Site icon Vistara News

Child Abandon: ಮೂರು ತಿಂಗಳ ಮಗು ಬಿಟ್ಟು ತಾಯಿ ಪರಾರಿ

child abandon

ತುಮಕೂರು: ತಾಯಿಯೊಬ್ಬಳು (mother) ರಸ್ತೆ ಬದಿಯಲ್ಲಿ ಮೂರು ತಿಂಗಳ ಮಗುವನ್ನು ಅನಾಥವಾಗಿ (Child abandon) ಬಿಟ್ಟು ಹೋಗಿರುವ ಪ್ರಕರಣ ತುಮಕೂರು (Tumkur news) ಜಿಲ್ಲೆ ತಿಪಟೂರು ತಾಲೂಕಿನ ಹೆಡಗರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಗುವಿನ ಅಳುವಿನ ಶಬ್ದ ಕೇಳಿ ಆಶಾ ಕಾರ್ಯಕರ್ತೆಯೊಬ್ಬರು ಮಗುವನ್ನ ರಕ್ಷಿಸಿದ್ದಾರೆ. ರಾತ್ರಿ ಊಟ ಮಾಡಿ ವಾಕಿಂಗ್ ಮಾಡುತ್ತಿದ್ದ ಆಶಾ ಕಾರ್ಯಕರ್ತೆ ಕಲಾವತಿ ಅವರಿಗೆ ರಸ್ತೆ ಬದಿಯಲ್ಲಿ ಅಳುತ್ತಿದ್ದ ಮಗುವಿನ ಶಬ್ದ ಕೇಳಿಸಿತ್ತು. ಸ್ಥಳಕ್ಕೆ ಹೋದಾಗ, ಮೂರು ತಿಂಗಳ ಮಗುವನ್ನು ಬಿಟ್ಟು ಹೋಗಿರುವುದು ಬೆಳಕಿಗೆ ಬಂದಿದೆ.

ಕೂಡಲೇ ನೊಣವಿನಕೆರೆ ಪೊಲೀಸರಿಗೆ ಆಶಾ ಕಾರ್ಯಕರ್ತೆ ಕಲಾವತಿ ಮಾಹಿತಿ ನೀಡಿದ್ದಾರೆ. ಆಂಬ್ಯುಲೆನ್ಸ್ ಮೂಲಕ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಮಗು ಕರೆದೊಯ್ಯಲಾಗಿದೆ. ವೈದ್ಯರು ಮಗುವಿನ ಆರೋಗ್ಯ ತಪಾಸಣೆ ನಡೆಸಿದ್ದು, ಆರೋಗ್ಯವಾಗಿರುವ ಮಗು 4.5 ಕೆಜಿಯಷ್ಟು ತೂಕವಿದೆ. ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಪೋಷಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಎಟಿಎಂಗಳ ದರೋಡೆ

ಬೆಂಗಳೂರು: ಬೆಂಗಳೂರಿನಲ್ಲಿ ಕೆಲವು ವಾರಗಳಿಂದ ಸಕ್ರಿಯವಾಗಿರುವ ಎಟಿಎಂ ಕಳ್ಳರ (ATM theft) ಗ್ಯಾಂಗ್ ಬಗ್ಗೆ ಪೊಲೀಸರು ಇದೀಗ ತಲೆಕೆಡಿಸಿಕೊಂಡಿದ್ದಾರೆ. ಹರ್ಯಾಣ ಮೂಲದ ಎರಡು ಗ್ಯಾಂಗ್‌ಗಳು ಸತತವಾಗಿ ಎಟಿಎಂಗಳಿಂದ ಹಣ (Robbery Case) ಎತ್ತುತ್ತಿವೆ. ಗುರುತೇ ಸಿಗದಂತೆ ದರೋಡೆ ಮಾಡುತ್ತಿರುವ ಈ ಗ್ಯಾಂಗ್‌ಗಳು ಪೊಲೀಸರಿಗೆ ತಲೆನೋವಾಗಿವೆ.

ಬೆಳ್ಳಂದೂರು ಠಾಣೆ ವ್ಯಾಪ್ತಿಯ ಎಕ್ಸಿಸ್ ಬ್ಯಾಂಕ್ ಎಟಿಎಂನಿಂದ ನಿನ್ನೆ ಕಳ್ಳತನ ಮಾಡಲಾಗಿದೆ. ಇಕೋ ಎರ್ಟಿಗಾ ಕಾರ್‌ನಲ್ಲಿ ಬಂದು ಕಳವು ಮಾಡಲಾಗಿದೆ. ಪರಿಶೀಲಿಸಿದಾಗ ಕಾರು ಕೂಡ ಕಳವು ಮಾಲು ಎಂಬುದು ಗೊತ್ತಾಗಿದೆ. ಆರೋಪಿಗಳು ಮೈಮೇಲೆ ಹೊದಿಕೆ ಹೊದ್ದುಕೊಂಡು ಎಟಿಎಂ ಒಳಗೆ ಹೋಗಿ ಕೃತ್ಯ ನಡೆಸುತ್ತಿದ್ದಾರೆ. ಹೀಗಾಗಿ ಇವರು ಗುರುತು ಕಾಣಿಸದಾಗಿದೆ.

ಇವರ ಖತರ್‌ನಾಕ್‌ ಬುದ್ಧಿ ಒಂದೆರಡಲ್ಲ. ಕಳ್ಳತನ ವೇಳೆ ಎಟಿಎಂನಲ್ಲಿರುವ ಸಿಸಿಟಿವಿ ಕ್ಯಾಮೆರಾ ಲೆನ್ಸ್‌ಗೆ ಕಪ್ಪು ಪೇಂಟ್‌ ಬಳಿಯುತ್ತಾರೆ. ಅಲ್ಲಿಗೆ ಅದೂ ಮಟಾಶ್.‌ ಬಳಿಕ ಗ್ಯಾಸ್ ಕಟರ್ ಬಳಸಿ ಎಟಿಎಂ ಓಪನ್ ಮಾಡಿ ಲಕ್ಷಾಂತರ ರೂಪಾಯಿ ಹಣ ದರೋಡೆ ಮಾಡುತ್ತಾರೆ. ಬೆಳ್ಳಂದೂರಿನಲ್ಲಿ ಜೂ. 6ರಂದು ಬೆಳಗಿನ ಜಾವ 3.30ಕ್ಕೆ ಕೃತ್ಯ ನಡೆಸಲಾಗಿದೆ. ಸದ್ಯ ಸಿಸಿಟಿವಿಯಲ್ಲಿ ಆರೋಪಿಗಳ ಕೃತ್ಯ ಸೆರೆಯಾಗಿದೆ.

ಈ ಸಂಬಂಧ ಏಜೆನ್ಸಿ ಸಿಬ್ಬಂದಿ ಕಿರಣ್ ಎಂಬುವವರಿಂದ ದೂರು ದಾಖಲಾಗಿದೆ. ಬೆಳ್ಳಂದೂರು ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಪ್ರತಿನಿತ್ಯ ರಾತ್ರಿ ವೇಳೆ ನಗರದ ಎಟಿಎಂಗಳ ಸುತ್ತಮುತ್ತಲೂ ಹೆಚ್ಚಾಗಿ ಗಸ್ತಿಗೆ ಹಿರಿಯ ಅಧಿಕಾರಿಗಳು ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ.

ಕಾರಿನ ಮೇಲೆ ಕಾಡಾನೆ ದಾಳಿ, ಕುಟುಂಬ ಪಾರು

ಕೊಡಗು: ಮಲೆನಾಡು ಭಾಗದಲ್ಲಿ ಕಾಡಾನೆಗಳ (Wild animal attack) ಉಪಟಳ ಹೆಚ್ಚಾಗುತ್ತಿದ್ದು, ಕೊಡಗಿನಲ್ಲಿ ಕಾರಿನ ಮೇಲೆ ಕಾಡಾನೆ ದಾಳಿ (Elephant attack) ನಡೆಸಿದೆ. ಕಾರಿನೊಳಗೆ ಇದ್ದ ಕುಟುಂಬವೊಂದು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ವೀರಾಜಪೇಟೆಯ ಯಶವಂತ್ ಅವರ ಕುಟುಂಬವು ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ.

ಯಶವಂತ್‌ ತಮ್ಮ ಕುಟುಂಬದೊಂದಿಗೆ ಟಿ.ಶೆಟ್ಟಿಗೇರಿಯಿಂದ ಇರ್ಪು ಕಡೆ ತೆರಳುತ್ತಿದ್ದಳು. ಈ ವೇಳೆ ಪೊನ್ನಂಪೇಟೆ ತಾಲೂಕಿನ ಕುರ್ಚಿ ಗ್ರಾಮದಲ್ಲಿ ಅಡ್ಡಗಟ್ಟಿದ ಆನೆಯು ಏಕಾಏಕಿ ದಾಳಿ ಮಾಡಿದೆ. ಆನೆ ಹತ್ತಿರ ಬರುತ್ತಿದ್ದಂತೆ ಕಾರಿನಿಂದ ಇಳಿದು ಓಡಿದ್ದಾರೆ. ಈ ವೇಳೆ ಆನೆಯು ಕಾರು ಜಖಂಗೊಳಿಸಿದೆ. ಇಬ್ಬರು ಮಕ್ಕಳು ಸೇರಿದಂತೆ ಕಾರಿನಲ್ಲಿದ್ದ ನಾಲ್ವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಕಾಡಾನೆ ಹಾವಳಿಗೆ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಪ್ರತಿನಿತ್ಯ ಗ್ರಾಮದಲ್ಲಿ ಕಾಡಾನೆಗಳು ಅಡ್ಡಾಡುತ್ತಿದ್ದರೂ ಸೆರೆಹಿಡಿಯದೆ ಸುಮ್ಮನಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: Wild Animals Attack: ವಿಜಯನಗರ: ನಾಡಿಗೆ ನುಗ್ಗಿದ ಕರಡಿಯನ್ನು ರಾತ್ರೋರಾತ್ರಿ ಕಾಡಿಗೆ ಅಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ

Exit mobile version