ಬೆಂಗಳೂರು: ಹುಲಿಯ ಉಗುರಿನ ಪೆಂಡೆಂಟ್ (Tiger nail pendent) ಧರಿಸಿದ ಕಾರಣಕ್ಕೆ ಕೆಂಗಣ್ಣಿಗೆ ಗುರಿಯಾಗಿರುವ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಮನೆಗೆ ಅರಣ್ಯಾಧಿಕಾರಿಗಳು ಬುಧವಾರ ದಾಳಿ ಮಾಡಿದ್ದಾರೆ. ಈ ವೇಳೆ ಚಿತ್ರನಟ ದರ್ಶನ್ (Actor Darshan), ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮತ್ತು ನಟ ಜಗ್ಗೇಶ್ (Actor Jaggesh) ಅವರ ಮನೆಯಲ್ಲಿ ಪೆಂಡೆಂಟ್ ಸಿಕ್ಕಿದ್ದು, ಅದನ್ನು ವಶಕ್ಕೆ ಪಡೆಯಲಾಗಿದೆ. ರಾಕ್‌ಲೈನ್ ವೆಂಕಟೇಶ್ )Rockline Venkatesh) ಅವರ ವಿದೇಶಕ್ಕೆ ಹೋಗಿದ್ದು, ಅವರ ಅನುಪಸ್ಥಿತಿಯಲ್ಲಿ ಜಾಲಾಡಿದರೂ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ. ಇದೀಗ ಅಧಿಕಾರಿಗಳ ವಶವಾದ ಮೂರೂ ಪೆಂಡೆಂಟ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಅದರಲ್ಲಿರುವುದು ನಿಜವಾದ ಹುಲಿ ಉಗುರೇ, ಕೃತಕವೇ ಎನ್ನುವುದನ್ನು ಪತ್ತೆ ಹಚ್ಚಬೇಕಾಗಿದೆ. ಇದರ ಸತ್ಯಾಸತ್ಯತೆ ಬಯಲಾದ ಬಳಿಕ ಮುಂದಿನ ಹೆಜ್ಜೆ ಇಡಬೇಕಾಗಿದೆ.
ರಾಕ್‌ಲೈನ್ ಮನೆಯಲ್ಲಿ ಇಂಚಿಂಚು ಶೋಧ
ರಾಕ್‌ಲೈನ್ ವೆಂಕಟೇಶ್ ಅವರ ಮನೆಗೆ ಅರಣ್ಯಾಧಿಕಾರಿಗಳು ನೋಟಿಸ್ ಮತ್ತು ಸರ್ಚ್ ವಾರಂಟ್ ಸಹಿತ ಪ್ರವೇಶ ಮಾಡಿದ್ದರು. ಆದರೆ, ಮನೆಯಲ್ಲಿ ರಾಕ್ ಲೈನ್ ಅವರು ಇರಲಿಲ್ಲ. ಅವರ ಎರಡನೇ ಪುತ್ರ ಡಾ. ಅಭಿಲಾಷ್ ಮತ್ತು ಅವರ ವೈದ್ಯ ಪತ್ನಿ ಆಗಮಿಸಿ ತಪಾಸಣೆಗೆ ಸಹಕಾರ ನೀಡಿದರು. ಸುಮಾರು ಮೂರು ಗಂಟೆಗಳ ಕಾಲ ಮನೆಯೊಳಗೆ ಮತ್ತು ಪಾರ್ಕಿಂಗ್‌ನಲ್ಲಿದ್ದ ಕಾರುಗಳನ್ನು ಜಾಲಾಡಿದರು.
ಮೂರಂತಸ್ತಿನ ಮನೆಯ ಎಲ್ಲ ಕಡೆ ಜಾಲಾಡಿದರೂ ಅವರಿಗೆ ಯಾವುದೇ ಹುಲಿ ಉಗುರಿನ ಪೆಂಡೆಂಟ್ ಸಿಕ್ಕಿಲ್ಲ. ವಿದೇಶದಲ್ಲಿರುವ ಅವರನ್ನು ಸಂಪರ್ಕಿಸಲು ಪುತ್ರ ಅಭಿಲಾಷ್ ಮತ್ತು ಅರಣ್ಯಾಧಿಕಾರಿಗಳು ಪ್ರಯತ್ನಿಸಿದರೂ ಅವರು ಸಿಗಲಿಲ್ಲ. ರಾಕ್‌ಲೈನ್ ವೆಂಕಟೇಶ್ ಅವರು ವಿದೇಶದಿಂಧ ಬಂದ ಬಳಿಕ ಮಾಹಿತಿ ಕಲೆ ಹಾಕಲಾಗುವುದು ಎಂದು ಅರಣ್ಯಾಧಿಕಾರಿ ಚಿದಾನಂದ್ ತಿಳಿಸಿದ್ದಾರೆ.
ರಾಕ್‌ಲೈನ್ ಪುತ್ರ ಅಭಿಲಾಷ್ ಹೇಳಿದ್ದೇನು?
ʻʻಅಧಿಕಾರಿಗಳು ಬಂದು ಮನೆ ಸರ್ಚ್ ಮಾಡಿದರು. ಅಪ್ಪ ವಿದೇಶ ಪ್ರವಾಸದಲ್ಲಿ ಇದ್ದಾರೆ, ಅವರಿಗೆ ಕಾಂಟ್ಯಾಕ್ಟ್ ಮಾಡೋ ಪ್ರಯತ್ನ ಮಾಡಿದೆ. ಆದ್ರೆ ಅವರಿಗೆ ಸಂಪರ್ಕ ಮಾಡಲು ಆಗಲಿಲ್ಲ, ಅಧಿಕಾರಿಗಳು ಸಂಪರ್ಕ ಮಾಡಿದ್ರು ಆಗಲಿಲ್ಲ. ಸರ್ಚ್ ವಾರೆಂಟ್ ಕೊಟ್ಟು ಮನೆ ಪರಿಶೀಲನೆ ಮಾಡಿದರು. ಅವರು ಹುಡುಕುತ್ತಿದ್ದ ಪೆಂಡೆಂಟ್ ಸಿಕ್ಕಿಲ್ಲ. ಅಪ್ಪ ಬಂದ ಬಳಿಕ ಅಧಿಕಾರಿಗಳನ್ನು ಭೇಟಿ ಮಾಡ್ತಾರೆʼʼ ಎಂದು ರಾಕ್‌ಲೈನ್ ಪುತ್ರ ಅಭಿಲಾಶ್ ಹೇಳಿದರು.
ʻʻನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಇಲ್ಲ. ನಾನು ವೈದ್ಯ, ನನ್ನ ಪತ್ನಿಯೂ ಡಾಕ್ಟರ್. ಸೋ ನನಗೆ ಈ ಫಿಲ್ಮ್ ಇಂಡಸ್ಟ್ರಿ ಬಗ್ಗೆ ಅಷ್ಟು ಗೊತ್ತಿಲ್ಲ,. ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿರೋದು ನಾನು ನೋಡಿಲ್ಲʼʼ ಎಂದು ರಾಕ್‌ಲೈನ್ ಮಗ ಅಭಿಲಾಷ್ ಹೇಳಿದ್ದಾರೆ.
ಜಗ್ಗೇಶ್ ಪೆಂಡೆಂಟ್‌ನ ಉಗುರು ಕೊಳೆದು ಹೋಗಿದೆಯಂತೆ
ಚಿತ್ರನಟ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ಜಗ್ಗೇಶ್ ಅವರ ಮಲ್ಲೇಶ್ವರಂ ಮನೆಯಲ್ಲಿ ಡಿಸಿಎಫ್ ರವೀಂದ್ರ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ನಡೆಯಿತು. ದಾಳಿಯ ವೇಳೆ ಜಗ್ಗೇಶ್ ಅವರು ಮನೆಯಲ್ಲಿ ಇರಲಿಲ್ಲ. ಆದರೆ, ಪೆಂಡೆಂಟ್‌ನ್ನು ಮನೆಯಲ್ಲಿ ಇಟ್ಟುಹೋಗಿದ್ದರು. ಅದನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ʻʻ40 ವರ್ಷಗಳ ಹಳೆಯದ್ದಾದರಿಂದ ಪೆಂಡೆಂಟ್ ಕೊಳೆತ ಸ್ಥಿತಿಯಲ್ಲಿದೆ. ಎಫ್‌ಎಸ್‌ಎಲ್ ರಿಪೋರ್ಟ ಬಂದ ನಂತರವೇ ಕ್ರಮ ಕೈಗೊಳ್ಳುತ್ತೇವೆ. ವರ್ತೂರ್ ಸಂತೋಷ್ ಅವರ ಬಂಧನವಾದಾಗ ಅದು ಹುಲಿಯದ್ದೇ ಉಗುರು ಅಂತ ನಮಗೆ ಗೊತ್ತಿತ್ತು . ಆದರೆ ಜಗ್ಗೇಶ್ ಅವರ ಪೆಂಡೆಂಡ್ ಬಗ್ಗೆ ನಮಗೆ ಖಾತ್ರಿಯಾಗಬೇಕಿದೆʼʼ ಎಂದು ಅರಣ್ಯ ವಲಯ ಸಂರಕ್ಷಣಾ ಅಧಿಕಾರಿ ರವೀಂದ್ರ ಹೇಳಿದರು.
ನಾವು ನೋಟಿಸ್ ಕೊಟ್ಟಾಗ ಜಗ್ಗೇಶ್ ಅವರ ಪತ್ನಿ ಪರಿಮಳಾ ಅವರು ಲಾಕೆಟ್ ಕೊಟ್ಟಿದ್ದಾರೆ. ಹೀಗಾಗಿ ಯಾವುದೇ ತಪಾಸಣೆ ನಡೆಸಿಲ್ಲ ಎಂದು ರವೀಂದ್ರ ಹೇಳಿದರು.
ಜಗ್ಗೇಶ್ ಅವರು ಇದು ತಾಯಿ ಕೊಟ್ಟಿದ್ದು, ಪೂಜೆ ಮಾಡಿ ಇಟ್ಟುಕೊಂಡಿದ್ದೇವೆ ಎಂದಿದ್ದರು. ಹೀಗಾಗಿ ಡಿಎನ್ ಎ ಪರೀಕ್ಷೆಗಾಗಿ ಮಾಡಲು ಡೆಹ್ರಾಡೂನ್ ಗೆ ಲ್ಯಾಬ್ ಗೆ ಕಳುಹಿಸಲಾಗುತ್ತದೆ. ಇದು ನಿಜವಾದ ಹುಲಿಯುಗುರು ಆಗಿದ್ದರೆ ಕರೆಸಿ ವಿಚಾರಣೆ ನಡೆಸಲಾಗುತ್ತದೆ ಎಂದು ರವೀಂದ್ರ ಹೇಳಿದರು.
ದರ್ಶನ್ ಮನೆಯಲ್ಲಿ ಪತ್ತೆಯಾಯಿತು ಪೆಂಡೆಂಟ್
ಚಿತ್ರ ನಟ ದರ್ಶನ್ ಅವರ ಮನೆಗೆ ಹೋದಾಗ ಸ್ವತಃ ದರ್ಶನ್ ಅವರೇ ಇದ್ದರು. ಅವರು ತಮ್ಮಲ್ಲಿದ್ದ ಲಾಕೆಟನ್ನು ನೀಡಿದ್ದಾರೆ. ಇದರ ಹೊರತಾಗಿಯೂ ಅಧಿಕಾರಿಗಳು ಸ್ವಲ್ಪ ಶೋಧ ನಡೆಸಿದ್ದಾರೆ. ಇದೀಗ ಅದು ನಿಜವಾದ ಹುಲಿಯುಗುರೇ ಎಂಬ ಪರಿಶೀಲನೆ ನಡೆಯಬೇಕಾಗಿದೆ. ಅಧಿಕಾರಿಗಳು ಬಂದು ಹೋದ ಮೇಲೆ ದರ್ಶನ್ ಮನೆಯಿಂದ ಹೊರಗೆ ಹೋದರು. ಆದರೆ, ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಲಿಲ್ಲ.
ಇದನ್ನೂ ಓದಿ: Tiger Nail : ಸೆಲೆಬ್ರಿಟಿಗಳಿಗೆ ಉಗುರು ಸಂಕಷ್ಟ; ದರ್ಶನ್, ರಾಕ್‌ಲೈನ್, ಜಗ್ಗೇಶ್, ನಿಖಿಲ್ ಮನೆಗೇ ನೋಟಿಸ್
ಎಚ್.ಡಿ ಕುಮಾರಸ್ವಾಮಿ ಮನೆಗೂ ಅಧಿಕಾರಿಗಳ ಭೇಟಿ
ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಮನೆಗೂ ಅಧಿಕಾರಿಗಳು ಭೇಟಿ ನೀಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಅದಕ್ಕಿಂತ ಮೊದಲೇ ಇದು ಮದುವೆಯಲ್ಲಿ ಸಿಕ್ಕಿದ ಕೃತಕ ಉಗುರಿನ ಪೆಂಡೆಂಟ್ ಎಂದು ಹೇಳಿದ್ದರು. ಅಧಿಕಾರಿಗಳು ಬಂದು ಅದನ್ನು ವಶಪಡಿಸಿಕೊಂಡರು.
ಅಧಿಕಾರಿಗಳ ನಿರ್ಗಮನದ ಬಳಿಕ ಮಾಧ್ಯಮಗಳನ್ನು ಕರೆಸಿಕೊಂಡು ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಇದು ಸಿಂಥೆಟಿಕ್ ಉಗುರು ಎಂದರು.