Site icon Vistara News

Tiger Nail : ಹುಲಿ ಉಗುರು ಪತ್ತೆಯಾದರೆ ಏನು ಮಾಡೋಣ? ಶಿಫಾರಸು ಮಾಡಲು ಸಮಿತಿ ರಚನೆ

Tiger Nail

ಬೆಂಗಳೂರು: ರಾಜ್ಯದೆಲ್ಲೆಡೆ ಈಗ ಹುಲಿಯ ಉಗುರು (Tiger nail), ಹುಲಿ ಚರ್ಮದ್ದೇ (Tiger Skin) ಸುದ್ದಿ. ಬಿಗ್‌ ಬಾಸ್‌ ಸೀಸನ್‌ 10 (BBK Season 10) ಸ್ಪರ್ಧಿ ವರ್ತೂರು ಸಂತೋಷ್‌ ಬಂಧನದ (Varthur Santhosh Arrest) ಬಳಿಕ ಹುಲಿಯುಗುರು ಬಳಕೆ ಅಪರಾಧ ಎಂಬ ಸಂದೇಶ ಎಲ್ಲ ಕಡೆ ರವಾನೆಯಾಗಿದೆ. ಹೀಗಾಗಿ ಅದನ್ನು ಬಳಸುತ್ತಿರುವ ಇತರರ ಮೇಲೆ ಕೆಂಗಣ್ಣು ಬಿದ್ದಿದೆ. ಹೀಗಾಗಿ ಅರಣ್ಯ ಇಲಾಖೆಗೆ (Forest Department) ಹಲವಾರು ದೂರುಗಳು ಬಂದಿವೆ. ಪ್ರಸಕ್ತ ಕೆಲವು ಸೆಲೆಬ್ರಿಟಿಗಳು ಮತ್ತು ಸ್ವಾಮೀಜಿಗಳ ಪ್ರಕರಣಗಳಷ್ಟೇ ಸದ್ದು ಮಾಡಿವೆ. ಮುಂದೆ ಇಂಥ ನೂರಾರು ಪ್ರಕರಣಗಳು ಎದುರಾಗುವ ಸಾಧ್ಯತೆ ಇದೆ. ಇಂಥ ಸಂದರ್ಭದಲ್ಲಿ ಅರಣ್ಯ ಇಲಾಖೆ ಏನು ಮಾಡಬಹುದು ಎಂಬ ಬಗ್ಗೆ ಶಿಫಾರಸುಗಳನ್ನು ಪಡೆಯಲು ಒಂದು ಸಮಿತಿಯನ್ನು (Committee Formed) ರಚಿಸಲಾಗಿದೆ.

ರಾಜ್ಯ ಅರಣ್ಯ ಸಚಿವರಾಗಿರುವ ಈಶ್ವರ್‌ ಖಂಡ್ರೆ ಅವರ ಸಲಹೆಯ ಮೇರೆಗೆ ಅರಣ್ಯ ಪಡೆಯ ಮುಖ್ಯಸ್ಥರು ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರು ಆದೇಶವೊಂದನ್ನು ಹೊರಡಿಸಿದ್ದಾರೆ. ರಚನೆಯಾಗಿರುವ ಉನ್ನತಾಧಿಕಾರಿಗಳ ಸಮಿತಿಯಲ್ಲಿ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಇವರನ್ನು ಮುಖ್ಯಸ್ಥರಾಗಿರುತ್ತಾರೆ. ಬೆಂಗಳೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಸದಸ್ಯರನ್ನಾಗಿ ಮಾಡಲಾಗಿದೆ.ಬೆಂಗಳೂರು ನಗರ, ತುಮಕೂರು, ಕೊಪ್ಪ, ಶಿವಮೊಗ್ಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕೂಡಾ ಸದಸ್ಯರಾಗಿ ಇರುತ್ತಾರೆ. ಅಗತ್ಯವಿದ್ದಲ್ಲಿ ಈ ತಂಡಕ್ಕೆ ಇನ್ನಷ್ಟು ಸದಸ್ಯರನ್ನು ಸೇರಿಸಿಕೊಳ್ಳಬಹುದು ಎಂದು ಸೂಚಿಸಲಾಗಿದೆ.

ಒಂದು ವಾರದಲ್ಲಿ ವರದಿ ಸಲ್ಲಿಸಲು ಸೂಚನೆ

ಆದೇಶದ ಪ್ರಸ್ತಾವನೆಯಲ್ಲಿ ಕೆಲವೊಂದು ಮಹತ್ವದ ಸಂಗತಿಗಳನ್ನು ಉಲ್ಲೇಖಿಸಲಾಗಿದೆ.

  1. ವನ್ಯಜೀವಿ ವಸ್ತುಗಳ ಸಂಗ್ರಹಣೆಗೆ ಕಾನೂನಿನಲ್ಲಿ ಸ್ಪಷ್ಟವಾದ ನಿಬಂಧನೆಗಳಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಯಾವುದೇ ವನ್ಯಜೀವಿಗೆ ಸಂಬಂಧಿಸಿದ ವಸ್ತುಗಳ ಸಂಗ್ರಹವು ನಿಷೇಧಿಸಲಾಗಿದೆ.
  2. ಒಂದು ವೇಳೆ ವನ್ಯಜೀವಿಗಳಿಗೆ ಸಂಬಂಧಿಸಿದ ಅಂತಹ ಯಾವುದಾದರೂ ವಸ್ತುವನ್ನು ಹಿಂದಿನವರು ಸಂಗ್ರಹವಿದ್ದಲ್ಲಿ, ಕೂಡಲೇ ಇಲಾಖೆಗೆ ಒಪ್ಪಿಸುವಂತೆ, ಇಲ್ಲವೇ ಪರವಾನಗಿ, ದೃಢೀಕರಣ ಪತ್ರ ಪಡೆಯುವಂತೆ ಸೂಚಿಸಲಾಗಿದೆ.
  3. ಈ ಸಂಬಂಧ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ಇವರ ನೇತೃತ್ವದ ಸಮಿತಿಯೊಂದನ್ನು ರಚಿಸಲು ಸೂಚಿಸಲಾಗಿದೆ.
  4. ಸಮಿತಿಯು ವನ್ಯಜೀವಿ ವಸ್ತುಗಳ ಸಂಗ್ರಹ ನಿಷೇಧ ಕಾಯ್ದೆ ಜಾರಿಗೆ ಬಂದಾಗಿನಿಂದ ದಾಖಲಾಗಿರುವ ಪ್ರಕರಣಗಳೆಷ್ಟು? ಕಾನೂನಿನಡಿಯಲ್ಲಿ ಕೈಗೊಂಡ ಕ್ರಮಗಳ ಸಂಪೂರ್ಣ ವಿವರ ನೀಡಬೇಕು.
  5. ಅದರ ಜತೆಗೆ ಹಾಲಿ ಪ್ರಕರಣಗಳಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಶಿಪಾರಸ್ಸು ಮತ್ತು ಈ ನಿಟ್ಟಿನಲ್ಲಿ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಾದ ಸುದೀರ್ಘವಾದ ವರದಿ ಸಿದ್ಧಪಡಿಸಬೇಕು.
  6. ಎಲ್ಲ ವಿವರಗಳು ಇರುವ ವರದಿಯನ್ನು ಒಂದು ವಾರದೊಳಗೆ ಸಲ್ಲಿಸಬೇಕು.

Exit mobile version