ಲಖನೌ: ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಪಿಂಕಿ ಗುಪ್ತಾ (Pinky Gupta) ಎಂಬ 24 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪಿಂಕಿ ಗುಪ್ತಾ ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿ ಲಿವ್ ಇನ್ ಪಾರ್ಟ್‌ನರ್ (Live In Partner) ಶಕೀಬ್ ಅಲಿ (Sakib Ali) ಎಂಬಾತನ ಹೆಸರು ಉಲ್ಲೇಖಿಸಿದ್ದಾರೆ. ಅಲ್ಲದೆ, ಇಸ್ಲಾಂಗೆ ಮತಾಂತರವಾಗುವ ಕುರಿತು ನಿರ್ಧಾರ ಮಾಡಿದ್ದೆ ಎಂಬುದು ಸೇರಿ ಹಲವು ವಿಷಯಗಳನ್ನು ಪಿಂಕಿ ಗುಪ್ತಾ ಪ್ರಸ್ತಾಪಿಸಿದ್ದಾರೆ.
“ನನಗೆ ನನ್ನ ಬಗ್ಗೆಯೇ ನಾಚಿಕೆಯಾಗುತ್ತಿದೆ. ನಾನು ನಿನ್ನ ಜತೆಗೂಡಿ ಹೋರಾಡಿದೆ, ನಿನಗಾಗಿ ಹೋರಾಡಿದೆ. ಆದರೆ, ನೀನು ನನ್ನ ಪ್ರೀತಿಗೆ ಗೌರವ ಕೊಡಲೇ ಇಲ್ಲ. ಎಲ್ಲರೂ ನನ್ನ ತಪ್ಪನ್ನು ಮನವರಿಕೆ ಮಾಡಲು ಯತ್ನಿಸಿದರು. ಆದರೆ, ನಿನ್ನ ಎದುರು ಎಲ್ಲವೂ ನಗಣ್ಯ ಎನಿಸಿತ್ತು. ನಿನ್ನ ಸಲುವಾಗಿ ನಾನು ನನ್ನ ಧರ್ಮವನ್ನೇ ಬದಲಾಯಿಸಲು ತೀರ್ಮಾನಿಸಿದ್ದೆ. ಏನೇ ಆಗಲಿ ನೀನು ನನ್ನವನು ಎಂದು ಭಾವಿಸಿದ್ದೆ. ಆದರೆ, ನಿನಗೆ ನನ್ನ ಪ್ರೀತಿಯೇ ಅರ್ಥವಾಗಲಿಲ್ಲ. ಗುಡ್ ಬೈ ಶಕೀಬ್” ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
ಏನಿದು ಪ್ರಕರಣ?
ಘಾಜಿಯಾಬಾದ್ ನಿವಾಸಿಯಾದ ಪಿಂಕಿ ಗುಪ್ತಾ, ಜಿಮ್‌ನಲ್ಲಿ ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ನಾಲ್ಕು ತಿಂಗಳ ಹಿಂದೆ ಜಿಮ್‌ನಲ್ಲಿ ಶಕೀಬ್ ಅಲಿಯ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ, ಫ್ಲ್ಯಾಟ್ ಒಂದರಲ್ಲಿ ಇಬ್ಬರೂ ವಾಸಿಸುತ್ತಿದ್ದರು. ಆದರೆ, ಮದುವೆ ವಿಚಾರ ಬಂದಾಗ ಶಕೀಬ್ ಅಲಿಯು ವರಸೆ ಬದಲಾಯಿಸಿದ್ದ. ಮದುವೆಯಾಗಲ್ಲ ಎಂದು ಹೇಳಿದ್ದ. ನಾವಿಬ್ಬರೂ ಫ್ರೆಂಡ್ಸ್ ಆಗಿ ಇರೋಣ ಎಂದು ತಿಪ್ಪೆ ಸಾರಿಸಿದ್ದ. ಇದರಿಂದ ಪಿಂಕಿ ಗುಪ್ತಾ ನೊಂದಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: Live In Relationship: ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರಲು ಇಷ್ಟು ವಯಸ್ಸು ಆಗಿರಲೇಬೇಕು, ಹೈಕೋರ್ಟ್ ಆದೇಶ
ಅಷ್ಟೇ ಅಲ್ಲ, ಶಕೀಬ್ ಅಲಿಗೆ ಈಗಾಗಲೇ ಮದುವೆಯಾಗಿದೆ ಎಂಬ ಸುದ್ದಿಯು ಪಿಂಕಿ ಗುಪ್ತಾರನ್ನು ಖಿನ್ನತೆಗೆ ದೂಡಿತ್ತು. ಮದುವೆಯಾಗಿದ್ದನ್ನು ಮುಚ್ಚಿಟ್ಟು ತನ್ನ ಜತೆ ಇದ್ದ ಶಕೀಬ್ ಅಲಿಯೊಂದಿಗೆ ಪಿಂಕಿ ಗುಪ್ತಾ ಜಗಳವಾಡಿದ್ದರು. ಕೊನೆಗೆ ಶಕೀಬ್ ಅಲಿ ಸಿಗುವುದಿಲ್ಲ, ಆತ ಮೋಸ ಮಾಡಿದ್ದಾನೆ ಎಂಬುದನ್ನು ಸಹಿಸಿಕೊಳ್ಳದೆ ನೇಣು ಬಿಗಿದುಕೊಂಡು ಪಿಂಕಿ ಗುಪ್ತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪೊಲೀಸರು ಶಕೀಬ್ ಅಲಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ಹಿಂದೆ ಲವ್ ಜಿಹಾದ್ ಸಂಚೇನಾದರು ಇತ್ತಾ ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.