರುವ ಸಮಯಕ್ಕೆ ಕಾದುಕುಳಿತು ನಂತರ ಕಳ್ಳತನಕ್ಕೆ ಮುಂದಾಗುತ್ತಾರೆ. ರಾತ್ರೋ ರಾತ್ರಿ ಕಳ್ಳ ಬೆಕ್ಕಿನಂತೆ ನುಗ್ಗುವ ಇವರು ಕ್ಷಣಾರ್ಧದಲ್ಲಿ ಚಿನ್ನಾಭರಣವನ್ನು ಲೂಟಿ ಮಾಡಿ ಪರಾರಿ ಆಗುತ್ತಾರೆ.
ಈ ಕಚ್ಚಾ ಬನಿಯನ್ ಗ್ಯಾಂಗ್ ಪತ್ತೆ ಮಾಡುವುದೇ ಉಡುಪಿ ಪೊಲೀಸರಿಗೆ ಸವಾಲಾಗಿದೆ. ಸಂತೆಕಟ್ಟೆಯಲ್ಲಿ ನಡೆದಿದ್ದ ಮನೆ ದರೋಡೆ ಪ್ರಕರಣದಲ್ಲಿ ಈ ತಂಡದ ಕೃತ್ಯ ಬಯಲಾಗಿದೆ. ಇನ್ನು ಕೃತ್ಯದ ಬಳಿಕ ಈ ಗ್ಯಾಂಗ್ ಸಿಂಗಲ್ ಚಪ್ಪಲಿಯನ್ನು ಬಿಟ್ಟು ಹೋಗುತ್ತಾರೆ. ಸೊಂಟಕ್ಕೆ ಚಪ್ಪಲಿ ಕಟ್ಟಿಕೊಂಡು ಬರುವ ಈ ಗ್ಯಾಂಗ್ ಡೆಲ್ಲಿ ಕ್ರೈಮ್-2 ವೆಬ್ ಸೀರೀಸ್ ಕಚ್ಚಾ ಬನಿಯನ್ ಗ್ಯಾಂಗ್ ನೆನಪಿಸುತ್ತೆ. ಸಿಸಿಟಿವಿಯಲ್ಲಿ ಚೆಡ್ಡಿ ಗ್ಯಾಂಗ್‌ನ ಮಾರುವೇಷ ಪತ್ತೆಯಾಗಿದೆ.
ಇದನ್ನೂ ಓದಿ: Road Accident : ಲಾರಿ ಹರಿದು ಸವಾರ ಸಾವು; ಆಂಧ್ರಪ್ರದೇಶದ ಎಂಪಿ ಕಾರು ಅಪಘಾತ
ಬೆಂಗಳೂರಲ್ಲಿ ಕುಖ್ಯಾತ ದರೋಡೆಕೋರರು ಅರೆಸ್ಟ್
ಬೆಂಗಳೂರಿನ ರಾಜಗೋಪಾಲ ನಗರ ಪೊಲೀಸರು ಕುಖ್ಯಾತ ದರೋಡೆ ಗ್ಯಾಂಗ್‌ನನ್ನು ಬಂಧಿಸಿದ್ದಾರೆ. ಕದ್ದ ಮಾಲನ್ನು ಪಡೆದು ಅಡವಿಡುತ್ತಿದ್ದ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಅಭಿಷೇಕ್ @ ಅಭಿ, ಸುಧಾ, ಲಕ್ಷ್ಮಮ್ಮ, ಕಾವೇರಿ ಬಂಧಿತ ಆರೋಪಿಗಳು. ಬಂಧಿತರ ಪೈಕಿ ಅಭಿ ಬೇರೊಂದು ಗ್ಯಾಂಗ್ ಜತೆ ಸೇರಿ ಮನೆ ಕಳ್ಳತನ ಮಾಡುತ್ತಿದ್ದ. ಬಳಿಕ ಸುಧಾ, ಲಕ್ಷ್ಮಮ್ಮ, ಕಾವೇರಿಗೆ ತಂದು ಕೊಡುತ್ತಿದ್ದ. ಈ ಮೂವರು ಅಡವಿಡುವ ಕೆಲಸ ಮಾಡುತ್ತಿದ್ದರು. ಸದ್ಯ ಪೊಲೀಸರು ಬಂಧಿತರಿಂದ 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಲ್ಯಾಪ್ ಟ್ಯಾಪ್ ಕಳ್ಳರ ಹಾವಳಿ
ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ ಸನ್ ರೈಸ್ ಜೆಂಟ್ಸ್ ಪಿಜಿಯಲ್ಲಿ ಕಳ್ಳರು ಕೈ ಚಳಕ ತೋರಿದ್ದಾರೆ. ಪಿಜಿಗಳನ್ನೇ ಟಾರ್ಗೆಟ್ ಮಾಡುವ ಕಳ್ಳರು ಲ್ಯಾಪ್ ಟ್ಯಾಪ್‌ಗಳನ್ನು ಕಳವು ಮಾಡುತ್ತಿದ್ದಾರೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪಿಜಿಗೆ ನುಗ್ಗಿ ಮೂರು ಲ್ಯಾಪ್ ಟ್ಯಾಪ್‌ಗಳನ್ನು ಕದ್ದು ಪರಾರಿ ಆಗಿದ್ದಾರೆ. ಲ್ಯಾಪ್ ಟ್ಯಾಪ್ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಬೆಳ್ಳಂದೂರು ಪೊಲೀಸರು ಸಿಸಿಟಿವಿ ದೃಶ್ಯವನ್ನು ಆಧರಿಸಿ, ಕಳ್ಳರ ಪತ್ತೆಗೆ ಮುಂದಾಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.