Site icon Vistara News

Threat Case: ʻಚುನಾವಣೆ ಪ್ರಚಾರ ಮಾಡಿದ್ರೆ ಹುಷಾರ್!‌ʼ ಎಂದು ಲಾಂಗ್‌ ಝಳಪಿಸಿದ ಜೆಡಿಎಸ್‌ ಮುಖಂಡ

threat case chikkaballapur

ಚಿಕ್ಕಬಳ್ಳಾಪುರ: ರಾಜಕೀಯ ವೈಷಮ್ಯದ (Political rivalry) ಹಿನ್ನೆಲೆಯಲ್ಲಿ‌ ಚಿಂತಾಮಣಿಯಲ್ಲಿ (Chintamani) ಜೆಡಿಎಸ್‌ (JDS) ನಾಯಕನೊಬ್ಬ ಎದುರಾಳಿಗಳ ಮುಂದೆ ಲಾಂಗ್‌ ಝಳಪಿಸಿ ಆವಾಜ್ (Threat Case) ಹಾಕಿದ್ದಾನೆ. ಚುನಾವಣೆ ಪ್ರಚಾರ, ಮತದಾನದಲ್ಲಿ ಪಾಲ್ಗೊಂಡರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಚಿಂತಾಮಣಿ ತಾಲ್ಲೂಕಿನ ಕೋನಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಜೆಡಿಎಸ್ ಮುಖಂಡನಿಂದ ಕಾಂಗ್ರೆಸ್ ಬೆಂಬಲಿಗರಿಗೆ ಬೆದರಿಕೆ ಹಾಕಿದ ಆರೋಪವಿದೆ. ಗ್ರಾಮದಲ್ಲಿ ನಡೆಯುತ್ತಿದ್ದ ಪಲ್ಲಕ್ಕಿ ಉತ್ಸವದಲ್ಲಿ ಲಾಂಗು ಹಿಡಿದು ಬೆದರಿಕೆ ಹಾಕಿದ್ದಾನೆ. ಇದರ ವಿಡಿಯೋ ಸಾಕ್ಷಿ ಲಭ್ಯವಾಗಿದೆ.

ಕೋದಂಡಸ್ವಾಮಿ ಜಾತ್ರಾ ಮಹೋತ್ಸವ ಹಿನ್ನೆಲೆ ನಡೆಯುತಿದ್ದ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಕೆ.ವಿ‌ ಶ್ರೀನಿವಾಸರೆಡ್ಡಿ (ಕೆವಿಎಸ್) ಎಂಬಾತ ಲಾಂಗ್‌ ತೋರಿಸಿ ಬೆದರಿಕೆ ಹಾಕಿದ್ದಾನೆ. “ಏ ನನ್ನ ಮಕ್ಳಾ, ಚುನಾವಣಾ ಪ್ರಚಾರ ಅಥವಾ ಮತದಾನದಲ್ಲಿ ಪಾಲ್ಗೊಂಡರೆ‌ ಕತ್ತರಿಸುತ್ತೇನೆ” ಎಂದು ಬೆದರಿಕೆ‌ ಹಾಕಿದ್ದಾನೆ ಎನ್ನಲಾಗಿದೆ. ಎದುರಾಳಿಗಳಾದ ಕಲ್ಯಾಣ್‌ ರೆಡ್ಡಿ ಹಾಗು ಆತನ ಕುಟುಂಬದವರನ್ನು ಅಟ್ಟಾಡಿಸಿ ಬೆದರಿಸಿದ್ದಾನೆ.

ಈ ಕುರಿತು ಶ್ರೀನಿವಾಸರೆಡ್ಡಿ ವಿರುದ್ಧ ಕಲ್ಯಾಣ್ ಕುಮಾರ್ ಪ್ರಾಣಬೆದರಿಕೆ ದೂರು ದಾಖಲಿಸಿದ್ದಾರೆ. ಕಲ್ಯಾಣ್ ಕುಮಾರ್ ಹಾಲಿ ಸಚಿವ ಡಾ. ಎಂ. ಸಿ‌ ಸುಧಾಕರ್ ಬೆಂಬಲಿಗರಾಗಿದ್ದು, ಚಿಂತಾಮಣಿ‌ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು

ಯಾದಗಿರಿ ನಗರದ ಶಹಾಪೂರ ಪೇಟ್ ಬಡಾವಣೆಯಲ್ಲಿ ಅನ್ಯಕೋಮಿನ ಯುವಕರಿಂದ ದಲಿತ ಹಿಂದು ಯುವಕನ‌ (Murder Case ) ಹತ್ಯೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ರಾಕೇಶ್ (22) ಮೃತ ದುರ್ದೈವಿ.

ಭಾನುವಾರ ರಾತ್ರಿ ರಾಕೇಶ್‌ ಊಟ ಮಾಡಲು ಹೊರಗೆ ಬಂದಿದ್ದ. ಅನ್ಯಕೋಮಿನವರ ಮನೆಯಲ್ಲಿ ರೊಟ್ಟಿ ಮಾರಾಟ ಮಾಡುತ್ತಿದ್ದರು. ಹೀಗಾಗಿ ಮನೆ ಸಮೀಪದಲ್ಲೇ ಇರುವ ರೊಟ್ಟಿ ಕೇಂದ್ರಕ್ಕೆ ರಾಕೇಶ್‌ ತೆರಳಿದ್ದ. ಈ ವೇಳೆ ಮನೆ ಬಾಗಿಲು ಬಡಿದು ರೊಟ್ಟಿ ಕೇಳಿದ್ದ, ಆದರೆ ರೊಟ್ಟಿ ಇಲ್ಲವೆಂದು ಕಳುಹಿಸಿದ್ದರು. ಮನೆಗೆ ವಾಪಸ್ ಬಂದ ರಾಕೇಶ್‌ ಖಾಲಿ ಹೊಟ್ಟೆಯಲ್ಲಿ ನಿದ್ರೆಗೆ ಜಾರಿದ್ದ.

ಸ್ವಲ್ಪ ಸಮಯದ ನಂತರ ರಾಕೇಶ್‌ ಮನೆಗೆ ಬಂದಿದ್ದ ಅನ್ಯಕೋಮಿನ ಯುವಕರು, ರೊಟ್ಟಿ ಕೇಳಲು ಮನೆಗೆ ಯಾಕೆ ಬಂದ್ರಿ ಎಂದು ಪ್ರಶ್ನೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಪ್ರಮುಖ ಆರೋಪಿ ಫೈಯಾಜ್ ಸೇರಿ ನಾಲ್ವರು ರಾಕೇಶ್‌ನ ಗುಪ್ತಾಂಗಕ್ಕೆ ಹಲ್ಲೆ ಮಾಡಿದ್ದಾರೆ. ಮಾರಣಾಂತಿಕ ಹಲ್ಲೆಗೊಳಗಾದ ರಾಕೇಶ್‌ ಉಸಿರುಚೆಲ್ಲಿದ್ದಾನೆ ಎಂದು ರಾಕೇಶ್ ತಾಯಿ ಆರೋಪಿಸಿದ್ದಾರೆ.

ಇನ್ನು ಹಿಂದು ಯುವಕನ‌ ಹತ್ಯೆ ಮರೆಮಾಚಲು ಪೊಲೀಸ್ ಇಲಾಖೆ ಯತ್ನಿಸುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಭಾನುವಾರ ತಡರಾತ್ರಿ ಕೊಲೆ ನಡೆದಿದ್ದು, ಕೇಸ್ ದಾಖಲಿಸಿಕೊಂಡಿಲ್ಲ. ದಲಿತ ಕುಟುಂಬಕ್ಕೆ ಬಿಜೆಪಿ, ಹಿಂದು ಕಾರ್ಯಕರ್ತರು ಬೆಂಗಾವಲಾಗಿ ನಿಂತ ಕೂಡಲೇ ಎಚ್ಚೆತ್ತ ಪೊಲೀಸರು, ಕೊಲೆ ನಡೆದ 18 ಗಂಟೆಗಳ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಖುದ್ದು ಎಸ್‌ಪಿ ಜಿ.ಸಂಗೀತಾ ಅವರು ಸ್ಥಳದಲ್ಲಿ ನಿಂತು ಆಸ್ಪತ್ರೆಗೆ ರವಾನಿಸಿದ್ದರು.

ಪ್ರಕರಣ ಸಂಬಂಧ ಯಾದಗಿರಿ ಎಸ್‌ಪಿ ಜಿ.ಸಂಗೀತಾ ಪ್ರತಿಕ್ರಿಯಿಸಿ, ನಮಗೆ ಕೊಲೆ ನಡೆದಿರುವ ಬಗ್ಗೆ ಗೊತ್ತೇ ಇಲ್ಲ. ಕೊಲೆಯಾದ ಯುವಕನ ಕುಟುಂಬಸ್ಥರು ಇನ್ನೂ ಏನು ಹೇಳಿಲ್ಲ. ದೂರು ಕೊಡಿ ಎಂದರೆ ಅವರು ಬಂದಿಲ್ಲ. ಪ್ರಕರಣ ಸಂಬಂಧ ಮಾಹಿತಿ ಕೇಳಿದರೆ, ರೊಟ್ಟಿ ಕೇಂದ್ರಕ್ಕೆ ಹೋಗಿದ್ದ ಎನ್ನುತ್ತಿದ್ದಾರೆ. ಅವರ ಹಿರಿಯರ ಜತೆ ಚರ್ಚಿಸಿ ನಂತರ ಬಂದು ದೂರು ಕೊಡುತ್ತಾರೆ. ದೂರು ಕೊಟ್ಟ ನಂತರ ವಿಚಾರಣೆ ಮಾಡಿ ಆರೋಪಿಯನ್ನು ಬಂಧಿಸುತ್ತೇವೆ ಎಂದು ಹೇಳಿದ್ದರು.

ಇದನ್ನೂ ಓದಿ | Car Accident: ಆಕಸ್ಮಿಕವಾಗಿ ಕಾರು ಹರಿದು ಒಂದೂವರೆ ವರ್ಷದ ಮಗು ಸಾವು; ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Exit mobile version