Site icon Vistara News

Threatening letters : ಏಳು ಸಾಹಿತಿಗಳಿಗೂ ಒಬ್ಬನಿಂದಲೇ ಕೊಲೆ ಬೆದರಿಕೆ! ಸಿಸಿಬಿ ತನಿಖೆಯಲ್ಲಿ ಬಹಿರಂಗ

Seven writers are threatened by one person Revealed in CCB investigation

ಬೆಂಗಳೂರು: ಖ್ಯಾತ ಸಾಹಿತಿ ಡಾ.ನಾ ಡಿಸೋಜ ಸೇರಿ ಏಳು ಸಾಹಿತಿಗಳಿಗೂ ಕೊಲೆ ಬೆದರಿಕೆ ಹಾಕಿದ್ದು ಒಬ್ಬನೇ ಎಂಬುದು ಸಿಸಿಬಿ ತನಿಖೆಯಲ್ಲಿ (Threatening letters) ಬಹಿರಂಗವಾಗಿದೆ. ಸಾಹಿತಿಗಳಿಗೆ ಕೊಲೆ ಬೆದರಿಕೆ ಪತ್ರ ವಿಚಾರವಾಗಿ ಸಿಸಿಬಿ ತನಿಖೆಯಿಂದ ಮಹತ್ತರ ಮಾಹಿತಿ ಲಭ್ಯವಾಗಿದೆ.

ಏಳು ಸಾಹಿತಿಗಳಿಗೆ ಕೊಲೆ ಬೆದರಿಕೆ ಪತ್ರ ಬರೆದವನು ಒಬ್ಬನೇ ಎಂಬುದು ಪತ್ತೆ ಆಗಿದೆ. ಒಬ್ಬನೇ ವ್ಯಕ್ತಿ 7 ಜನ ಸಾಹಿತಿಗಳಿಗೂ ಪತ್ರ ಬರೆದು ಕೊಲೆ ಬೆದರಿಕೆ ಹಾಕಿದ್ದಾನೆ ಎಂಬುದು ಕೈ ಬರಹದಿಂದ ತಿಳಿದು ಬಂದಿದೆ. ದಾವಣಗೆರೆ ಮೂಲದಿಂದ ಪತ್ರ ಬಂದಿರುವುದು ಖಚಿತವಾಗಿದೆ.

ಅನಾಮಧೇಯ ವ್ಯಕ್ತಿ ಪತ್ರ ಬರೆದು ಬೇರೆ ಬೇರೆ ಪೋಸ್ಟ್ ಬಾಕ್ಸ್‌ಗಳಿಂದ ಪೋಸ್ಟ್ ಮಾಡಿದ್ದಾನೆ ಎನ್ನಲಾಗಿದೆ. ಬೇರೆ ಬೇರೆ ತಾಲೂಕು ಜಿಲ್ಲೆಗಳಿಗೆ ಹೋಗಿ ಕೊಲೆ ಬೆದರಿಕೆ ಪತ್ರವನ್ನು ಪೋಸ್ಟ್‌ ಮಾಡಿದ್ದಾನೆ. ಸದ್ಯ ಆ ಒಬ್ಬ ಆರೋಪಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಸಾಹಿತಿ ನಾ.ಡಿಸೋಜ ಅವರಿಗೆ ಬಂದಿದ್ದ ಬೆದರಿಕೆ ಪತ್ರ

ಕಳೆದ 2022ರ ಅಕ್ಟೋಬರ್‌ 25ರಂದು ಖ್ಯಾತ ಸಾಹಿತಿ ಡಾ.ನಾ ಡಿಸೋಜ ಅವರಿಗೆ ಬೆದರಿಕೆ ಪತ್ರ ಬಂದಿತ್ತು. ಸಾಗರ ಪೇಟೆ ಠಾಣೆ ಸರ್ಕಲ್‌ ಇನ್ಸ್‌ಪೆಕ್ಟರ್‌ ಸೀತಾರಾಂ ಅವರು ನೆಹರೂ ನಗರದಲ್ಲಿರುವ ನಾ. ಡಿಸೋಜ ಅವರ ಮನೆಗೆ ಭೇಟಿ ನೀಡಿ ಬೆದರಿಕೆ ಪತ್ರದ ವಿಚಾರವಾಗಿ ಚರ್ಚೆ ನಡೆಸಿದ್ದರು. ಆದರೆ, ನಾ. ಡಿಸೋಜ ಅವರು ಈ ಬಗ್ಗೆ ಯಾವುದೇ ದೂರು ನೀಡಿರಲಿಲ್ಲ. ಆದಾಗ್ಯೂ ಸಾಹಿತಿ ಡಿಸೋಜ ಅವರಿಗೆ ಸೂಕ್ತ ಭದ್ರತೆಯನ್ನು ನೀಡಿದ್ದರು.

ಇತ್ತ ಸಾಹಿತಿ ಕುಂ. ವೀರಭದ್ರಪ್ಪ (Kum Veerabhadrappa) ಅವರಿಗೂ ಕೊಲೆ ಬೆದರಿಕೆ ಪತ್ರ ಬಂದಿತ್ತು. ಬಂದ ಹದಿನಾರೂ ಪತ್ರಗಳ ಕೈಬರಹ ಒಂದೇ ರೀತಿಯಾಗಿವೆ. ಹಾಗಾಗಿ ಒಬ್ಬನೇ ಈ ಪತ್ರವನ್ನು ಬರೆದಿದ್ದಾನೆ ಎಂದು ಈ ಹಿಂದೆಯೇ ಅನುಮಾನಿಸಿದ್ದರು. ಈ ಎಲ್ಲ ಪತ್ರಗಳನ್ನು ಗಂಭೀರವಾಗಿ ಪರಿಗಣಿಸದ ವೀರಭದ್ರಪ್ಪ ಅವರು, ನನಗೆ ಬಂದಿರುವ ಬೆದರಿಕೆ ಪತ್ರಗಳಲ್ಲಿ (Threat Letter) ಕಾಗುಣಿತ ದೋಷಗಳು ಬಹಳಷ್ಟು ಇವೆ ಇದು ನೋವಿನ ಸಂಗತಿ ಎಂದಿದ್ದರು.

ಇದನ್ನೂ ಓದಿ: Gambling Case : ಜೂಜು ಅಡ್ಡೆಯಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್ ಶಾಸಕಿ ಆಪ್ತ!

ಸಾಹಿತಿಗಳಿಗೆ ಜೀವ ಬೆದರಿಕೆ; ಸಿಎಂಗೆ ದೂರು ನೀಡಿದ್ದ ನಿಯೋಗ

ನಾಡಿನ ಅರಿವನ್ನು ವಿಸ್ತರಿಸುತ್ತಿರುವ ಹಲವಾರು ಲೇಖಕರು ಸಾಹಿತಿಗಳು ಹಾಗೂ ಹೋರಾಟಗಾರರಿಗೆ ಬೆದರಿಕೆ ಪತ್ರಗಳು ಬರುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಭರವಸೆ ನೀಡಿದ್ದರು. ತಮ್ಮನ್ನು ಭೇಟಿ ಮಾಡಿದ ಹಿರಿಯ ಸಾಹಿತಿಗಳು, ಲೇಖಕರು ಮತ್ತು ಹೋರಾಟಗಾರರ ನಿಯೋಗಕ್ಕೆ ಈ ಭರವಸೆ ನೀಡಿದ್ದರು.

ಹಲವಾರು ಸಾಹಿತಿಗಳಿಗೆ ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ನಿರಂತರವಾಗಿ ಜೀವ ಬೆದರಿಕೆ ಪತ್ರಗಳು ಬರುತ್ತಿವೆ. ಸಾಹಿತಿಗಳು . ಆತಂಕ, ಮುಜುಗರದಿಂದ ಬದುಕುವ ಪರಿಸ್ಥಿತಿ ಉಂಟಾಗಿದೆ ಎಂದು ಹಲವು ಪ್ರಕರಣಗಳನ್ನು ಹಿರಿಯ ಸಾಹಿತಿ ಡಾ.ಕೆ ಮರುಳಸಿದ್ದಪ್ಪ ಉದಾಹರಿಸಿದರು.

ಕುಂ.ವೀರಭದ್ರಪ್ಪ, ಡಾ:ವಸುಂಧರಾ ಭೂಪತಿ, ಬಂಜಗೆರೆ ಜಯಪ್ರಕಾಶ್, ಅವರುಗಳಿಗೆ ಅತಿ ಹೆಚ್ಚು ಬೆದರಿಕೆಗಳು ಬಂದಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದ, ವಾತಾವರಣ ಸೃಷ್ಟಿಯಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅವರಿಗೆ ಒದಗಿದ ಗತಿ ಒದಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು. ಬೆದರಿಕೆ ಪತ್ರಗಳ ಬಗ್ಗೆ ಒಂದು ತಂಡ ರಚಿಸಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿರುವ, ವೃತ್ತಿಪರವಾಗಿರುವ ಖಡಕ್ ಅಧಿಕಾರಿಗಳ ಪೊಲೀಸ್ ತಂಡವನ್ನು ರಚಿಸಬೇಕು ಎಂದಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version