ಲಖನೌ: ಬ್ಯಾಂಕ್‌ಗಳ ಬಳಿ ನೂರಾರು ಅಡಿಗಳ ಸುರಂಗ ಕೊರೆದು, ತಿಂಗಳುಗಟ್ಟಲೆ ಪ್ಲಾನ್ ರೂಪಿಸಿ ಬ್ಯಾಂಕ್‌ಗಳಲ್ಲಿಯೋ, ಆಭರಣಗಳ ಮಳಿಗೆಗಳಲ್ಲಿಯೋ ಕೋಟ್ಯಂತರ ರೂಪಾಯಿ, ಆಭರಣಗಳನ್ನು ದೋಚುವುದನ್ನು ಸಿನಿಮಾಗಳಲ್ಲಿ, ವೆಬ್ ಸಿರೀಸ್‌ಗಳಲ್ಲಿ ನೋಡಿರುತ್ತೇವೆ. ಆದರೆ, ಇದೇ ಸಿನಿಮೀಯ ರೀತಿಯಲ್ಲಿ ಉತ್ತರ ಪ್ರದೇಶದಲ್ಲಿ ಕಳ್ಳರು ಚರಂಡಿ ಮೂಲಕ 10 ಅಡಿ ಸುರಂಗ ಕೊರೆದು, ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳನ್ನು ಕದ್ದಿದ್ದಾರೆ.
ಉತ್ತರ ಪ್ರದೇಶದ ಮೀರತ್‌ನಲ್ಲಿರುವ ಜ್ಯುವೆಲ್ಲರಿ ಶೋರೂಮ್ ಪಕ್ಕದ ಚರಂಡಿ ಮೂಲಕ ಕಳ್ಳರು ಸುರಂಗ ಅಗೆದಿದ್ದಾರೆ. ಇಟ್ಟಿಗೆಗಳನ್ನು ತೆಗೆದು, ಕೆಸರನ್ನು ಅಗೆದು ಸುರಂಗ ಕೊರೆದಿದ್ದಾರೆ. ಇದಾದ ಬಳಿಕ ರಾತ್ರೋರಾತ್ರಿ ಮಳಿಗೆ ಪ್ರವೇಶಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ. ಆಭರಣ ಮಳಿಗೆಯ ಮಾಲೀಕರು ಬೆಳಗ್ಗೆ ಮಳಿಗೆ ತೆರೆದಾಗ, ಸುರಂಗ ಕೊರೆದು, ಚಿನ್ನಾಭರಣ ದೋಚಿರುವುದು ಗೊತ್ತಾಗಿದೆ.
ವ್ಯಾಪಾರಿಗಳಿಂದ ಪ್ರತಿಭಟನೆ
ಚಿನ್ನದ ಮಳಿಗೆಗೆ ನುಗ್ಗಿ, ಆಭರಣ ದೋಚಿರುವುದು ಅಂಗಡಿ ಮಾಲೀಕರ ಗಮನಕ್ಕೆ ಬರುತ್ತಲೇ, ನಗರದಾದ್ಯಂತ ಸುದ್ದಿ ಹರಡುತ್ತಲೇ ಮೀರತ್ ಬುಲ್ಲಿಯನ್ ಟ್ರೇಟರ್ಸ್ ಅಸೋಸಿಯೇಷನ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಕೂಡಲೇ ಕಳ್ಳರನ್ನು ಪತ್ತೆಹಚ್ಚಿ, ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಮಳಿಗೆಗೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಲ್ಲದೆ, ಪ್ರಕರಣ ದಾಖಲಿಸಿದ್ದಾರೆ.
ಕ್ಷಮಾಪಣೆ ಪತ್ರ ಬರೆದಿಟ್ಟ ಕಳ್ಳರು
ವಾರಗಟ್ಟಲೆ ಪ್ಲಾನ್ ಮಾಡಿ, ಚರಂಡಿಯಲ್ಲಿ ಸುರಂಗ ಕೊರೆದ ಕಳ್ಳರು, ಚಿನ್ನಾಭರಣಗಳನ್ನು ದೋಚಿಕೊಂಡು ಹೋಗುವ ಮುನ್ನ ಕ್ಷಮಾಪಣೆ ಪತ್ರವೊಂದನ್ನು ಬರೆದಿಟ್ಟು ಹೋಗಿದ್ದಾರೆ. “ನಾವು ನಿಮ್ಮ ಕ್ಷಮೆ ಕೇಳುತ್ತೇವೆ. ನಮಗೆ ಕಳ್ಳತನ ಮಾಡುವುದಷ್ಟೇ ಉದ್ದೇಶವಾಗಿತ್ತು. ಈ ಫ್ಲೋರ್ ತುಂಬ ಗಟ್ಟಿಯಾಗಿತ್ತು” ಎಂಬುದಾಗಿ ಪತ್ರದಲ್ಲಿ ಬರೆದಿದ್ದಾರೆ. ಆದಾಗ್ಯೂ, ಮಳಿಗೆಯಲ್ಲಿ ಎಷ್ಟು ರೂಪಾಯಿ ಮೌಲ್ಯದ ಆಭರಣ ಕಳ್ಳತನ ಮಾಡಲಾಗಿದೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಈ ಕುರಿತು ಮಾಹಿತಿ ನೀಡಿ ಎಂಬುದಾಗಿ ಮಳಿಗೆಯ ಮಾಲೀಕರಿಗೆ ಪೊಲೀಸರು ಸೂಚಿಸಿದ್ದಾರೆ.
ಇದನ್ನೂ ಓದಿ: Bike theft : ಉಳ್ಳಾಲದಲ್ಲಿ ಸರಣಿ ಬೈಕ್ ಕಳ್ಳತನ, ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳರಿಗಾಗಿ ಪೊಲೀಸರ ಹುಡುಕಾಟ!