Site icon Vistara News

Tiger Nail : ಬಿಗ್‌ ಬಾಸ್‌ ಆರ್ಯವರ್ಧನ್‌ ಗುರೂಜಿಗೂ ಪರಚಿದ ಹುಲಿ ಉಗುರು; ಕಚೇರಿಗೆ ದಾಳಿ

Aryavardhan guruji

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಸ್ಪರ್ಧಿ ವರ್ತೂರು ಸಂತೋಷ್‌ (Varthuru Santhosh) ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಬಂಧಿಸಿದ ಬೆನ್ನಿಗೇ ಈಗ ಬಿಗ್‌ ಬಾಸ್‌ ಸೀಸನ್‌ 9ರ ಸ್ಪರ್ಧಿ ಆರ್ಯವರ್ಧನ್‌ ಗುರೂಜಿಗೆ (Aryavardhan Guruji) ಸಂಕಷ್ಟ ಎದುರಾಗಿದೆ. ಆರ್ಯವರ್ಧನ್‌ ಗುರೂಜಿ ಅವರು ಕೂಡಾ ಬಿಗ್‌ ಬಾಸ್‌ನಲ್ಲಿದ್ದಾಗ ಹುಲಿಯ ಉಗುರಿನ (Tiger Nail) ಪೆಂಡೆಂಟ್‌ ಧರಿಸಿದ್ದರು ಎಂಬುದನ್ನು ನೆನಪಿಸಿಕೊಂಡ ಅರಣ್ಯ ಇಲಾಖೆ (Forest Department) ಅವರ ಕಚೇರಿಗೆ ದಾಳಿ ಮಾಡಿದೆ!

ಆರ್ಯವರ್ಧನ್ ಗುರೂಜಿ ಅವರ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆ ಬಳಿ ಇರುವ ಕಚೇರಿ ಮೇಲೆ ಕಗ್ಗಲಿಪುರ ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಸತತ ಮೂರು ಗಂಟೆಗಳ ಕಾಲ ನಡೆದ ಪರಿಶೀಲನೆ ನಡೆಸಿದ ಅಧಿಕಾರಿಗಳು ಗುರೂಜಿ ಬಳಿ ಇದ್ದ ಹುಲಿ ಉಗುರಿನಂತಿರುವ ವಸ್ತುವನ್ನು ಜಪ್ತಿ ಮಾಡಿದ್ದಾರೆ.

ಆರ್ಯವರ್ಧನ ಗುರೂಜಿಯವರ ಕಚೇರಿ ಮೇಲೆ ಕಗ್ಗಲಿಪುರ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದರು. ಆರ್‌ಎಫ್‌ಒ ರಾಜು ಅವರ ನೇತೃತ್ವದ ಐದು ಜನರ ತಂಡ ನೋಟಿಸ್ ಹಾಗು ಸರ್ಚ್ ವಾರಂಟ್‌ನೊಂದಿಗೆ ಕಚೇರಿಗೆ ಆಗಮಿಸಿದ್ದರು. ಆದರೆ ಅಷ್ಟು ಹೊತ್ತಿಗೆ ಆರ್ಯವರ್ಧನ್‌ ಗುರೂಜಿ ಊಟಕ್ಕೆ ಹೋಗಿದ್ದರು. ಅವರನ್ನು ಕರೆ ಮಾಡಿ ಬರುವಂತೆ ತಿಳಿಸಲಾಯಿತು.

ಸ್ವಲ್ಪ ಹೊತ್ತು ಕಳೆದು ಅವರು ಕಚೇರಿಗೆ ಬಂದಾಗ ಜತೆಗೆ ಸಮಾಜ ಸೇವಕ ಹಾಗೂ ಬಿಗ್‌ ಬಾಸ್‌ ಸೀಸನ್‌ 9ನಲ್ಲಿ ಅವರ ಜತೆಗಿದ್ದ ಪ್ರಶಾಂತ್‌ ಸಂಬರ್ಗಿ ಕೂಡಾ ಬಂದಿದ್ದರು. ಆರ್ಯವರ್ಧನ್‌ ಗುರೂಜಿ ಅವರ ಬಳಿ ಪೆಂಡೆಂಟ್ ಬಗ್ಗೆ ವಿಚಾರಿಸಲಾಯಿತು.

ಆರ್ಯವರ್ಧನ್‌ ಗುರೂಜಿ ಅವರಲ್ಲಿದ್ದ ಹುಲಿಯುಗುರಿನಂಥ ವಸ್ತುವನ್ನು ವಶಕ್ಕೆ ಪಡೆದುಕೊಂಡ ಅಧಿಕಾರಿಗಳು ಅದನ್ನು ಜುವೆಲ್ಲರಿ ಶಾಪ್‌ಗೆ ತೆಗೆದುಕೊಂಡು ಹೋಗಿ ಅದರ ಮೇಲಿದ್ದ ಚಿನ್ನಾಭರಣವನ್ನು ಬೇರ್ಪಡಿಸಿ ಪರಿಶೀಲನೆ ನಡೆಸಿದರು. ಹುಲಿ ಉಗುರಿನ ವಿಚಾರವಾಗಿ ಸತತ ಮೂರು ಗಂಟೆಗಳ ಕಾಲ ಗುರೂಜಿಯಿಂದ ಹೇಳಿಕೆ ಪಡೆದು ನೋಟಿಸ್ ನೀಡಿದರು.

ಈ ನಡುವೆ ಅಧಿಕಾರಿಗಳ ದಾಳಿಯ ಬಳಿಕ ಹೇಳಿಕೆ ನೀಡಿದ ಆರ್ಯವರ್ಧನ್ ಗುರೂಜಿ, ನಾನು ಬಿಗ್ ಬಾಸ್ ನಲ್ಲಿದ್ದಾಗ ಮಾತ್ರ ಇದನ್ನು ಧರಿಸಿದ್ದೆ. ಹಾಗು ಇದೊಂದು ತ್ರಿಶೂಲ ಅಷ್ಟೆ. ಸತ್ತ ಹೆಣಗಳ ಅವಶೇಷಗಳನ್ನು ನಾವು ಧರಿಸುವುದಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.

ಇದನ್ನೂ ಓದಿ: Tiger Nail : ಹುಲಿ ಉಗುರು ಸಿಕ್ಕ ಸೆಲೆಬ್ರಿಟಿಗಳಿಗೆ ಜೀವದಾನ?; ಸರ್ಕಾರಕ್ಕೆ ಮರಳಿಸಲು ಅಂತಿಮ ಚಾನ್ಸ್‌?

ಹಿಂದುಗಳನ್ನು ಹೆದರಿಸುವ ಪ್ರಯತ್ನ ಎಂದ ಸಂಬರ್ಗಿ

ಈ ನಡುವೆ ಆರ್ಯವರ್ಧನ್‌ ಗುರೂಜಿ ಅವರ ಜತೆಗಿದ್ದ ಪ್ರಶಾಂತ್‌ ಸಂಬರ್ಗಿ ಅವರು ಈ ದಾಳಿಗಳ ಹಿಂದೆ ಕಾಂಗ್ರೆಸ್‌ನ ಹಿಂದು ವಿರೋಧಿ ಧೋರಣೆ ಇದೆ ಎಂದು ಆಪಾದನೆ ಮಾಡಿದರು.

ಕಾಂಗ್ರೆಸ್‌ ಸರ್ಕಾರ ಬೇಕೆಂದೇ ಈ ರೀತಿಯ ದಾಳಿಗೆ ಕುಮ್ಮಕ್ಕು ಕೊಡ್ತಿದೆ‌. ಹಿಂದೂಗಳನ್ನು ಹೆದರಿಸಲೆಂದೇ ಅಧಿಕಾರಿಗಳನ್ನು ಕಳುಹಿಸಲಾಗುತ್ತಿದೆ. ವಿನಯ್ ಗುರೂಜಿ ಆಗಿರಬಹುದು, ಆರ್ಯವರ್ಧನ್ ಆಗಿರಬಹುದು,‌ ಸಂಸದ ಜಗ್ಗೇಶ್ ಆಗಿರಬಹುದು ಹೀಗೆ ಹಿಂದೂಗಳನ್ನು ಟಾರ್ಗೆಟ್‌ ಮಾಡಿ ಸರ್ಕಾರ ದಾಳಿ ಮಾಡುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರು ಆಕ್ರೋಶ ವ್ಯಕ್ತಪಡಿಸಿದರು.

Exit mobile version